ನವದೆಹಲಿ: ಪುರುಷರ ಟಿ20 ವಿಶ್ವಕಪ್ ಟೂರ್ನಿಯನ್ನು ಯುಎಇಯಲ್ಲಿ ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಆಯೋಜಿಸಲು ಐಸಿಸಿ ತೀರ್ಮಾನಿಸಿದೆ ಎಂದು ವರದಿಯಾಗಿದೆ. 14ನೇ ಐಪಿಎಲ್ ಭಾಗ-2 ಮುಕ್ತಾಯಗೊಂಡ (ಅ.15) ಎರಡು ದಿನಗಳ ಬಳಿಕ ಟೂರ್ನಿ ಆರಂಭಗೊಳ್ಳಲಿದೆ. ಐಪಿಎಲ್ ಭಾಗ-2 ಯುಎಇಯಲ್ಲೇ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15ರವರೆಗೆ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿವೆ.
ಇದನ್ನೂ ಓದಿ: ಸಂಭ್ರಮದಲ್ಲಿ ಮುಳುಗಿದ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ತಂಡ
ಭಾರತದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯೂ ಕೋವಿಡ್-19ರಿಂದಾಗಿ ಯುಎಇಗೆ ಸ್ಥಳಾಂತರಗೊಳ್ಳಲಿದೆ ಎಂದು ಹೇಳಲಾಗಿತ್ತು. ಟೂರ್ನಿ ಸ್ಥಳಾಂತರಿಸುವ ಕುರಿತು ಬಿಸಿಸಿಐ ಅಧಿಕೃತವಾಗಿ ಐಸಿಸಿಗೆ ಇನ್ನಷ್ಟೇ ತಿಳಿಸಬೇಕಿದೆ. ಬಿಸಿಸಿಐ ತೀರ್ಮಾನಕ್ಕೂ ಮುನ್ನವೇ ಯುಎಇಯಲ್ಲಿ ಟೂರ್ನಿ ಆಯೋಜಿಸಲು ಐಸಿಸಿ ಮುಂದಾಗಿದೆ. ಟೂರ್ನಿಯ ಆರಂಭಿಕ ಕೆಲ ಪಂದ್ಯಗಳು ಓಮಾನ್‌ನಲ್ಲಿ ನಡೆಯಲಿವೆ. ಯುಎಇಯಲ್ಲೇ ಚುಟುಕು ಕ್ರಿಕೆಟ್ ವಿಶ್ವಕಪ್ ನಡೆದರೂ ಭಾರತವೇ ಹಕ್ಕುಹೊಂದಿರಲಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.