More

    ಅಂತಾರಾಷ್ಟ್ರೀಯ ಹಾಕಿಗೆ ಕನ್ನಡಿಗ ಎಸ್‌ವಿ ಸುನೀಲ್ ವಿದಾಯ

    ನವದೆಹಲಿ: ಕಳೆದ 14 ವರ್ಷಗಳಿಂದ ರಾಷ್ಟ್ರೀಯ ತಂಡದ ಭಾಗವಾಗಿದ್ದ ಕರ್ನಾಟದ ಎಸ್‌ವಿ ಸುನೀಲ್ ಅಂತಾರಾಷ್ಟ್ರೀಯ ಹಾಕಿಗೆ ಶುಕ್ರವಾರ ವಿದಾಯ ಘೋಷಿಸಿದ್ದಾರೆ. 2014ರ ಏಷ್ಯಾಡ್ ಸ್ವರ್ಣ ಪದಕ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು 32 ವರ್ಷದ ಎಸ್‌ವಿ ಸುನೀಲ್ ವಿಫಲರಾಗಿದ್ದರು. ಡ್ರಾೃಗ್ ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಹಾಗೂ ಡಿಫೆಂಡರ್ ಬೀರೇಂದ್ರ ಲಾಕ್ರಾ ಗುರುವಾರವಷ್ಟೇ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದರು. ಇವರ ಬೆನ್ನಲ್ಲೇ ಕನ್ನಡಿಗ ಎಸ್‌ವಿ ಸುನೀಲ್ ಕೂಡ ನಿವೃತ್ತಿ ಹೇಳಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯವರಾದ ಎಸ್‌ವಿ ಸುನೀಲ್ ರಾಷ್ಟ್ರೀಯ ತಂಡದ ಪರ ಆಡಿರುವ 264 ಪಂದ್ಯಗಳಿಂದ 72 ಗೋಲು ಸಿಡಿಸಿದ್ದರು.

    ಕಳೆದ 14 ವರ್ಷಗಳಿಂದ ರಾಷ್ಟ್ರೀಯ ತಂಡದ ಪರ ಆಡಿದ್ದೇನೆ. ವಿಶ್ರಾಂತಿ ಪಡೆಯಲು ಇದು ಸೂಕ್ತ ಕಾಲ’ ಎಂದು ಸುನೀಲ್ ಹೇಳಿಕೊಂಡಿದ್ದಾರೆ. ರಾಷ್ಟ್ರೀಯ ತಂಡದಿಂದ ಹಿಂದೆ ಸರಿಯುವುದು ಸುಲಭದ ಮಾತಲ್ಲ. ಇದೊಂದು ಕಠಿಣ ನಿರ್ಧಾರವಾಗಿತ್ತು. ಭವಿಷ್ಯದ ಆಟಗಾರರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವೆ ಎಂದು ಹೇಳಿಕೊಂಡಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮೂರು ವರ್ಷ ಸಮಯವಿದ್ದು, ಹಿರಿಯ ಆಟಗಾರನಾಗಿ ಕಿರಿಯರಿಗೆ ದಾರಿ ಮಾಡಿಕೊಡುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ.

    ಎಸ್‌ವಿ ಸುನೀಲ್, 2012ರ ಲಂಡನ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. 2007ರಲ್ಲಿ ಏಷ್ಯಾಕಪ್‌ನಲ್ಲಿ ಆಡುವ ಮೂಲಕ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಸುನೀಲ್, ಬಳಿಕ ರಾಷ್ಟ್ರೀಯ ತಂಡದ ಫಾರ್ವರ್ಡ್ ವಿಭಾಗದಲ್ಲಿ ಕಾಯಂ ಸದಸ್ಯರಾಗಿದ್ದರು. 2011ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ, 2012ರ ಅದೇ ಟೂರ್ನಿಯಲ್ಲಿ ಬೆಳ್ಳಿ ಪದಕ ವಿಜೇತ ತಂಡದ ಸದಸ್ಯರಾಗಿದ್ದರು. ಅಲ್ಲದೆ, 2014ರ ಏಷ್ಯಾಡ್‌ನಲ್ಲಿ ಸ್ವರ್ಣ, 2018ರ ಏಷ್ಯಾಡ್‌ನಲ್ಲಿ ಕಂಚಿನ ಪದಕ ಹಾಗೂ 2017ರ ಏಷ್ಯಾಕಪ್‌ನಲ್ಲಿ ಸ್ವರ್ಣ ಗೆದ್ದ ತಂಡದ ಭಾಗವಾಗಿದ್ದರು. ಅಲ್ಲದೆ, 2016ರ ಹಾಗೂ 2018ರ ಎಫ್ ಐಎಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಬೆಳ್ಳಿ ಪದಕ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 2014ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ‘ಭಾರತ ಹಾಕಿಗೆ ಎಸ್‌ವಿ ಸುನೀಲ್ ಅದ್ಭುತವಾದ ಸೇವೆ ಸಲ್ಲಿಸಿದ್ದಾರೆ. ಯುವ ಆಟಗಾರರಿಗೆ ಅವರೇ ಸ್ಫೂರ್ತಿ. ಕ್ರೀಡೆಯ ಮೇಲೆ ಅಪಾರ ಶಿಸ್ತುಹೊಂದಿದ್ದರು’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನೇಂದ್ರ ನಿಂಗೊಮ್‌ಬಾಮ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts