More

    ಆಪತ್ತು ತಂದೀತು, ಆನ್​ಲೈನ್ ಕ್ಲಾಸು

    (((ಆನ್​ಲೈನ್ ಕ್ಲಾಸ್​ಗಳು ತಂದಿಟ್ಟ ಎಡವಟ್ಟುಗಳು ಒಂದೆರಡಲ್ಲ. ಕೆಲವರು ಆನ್​ಲೈನ್ ತರಗತಿಗೆ ಶುಲ್ಕ ಪಾವತಿ ಮಾಡಲು ಹೋಗಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿಸಿಕೊಂಡಿದ್ದಾರೆ. ಶಾಲೆಯ ಬದಲು ಮತ್ಯಾರಿಗೋ ಹಣ ವರ್ಗಾಯಿಸಿದ್ದಾರೆ. ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಸೇರಿಕೊಂಡು ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಟ್ಟವರಿದ್ದಾರೆ. ಆದ್ದರಿಂದ ಪುನಃ ಶುರುವಾಗಲಿರುವ ಆನ್​ಲೈನ್ ಕ್ಲಾಸ್​ಗಳಿಗೆ ಪಾಲಕರು ಅದರಲ್ಲೂ ಹೆಚ್ಚಾಗಿ ಅಮ್ಮಂದಿರು ಹೇಗೆ ಸಿದ್ಧರಾಗಬೇಕು?)))

    | ಗೋವಿಂದರಾಜು ಚಿನ್ನಕುರ್ಚಿ

    ಕರೊನಾ 2ನೇ ಅಲೆಯಿಂದ ಈ ಸಾಲಿನ ಶೈಕ್ಷಣಿಕ ವರ್ಷವೂ ಆನ್​ಲೈನ್ ತರಗತಿಗೆ ಸೀಮಿತವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಶಾಲಾ-ಕಾಲೇಜುಗಳು ಸಿದ್ಧತೆ ನಡೆಸುತ್ತಿವೆ. ಆದರೆ ಕಳೆದ ಬಾರಿಯ ಆನ್​ಲೈನ್ ಕ್ಲಾಸ್​ಗಳು ತಂದಿಟ್ಟಿರುವ ಹಲವಾರು ಎಡವಟ್ಟುಗಳಿಂದಾಗಿ ಪಾಲಕರು ಅದರಲ್ಲಿಯೂ ಹೆಚ್ಚಾಗಿ ಅಮ್ಮಂದಿರು ಸಾಕಷ್ಟು ಪೂರ್ವ ತಯಾರಿ ನಡೆಸಬೇಕಿದೆ. ಸ್ವಲ್ಪವೇ ಎಡವಟ್ಟಾದರೂ ಮಕ್ಕಳು ಸೈಬರ್ ಕ್ರೈಮ್​ಗೆ ಅಥವಾ ಬ್ಲ್ಯಾಕ್​​ವೆುೕಲ್​ಗೆ ಒಳಗಾಗುವ ಸಾಧ್ಯತೆಗಳಿವೆ.

    ಮೊದಲಿಗೆ ನೆನಪಿಡಬೇಕಿರುವ ಅಂಶ ಎಂದರೆ, ಆನ್​ಲೈನ್ ತರಗತಿಗಳ ಲಿಂಕ್​ಗಳನ್ನು ಮೊದಲೇ ಖಚಿತಪಡಿಸಿಕೊಳ್ಳುವುದು. ಲಿಂಕ್ ಎಡವಟ್ಟಿನಿಂದಲೇ ಕಳೆದ ಬಾರಿ ಹಲವಾರು ಮಂದಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿಸಿಕೊಂಡಿದ್ದಾರೆ. ಶಾಲೆಯವರೇ ಕರೆ ಮಾಡಿದ್ದಾರೆ ಎಂದು ನಂಬಿ, ಇಲ್ಲವೇ ತಮಗೆ ಬಂದಿರುವ ಲಿಂಕ್​ಗಳು ಶಾಲೆಯದ್ದೇ ಎಂದುಕೊಂಡು ತರಗತಿಗೆ ನೋಂದಣಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆ ವೇಳೆ ಬ್ಯಾಂಕ್ ಖಾತೆಯ ವಿವರ, ಆಧಾರ್ ನಂಬರ್, ಒಟಿಪಿ ಇತ್ಯಾದಿಗಳನ್ನು ನೀಡಿ ವಂಚನೆಗೆ ಒಳಗಾಗಿದ್ದಾರೆ. ಆದ್ದರಿಂದ ಲಿಂಕ್ ಅಥವಾ ಕರೆಯ ವಿಶ್ವಾಸಾರ್ಹತೆಯನ್ನು ಮೊದಲೇ ಖಚಿತಪಡಿಸಿಕೊಳ್ಳುವುದು ಬಹುಮುಖ್ಯವಾಗಿ ಆಗಬೇಕಾದ ಕೆಲಸ.

    ತಮ್ಮ ಶಾಲೆ ಅಥವಾ ಶೈಕ್ಷಣಿಕ ಸಂಸ್ಥೆಯಿಂದ ಬರುವ ಲಿಂಕ್​ನ ಮೂಲಕ ಆನ್​ಲೈನ್ ತರಗತಿಗೆ ನೊಂದಣಿ ಮಾಡಿಕೊಳ್ಳುವ ಮೊದಲು ಈಗಾಗಲೇ ನಿಮ್ಮ ಬಳಿ ಇರುವ ಶಾಲೆಯ ಸ್ಥಿರ ದೂರವಾಣಿ ಸಂಖ್ಯೆಗೆ ಅಥವಾ ತರಗತಿಯ ಶಿಕ್ಷಕಿಯರಿಗೆ ಕರೆ ಮಾಡಿ ಲಿಂಕ್ ಖಚಿತಪಡಿಸಿಕೊಳ್ಳಬೇಕು. ಅದರಲ್ಲಿ ಸೂಚಿಸಿರುವ ಬ್ಯಾಂಕ್ ಖಾತೆಗೆ ಮಾತ್ರ ಶುಲ್ಕ ಪಾವತಿ ಮಾಡಬೇಕು. ಲಾಗಿನ್ ಪಾಸ್​ವರ್ಡ್ ಯಾರೊಂದಿಗೂ ಯಾವ ಕಾರಣಕ್ಕೂ ಎಂಥದೇ ಸಂದರ್ಭದಲ್ಲೂ ಹಂಚಿಕೊಳ್ಳಬಾರದು. ಗೂಗಲ್​ನಲ್ಲಿ ಶಾಲೆಯ ಮೊಬೈಲ್ ಫೋನ್ ನಂಬರ್ ಅಥವಾ ಸ್ಥಿರ ದೂರವಾಣಿ ನಂಬರ್ ಸರ್ಚ್ ಮಾಡಿ ಕರೆ ಮಾಡಬಾರದು. ಯಾಕೆಂದರೆ ಶಾಲೆಯ ಹೆಸರಿನಲ್ಲಿ ಆ ನಕಲಿ ನಂಬರ್​ಗಳನ್ನು ಸೈಬರ್​ಕಳ್ಳರೇ ಹಾಕಿರುವ ಸಾಧ್ಯತೆ ಇರುತ್ತದೆ.

    ಗೋಡೆ ಇರಲಿ

    ತರಗತಿಗೆ ಕುಳಿತಾಗ ಹಿಂಬದಿ ಗೋಡೆ ಇರಲಿ. ಇಲ್ಲದಿದ್ದರೆ ಮನೆಯ ಇತರ ಸದಸ್ಯರು ಓಡಾಡುವುದು ಅಥವಾ ಮತ್ಯಾವುದೋ ಕೆಲಸದಲ್ಲಿ ತೊಡಗಿರುವುದು ಎಲ್ಲರಿಗೂ ಕಾಣಿಸಬಹುದು. ಒಮ್ಮೆ ಮೊಬೈಲ್ ಫೋನ್, ಕಂಪ್ಯೂಟರ್ ಇಟ್ಟರೆ ಪದೇಪದೆ ಜಾಗ ಬದಲಾಯಿಸಬೇಡಿ. ತರಗತಿ ಶುರುವಾದ ಮೇಲೆ ಸೌಂಡ್ ಮ್ಯೂಟ್ ಮಾಡಿಕೊಳ್ಳಿ. ಶಿಕ್ಷಕರು ಪ್ರಶ್ನೆ ಕೇಳಿದಾಗ ಮಾತ್ರ ಆನ್ ಮಾಡಿ ಪ್ರತಿಕ್ರಿಯೆ ನೀಡುವುದು ಒಳಿತು.

    ಅನ್ಯರಿಗೆ ಅವಕಾಶ ಕೊಡಬೇಡಿ

    ಆನ್​ಲೈನ್ ತರಗತಿಗೆ ನೋಂದಣಿ ಮಾಡಿ ಕೊಳ್ಳುವ ಸಂದರ್ಭದಲ್ಲಿ ಮತ್ತು ವಾಟ್ಸ್​ಆಪ್ ಗ್ರೂಪ್​ಗೆ ಸೇರಿಸಿಕೊಳ್ಳುವಾಗ ವಿದ್ಯಾರ್ಥಿಗಳ ಮೊಬೈಲ್ ನಂಬರನ್ನೇ ಬಳಸಬೇಕು. ಅವಕಾಶ ಇಲ್ಲವಾದರೆ ಮಾತ್ರ ತಂದೆ-ತಾಯಿಯ ಮೊಬೈಲ್ ಸಂಖ್ಯೆ ಬಳಸಿ. ಸೈಬರ್ ಕ್ರೈಮ್​ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಆನ್​ಲೈನ್ ಕ್ಲಾಸ್ ಮೇಲೆ ನಿಗಾ ವಹಿಸಬೇಕು ಎನ್ನುತ್ತಾರೆ ಸಿಐಡಿ ಸೈಬರ್ ಕ್ರೈಮ್​ ವಿಭಾಗದ ಪೊಲೀಸರು.

    ಶಿಕ್ಷಕರ ಪಾತ್ರವೂ ಮುಖ್ಯ

    ಆನ್​ಲೈನ್ ತರಗತಿಗೆ ಹಾಜರಾಗಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು ಪರಿಶೀಲನೆ ಮಾಡಬೇಕು. ಅನ್ಯರ ಹಾಜರಾತಿಗೆ ಅವಕಾಶ ಕೊಡಬಾರದು. ವಿದ್ಯಾರ್ಥಿಗಳ ವಾಟ್ಸ್​ಆಪ್ ಗ್ರೂಪ್​ನಲ್ಲಿ ಬೇರೆಯವರನ್ನು ಸೇರ್ಪಡೆ ಮಾಡಬಾರದು. ಇದರಿಂದ ವಿದ್ಯಾರ್ಥಿಗಳ ಮೊಬೈಲ್ ನಂಬರ್ ಸೋರಿಕೆ ಆಗುತ್ತದೆ. ಆನ್​ಲೈನ್ ತರಗತಿಯಲ್ಲಿ ಯಾರೆಲ್ಲ ಹಾಜರಾಗಿದ್ದಾರೆ ಎಂಬುದನ್ನು ಕಾಲಕಾಲಕ್ಕೆ ಗಮನಿಸಬೇಕು.

    ಬೇರೆ ಮೊಬೈಲ್, ಲ್ಯಾಪ್​ಟಾಪ್

    ಆನ್​ಲೈನ್ ತರಗತಿಗಾಗಿಯೇ ಪ್ರತ್ಯೇಕ ಮೊಬೈಲ್ ಅಥವಾ ಲ್ಯಾಪ್​ಟಾಪ್ ಇದ್ದರೆ ಒಳಿತು. ಅಥವಾ ಹೊಸ ಸಿಮ್ ಕಾರ್ಡ್​ ಖರೀದಿಸಿ ಅದಕ್ಕೆ ಆನ್​ಲೈನ್ ಬ್ಯಾಂಕ್​ಗೆ, ಆಧಾರ್ ಇನ್ನಿತರ ವ್ಯವಹಾರಕ್ಕೆ ಬಳಸದೆ ಕೇವಲ ಆನ್​ಲೈನ್ ತರಗತಿಗೆ ಮಾತ್ರ ಬಳಕೆ ಮಾಡುವುದು ಉತ್ತಮ. ಅಪ್ಪಿತಪ್ಪಿ ವೆಬ್​ಸೈಟ್ ಹ್ಯಾಕ್ ಮಾಡಿ ಸೈಬರ್ ಕಳ್ಳರು ಮೊಬೈಲ್ ಡೇಟಾ ಕದ್ದರೂ ಅದರಿಂದ ಬ್ಯಾಂಕ್ ಖಾತೆ ಪ್ರವೇಶ ಮಾಡುವ ಸಾಧ್ಯತೆ ಇರುವುದಿಲ್ಲ.

    ಬೇರೆ ಸ್ಕ್ರೀನ್ ಆನ್ ಮಾಡಬೇಡಿ

    ಆನ್​ಲೈನ್ ತರಗತಿ ವೇಳೆ ಮೊಬೈಲ್​ನಲ್ಲಿ ವಾಟ್ಸ್​ಆಪ್, ಫೇಸ್​ಬುಕ್, ಮೊಬೈಲ್ ಬ್ಯಾಂಕಿಂಗ್ ಓಪನ್ ಮಾಡಿದರೆ ಹ್ಯಾಕರ್ಸ್ ಕನ್ನ ಹಾಕುವುದಕ್ಕೆ ಅವಕಾಶವಾಗುತ್ತದೆ. ವಿದ್ಯಾರ್ಥಿಗಳು ಹಾಟ್​ಸ್ಪಾಟ್, ವೈ-ಫೈ, ಡಾಂಗಲ್, ಮೊಬೈಲ್ ಮೂಲಕ ಇಂಟರ್​ನೆಟ್ ಆನ್ ಮಾಡಿಕೊಂಡಾಗ ಹ್ಯಾಕರ್ಸ್ ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ಆಗ ವಿದ್ಯಾರ್ಥಿಗಳು ಬೇರೆ ಸ್ಕ್ರೀನ್ ತೆರೆದಾಗ ಅದರ ಡೇಟಾ ಕಳವು ಮಾಡಲು ಸುಲಭವಾಗುತ್ತದೆ. ಜತೆಗೆ ಒಟಿಪಿ ಬಂದರೂ ಅದನ್ನು ಪಡೆದು ಸೈಬರ್ ಕ್ರೈಮ್​ಗೆ ಬಳಸಿಕೊಳ್ಳುತ್ತಾರೆ.

    ಉಡುಪಿನ ಬಗ್ಗೆ ಕಾಳಜಿ

    ಆನ್​ಲೈನ್ ಕ್ಲಾಸ್ ವೇಳೆ ಯೂನಿಫಾರ್ಮ್​ ಕಂಪಲ್ಸರಿ ಇಲ್ಲದಿದ್ದರೆ ಅಮ್ಮಂದಿರು ತಮ್ಮ ಮಕ್ಕಳ, ಅದರಲ್ಲಿಯೂ ಹೆಚ್ಚಾಗಿ ಹೆಣ್ಣುಮಕ್ಕಳ ಉಡುಪಿನ ಬಗ್ಗೆ ಕಾಳಜಿ ವಹಿಸಿ. ಮನೆಯಲ್ಲಿ ಮಕ್ಕಳು ಹೇಗಿದ್ದರೂ ಚೆನ್ನ. ಅವರು ಹಾಕಿಕೊಳ್ಳುವ ಬಟ್ಟೆಗಳು ಎಲ್ಲವೂ ಮನೆಯಲ್ಲಿ ಸಭ್ಯವೇ ಎನಿಸಬಹುದು. ಆದರೆ ಆನ್​ಲೈನ್ ಕ್ಲಾಸ್ ಮೇಲೆ ಹಲವರ ಕಣ್ಣು ನೆಟ್ಟಿರುವ ಕಾರಣ, ಮಕ್ಕಳ ಡ್ರೆಸ್ ಮೇಲೆ ನಿಮ್ಮ ನಿಗಾ ಇರಲಿ. ಜತೆಗೆ, ಮೊಬೈಲ್​ನಲ್ಲಿ ಅಥವಾ ಕಂಪ್ಯೂಟರ್​ನಲ್ಲಿ ಕ್ಯಾಮೆರಾ ಆನ್ ಮಾಡಿದಾಗ ವಿದ್ಯಾರ್ಥಿಯ ಮುಖ ಮಾತ್ರ (ಪೋಟ್ರೇಟ್) ಕಾಣುವಂತೆ ಇರಲಿ.

    ಮೊಬೈಲ್​ಗೆ ಖಾಸಗಿ ಆ್ಯಪ್​ ಲಿಂಕ್

    ಶಿಕ್ಷಣ ಸಂಸ್ಥೆಯಲ್ಲದೆ ಖಾಸಗಿ ಆಪ್ ಆಧಾರಿತ ಕ್ಲಾಸ್​ಗಳ ಹತ್ತಾರು ಲಿಂಕ್​ಗಳು ಮೊಬೈಲ್​ಗಳಿಗೆ ಬರುತ್ತಿರುತ್ತವೆ. ‘ನೀವು ಲಕ್ಕಿ ಡ್ರಾನಲ್ಲಿ ಆಯ್ಕೆಯಾಗಿದ್ದೀರಿ, ನಿಮಗೆ ವಿದ್ಯಾರ್ಥಿ ವೇತನ ಸಿಗಲಿದೆ’ ಎಂದು ಆ ಮೆಸೇಜ್​ಗಳಲಿ, ಲಿಂಕ್​ಗಳಲ್ಲಿ ಆಮಿಷ ಒಡ್ಡಿರುತ್ತಾರೆ. ಲಿಂಕ್ ಮೇಲೆ ಒತ್ತಿ ನೋಂದಣಿ ಮಾಡುವಂತೆ ತಿಳಿಸಿ ಮೊಬೈಲ್, ಆಧಾರ್, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರವನ್ನು ಪಡೆದು ವಂಚನೆ ಮಾಡುತ್ತಾರೆ. ನೋಂದಾಯಿತ ಮತ್ತು ಅಧಿಕೃತ ಆ್ಯಪ್​ ಆಧಾರಿತ ಸಂಸ್ಥೆ ಬಗ್ಗೆ ಮೊದಲು ತಿಳಿದುಕೊಂಡು ಆನಂತರ ವ್ಯವಹಾರ ನಡೆಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts