More

    ಯೋಗ ಕ್ಷೇಮ: ಸೂರ್ಯೋಪಾಸನೆ, ಅಗ್ನಿಹೋತ್ರ ಮತ್ತು ಪರೋಪಕಾರ

    ಯೋಗ ಕ್ಷೇಮ: ಸೂರ್ಯೋಪಾಸನೆ, ಅಗ್ನಿಹೋತ್ರ ಮತ್ತು ಪರೋಪಕಾರ

    ‘ಪರೋಪಕಾರಾರ್ಥಂ ಇದಂ ಶರೀರಂ’ ಅಂದರೆ, ಈ ಶರೀರವು ಪರೋಪಕಾರಕ್ಕಾಗಿಯೇ ಇರುವುದು ಎಂದರ್ಥ. ಸಾಮಾನ್ಯ ಅರ್ಥ ಇತರರಿಗೆ ಸಹಾಯ ಮಾಡು ಎಂದಾದರೆ, ಇಲ್ಲಿ ಪರೋಪಕಾರ ಎಂಬ ಶಬ್ದವು ‘ಪರ + ಉಪ + ಕಾರ’ ಎಂಬ ಪದಗಳ ಜೋಡಣೆಯಾಗಿದೆ. ಪರ ಅಂದರೆ ಪರಮಾತ್ಮ, ಉಪ-ಹತ್ತಿರ, ಕಾರ- ಕರೆಸಿಕೊಳ್ಳು ಎಂದು. ಒಟ್ಟಾರೆ ಈ ಶರೀರವಿರುವುದೇ ಪರಾತ್ಪರ ಪರಮಾತ್ಮನನ್ನು ಹತ್ತಿರಕ್ಕೆ ಮಾಡಿಕೊಳ್ಳಿ ಎಂದು. ಈ ಶರೀರ ಪಂಚಭೂತಾತ್ಮಕವಾಗಿದೆ. ಆಕಾಶ, ಗಾಳಿ, ಬೆಂಕಿ, ನೀರು ಮತ್ತು ಪೃಥ್ವಿ ಇವುಗಳೆಲ್ಲವೂ ಪರಿಪೂರ್ಣ ವಿಕಸಿತ ಪರಮ ಶಕ್ತಿಶಾಲಿಯಾದರೂ, ಪರರಿಗಾಗಿಯೇ ಇರುವುದು.

    ಯಜ್ಞ ಎಂದರೆ ಆರಾಧಿಸು, ಪೂಜಿಸು, ತ್ಯಾಗ, ಸಮರ್ಪಣೆ, ಹವಿಸ್ಸು ಎಂದು. ತನ್ನನ್ನು ತಾನು ಪರೋಪಕಾರಕ್ಕಾಗಿ ಸಮರ್ಪಿಸಿಕೊಳ್ಳುವುದೇ ಯಜ್ಞ. ಪ್ರಕೃತಿಯನ್ನು ಗಮನಿಸಿದಾಗ ಎಲ್ಲೆಡೆ ಯಜ್ಞದ ಭಾವನೆ ಹಾಸುಹೊಕ್ಕಾಗಿರುವುದು ತೋರುತ್ತದೆ. ಪ್ರತ್ಯಕ್ಷದೇವ ಸೂರ್ಯನಾರಾಯಣ ಸಕಲರಿಗಾಗಿ ಇರುವವನು. ಆತನಿಂದಲೇ ಮಳೆ-ಬೆಳೆ-ಸಸ್ಯ, ಪ್ರಾಣಿ-ಸಂಪತ್ತು ಎಲ್ಲವೂ. ಚಂದ್ರನೂ ಪರರಿಗಾಗಿಯೇ ಇದ್ದಾನೆ. ಚಂದ್ರನು ಮಾನವನ ಮನಸ್ಸಿನ ಏರಿಳಿತಕ್ಕೆ, ತನುಮನಕ್ಕೆ ಮುದ ನೀಡಲು ತಂಪನ್ನೆರೆಯಲು ಕಾರಣನು. ಭೂಮಿಯು ಅವಿಶ್ರಾಂತವಾಗಿ ಸೂರ್ಯನ ಸುತ್ತ ಸುತ್ತುತ್ತಿರುವುದೇ ನಮಗಾಗಿ. ಇದರಿಂದ ಹಗಲು ರಾತ್ರಿಗಳಾಗುತ್ತವೆ. ಪಕ್ಷ, ಮಾಸ, ಋತುಗಳ ಬದಲಾವಣೆ ಸಾಧ್ಯವಾಗುತ್ತದೆ. ಇದನ್ನೇ ಯಜ್ಞ ಎನ್ನುವುದು.

    ಅಗ್ನಿಹೋತ್ರ: ಈಗಲೂ ಅನೇಕ ಕಡೆ ಅಗ್ನಿಹೋತ್ರ ಪ್ರಚಲಿತವಿದೆ. ಅಗ್ನಿಹೋತ್ರದಿಂದ ವಾಯುಮಂಡಲ ಶುದ್ಧಿ, ಪುಷ್ಟಿ ಹಾಗೂ ಸುಗಂಧಿತವಾಗುವುದು. ವೃಷ್ಟಿ, ಜಲ, ಔಷಧ ಪವಿತ್ರವಾಗುವುದು. ಸಮಸ್ತ ಜೀವರಾಶಿಗಳಿಗೆ ಸುಖ ಲಭಿಸುವುದು. ಮನೋದೈಹಿಕ ವ್ಯಾಧಿಗಳು ದೂರವಾಗಿ ಆರೋಗ್ಯಭಾಗ್ಯ ಲಭಿಸುವುದು. ದುಃಖ-ದಾರಿದ್ರ್ಯ ನಾಶವಾಗುವುದು. ರೋಗನಿರೋಧಕ ಶಕ್ತಿ ಹೆಚ್ಚುವುದು. ವೈರಾಣು ನಾಶವಾಗಿ ಅದರಿಂದ ಬರುವ ಸಾಂಕ್ರಾಮಿಕ ಮಾರಕ ರೋಗಗಳಿಗೂ ರಾಮಬಾಣವಾಗುವುದು.

    ಅಗ್ನಿಹೋತ್ರದ ಆಚರಣೆ ಅತ್ಯಂತ ಸರಳವಾಗಿದ್ದು ಎಲ್ಲರೂ ಮಾಡಬಹುದು. ಇದರ ಕುರಿತು ಪ್ರಪಂಚದ ಹಲವು ವಿಶ್ವವಿದ್ಯಾಲಯಗಳು, ವಿಜ್ಞಾನಿಗಳ ಸಮೂಹ ಸಂಶೋಧನೆ ನಡೆಸಿ ಇದರ ಪ್ರಭಾವದಿಂದ ಪರಿಸರ ಹಾಗೂ ಮನುಷ್ಯರ ಮೇಲಾಗುವ ಧನಾತ್ಮಕ ಪರಿಣಾಮವನ್ನು ವಿವರಿಸಿದ್ದಾರೆ. ಪ್ರತಿ ದಿನ ನಮ್ಮ ಮನೆಯಲ್ಲಿ ಸರಳವಾಗಿ ಮಾಡಲು 10ರಿಂದ 20 ನಿಮಿಷ ಸಾಕು. ಅಗ್ನಿಹೋತ್ರಕ್ಕೆ ಅಗತ್ಯ ಪರಿಕರವೆಂದರೆ ಪಿರಮಿಡ್ ಆಕಾರದ ತಾಮ್ರದ ಚೌಕದ ಹೋಮದ ಕುಂಡ, ಒಂದು ಚಮಚ ಹಸುವಿನ ತುಪ್ಪ, ಎರಡು ಚಮಚ ಕೆಂಪಕ್ಕಿ ಅಥವಾ ಎಳ್ಳು, 3-4 ಅರಳಿಮರದ ಚಕ್ಕೆ ಅಥವಾ ಹಸುವಿನ ಬೆರಣಿ. ಇವಿಷ್ಟಿದ್ದರೆ ಸಾಕು ಸೂರ್ಯೋದಯ ಅಥವಾ ಸೂರ್ಯಾಸ್ತ ಸಮಯಕ್ಕೆ ಸರಿಯಾಗಿ ಮಾಡಬಹುದು.

    ಅಗ್ನಿಹೋತ್ರ ಮಾಡುವ ವಿಧಾನ: ಸ್ನಾನದ ನಂತರ ಪೂರ್ವಾಭಿಮುಖವಾಗಿ, ಸಂಜೆಯಾದರೆ ಪಶ್ಚಿಮಾಭಿಮುಖವಾಗಿ ಕುಳಿತು ತಾಮ್ರದ ಹೋಮಕುಂಡದ ಮಧ್ಯದಲ್ಲಿ ಗಾಳಿ ಆಡುವಂತೆ ಜಾಗ ಬಿಟ್ಟು ಹಸುವಿನ ಬೆರಣಿಯನ್ನು ಒಂದರ ಮೇಲೆ ಒಂದು ಜೋಡಿಸಿ, ಒಂದು ಬೆರಣಿಯ ತುದಿಯನ್ನು ಹಸುವಿನ ತುಪ್ಪದಲ್ಲಿ ಅದ್ದಿ, ಅಗ್ನಿ ಸ್ಪರ್ಶ ಮಾಡಿ, ಕುಂಡದ ಒಳಗೆ ಇಟ್ಟು ಅಗ್ನಿ ಎಲ್ಲ ಬೆರಣಿಗೆ ಹರಡುವಂತೆ ನೋಡಿಕೊಳ್ಳಬೇಕು. ನಂತರ ಕೆಳಕಂಡ ಮಂತ್ರವನ್ನು ಪಠಿಸುತ್ತ ಕೆಂಪಕ್ಕಿ ಅಥವಾ ಎಳ್ಳು ಅಥವಾ ಚೆಕ್ಕೆಯನ್ನು ಮತ್ತು ತುಪ್ಪವನ್ನು ಸ್ವಾಹಾ ಎಂದು ಹೇಳುವಾಗ ಅಗ್ನಿಗೆ ಸಮರ್ಪಿಸಬೇಕು. ಅಗ್ನಿಹೋತ್ರ ಮಾಡುವ ಸಮಯಕ್ಕನುಸಾರವಾಗಿ ಈ ಕೆಳಗಿನ ಮಂತ್ರವನ್ನು ಮೂರು ಬಾರಿ ಪಠಿಸಬೇಕು.

    ಬೆಳಗ್ಗೆ: ಓಂ ಸೂರ್ಯಾಯ ಸ್ವಾಹಾ, ಸೂರ್ಯಾಯ ಇದಂ ನ ಮಮ | ಓಂ ಪ್ರಜಾಪತಯೇ ಸ್ವಾಹಾ, ಪ್ರಜಾಪತಯ ಇದಂ ನ ಮಮ |

    ಸಾಯಂಕಾಲ: ಓಂ ಅಗ್ನಯೇ ಸ್ವಾಹಾ, ಅಗ್ನಯ ಇದಂ ನ ಮಮ| ಓಂ ಪ್ರಜಾಪತಯೇ ಸ್ವಾಹಾ, ಪ್ರಜಾಪತಯ ಇದಂ ನ ಮಮ |

    ಅಗ್ನಿಯ ಮುಂದೆ ಎಷ್ಟು ಸಾಧ್ಯವೋ ಅಷ್ಟು ಸಮಯ ಧ್ಯಾನದಲ್ಲಿರುವುದು ಒಳ್ಳೆಯದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts