More

    ಸಿಎಂ ವಿರುದ್ಧ ಕಾಂಗ್ರೆಸ್​ನಿಂದ ಅಚ್ಚರಿಯ ಅಭ್ಯರ್ಥಿ?

    ಕೇಶವಮೂರ್ತಿ ವಿ.ಬಿ. ಹಾವೇರಿ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹ್ಯಾಟ್ರಿಕ್ ಗೆಲುವು ತಂದುಕೊಟ್ಟ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರವನ್ನು ಈ ಬಾರಿ ಹೇಗಾದರೂ ಮಾಡಿ ತನ್ನ ವಶಕ್ಕೆ ಪಡೆಯಬೇಕು ಎಂದು ನಾನಾ ತಂತ್ರಗಳನ್ನು ಹೂಡುತ್ತಿರುವ ಕಾಂಗ್ರೆಸ್ ಈ ಬಾರಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

    ಪಂಚಮಸಾಲಿ ಹಾಗೂ ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರದಲ್ಲಿ ನಾಲ್ಕು ಬಾರಿ ಮುಸ್ಲಿಂ ಅಭ್ಯರ್ಥಿಯಾಗಿ ಮಾಜಿ ಶಾಸಕ ಅಜೀಮಪಿರ ಖಾದ್ರಿ ಸ್ಪರ್ಧಿಸಿ ಸೋತಿದ್ದಾರೆ. ‘ವಿನಯ ಕುಲಕರ್ಣಿ ಅಥವಾ ಸಲೀಂ ಅಹ್ಮದ್ ಅವರಿಗೆ ಟಿಕೆಟ್ ಕೊಟ್ಟರೆ ಬೆಂಬಲಿಸುವೆ’ ಎಂದು ಖಾದ್ರಿ ಹೇಳಿಕೊಂಡಿದ್ದಾರೆ. ವಿಪ ಸದಸ್ಯ ಸಲೀಂ ಅಹ್ಮದ್ ಕಣಕ್ಕಿಳಿಯುವ ಯಾವುದೇ ಸೂಚನೆಯಿಲ್ಲ.

    ಹಾಗಾಗಿ, ಹೈಕಮಾಂಡ್ ಈ ಬಾರಿ ಪಂಚಮಸಾಲಿ ಸಮಾಜದ ಮುಖಂಡ, ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಸಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ, ಧಾರವಾಡ ಗ್ರಾಮೀಣ ಕ್ಷೇತ್ರ ಬಿಟ್ಟು ಶಿಗ್ಗಾಂವಿಯಿಂದ ಸ್ಪರ್ಧಿಸಲು ವಿನಯ ಕುಲಕರ್ಣಿ ಒಪ್ಪಿದಂತಿಲ್ಲ. ಈ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಅವರ ಪತ್ನಿ ಶಿವಲೀಲಾ ಕೂಡ ‘ನಮ್ಮ ಸಾಹೇಬರು ಶಿಗ್ಗಾಂವಿಯಿಂದ ಸ್ಪರ್ಧಿಸಲ್ಲ’ ಎಂದು ಈಗಾಗಲೇ ಹೇಳಿದ್ದಾರೆ. ಆದರೂ ಹೈಕಮಾಂಡ್ ಮಾತಿಗೆ ಕಟ್ಟುಬಿದ್ದು ವಿನಯ ಸ್ಪರ್ಧಿಸಿದರೂ ಅಚ್ಚರಿಯಿಲ್ಲ.

    ವಿನಯ ಕುಲಕರ್ಣಿ, ಖಾದ್ರಿ ಬಿಟ್ಟರೆ ಪಂಚಮಸಾಲಿ ಸಮಾಜದ ಸೋಮಣ್ಣ ಬೇವಿನಮರದ, ಶಶಿಧರ ಯಲಿಗಾರ ಹಾಗೂ ರಾಜೇಶ್ವರಿ ಪಾಟೀಲ ಹೆಸರು ಹೈಕಮಾಂಡ್ ಮಟ್ಟದಲ್ಲಿ ಕೇಳಿಬರುತ್ತಿದೆ. ಕಳೆದ ನಾಲ್ಕು ಬಾರಿ ಕ್ಷೇತ್ರದಲ್ಲಿ ಕೈಸುಟ್ಟುಕೊಂಡಿರುವ ಕೈನಾಯಕರು ಈ ಬಾರಿ ಗೆಲ್ಲುವ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕು ಎಂದು ಶತಾಯಗತಾಯ ಪ್ರಯತ್ನದಲ್ಲಿದ್ದಾರೆ. ಇದೇ ಕಾರಣಕ್ಕೆ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೂ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯನ್ನು ಘೊಷಿಸಿಲ್ಲ.

    ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿರುವ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಇನ್ನೂ ನಿಗೂಢವಾಗಿದೆ. ಸದ್ಯಕ್ಕೆ ವಿನಯ ಕುಲಕರ್ಣಿ ಹೆಸರು ಮುನ್ನಲೆಗೆ ಬಂದಿದೆಯಾದರೂ, ಧಾರವಾಡ ಗ್ರಾಮೀಣ ಕ್ಷೇತ್ರದಿಂದ ವಿನಯ ದಾರಿ ಸುಗಮಗೊಂಡರೆ, ಶಿಗ್ಗಾಂವಿಗೆ ಕೊನೆ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಈ ಮೂಲಕ ಸಿಎಂ ಕ್ಷೇತ್ರದ ಕೈಟಿಕೆಟ್ ಎಲ್ಲರ ಗಮನ ಸೆಳೆಯುತ್ತಿದೆ. ಬಾಕ್ಸ್

    ರಾಜೇಶ್ವರಿಗೆ ಒಲಿಯುತ್ತಾ ಟಿಕೆಟ್?: ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ನಡೆದ ‘ನಾ ನಾಯಕಿ’ ಸಮಾವೇಶದಲ್ಲಿ ರಾಜ್ಯದಲ್ಲಿ ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡುವ ಭರವಸೆ ಸಿಕ್ಕಿತ್ತು. ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲೂ ಹೆಚ್ಚು ಮಹಿಳೆಯರಿಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆಯಾಗುತ್ತದೆ ಎಂಬ ಭರವಸೆಯನ್ನು ಪ್ರಿಯಾಂಕಾ ನೀಡಿದ್ದರು. ಆದರೆ, ಮೊದಲ ಪಟ್ಟಿಯಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರಿಗೆ ಮಾತ್ರ ಟಿಕೆಟ್ ದೊರೆತಿದ್ದು, ಮಹಿಳಾ ಆಕಾಂಕ್ಷಿಗಳ ಬೇಸರಕ್ಕೆ ಕಾರಣವಾಗಿದೆ. ಎರಡನೇ ಪಟ್ಟಿಯಲ್ಲಿ ಹೆಚ್ಚು ಅವಕಾಶ ನಿರೀಕ್ಷಿಸಲಾಗಿದೆ. ಇದರ ಪ್ರಕಾರ ಶಿಗ್ಗಾಂವಿ ಕ್ಷೇತ್ರದಿಂದ ರೈತ ನಾಯಕಿ, ದೇಶಗತ್ತಿ ಮನೆತನದ ರಾಜೇಶ್ವರಿ ಪಾಟೀಲ (ಮಾಮಲೆದೇಸಾಯಿ) ಅವರಿಗೆ ಕೈಟಿಕೆಟ್ ನೀಡುವ ಮೂಲಕ ಅಚ್ಚರಿಯ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ರಾಜೇಶ್ವರಿ ಪಾಟೀಲ ಪಂಚಮಸಾಲಿ ಕುಟುಂಬದ ನಾಯಕಿ ಜತೆಗೆ ಮಹಿಳಾ ಕೋಟಾದಡಿ ಕೊನೆಯ ಕ್ಷಣದಲ್ಲಿ ಟಿಕೆಟ್ ಒಲಿದರೂ ಅಚ್ಚರಿಯಿಲ್ಲ ಎನ್ನುತ್ತವೆ ಮೂಲಗಳು.

    ಮಂಜುನಾಥ ಕುನ್ನೂರ ಅವರನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಸುಮಾರು 25 ವರ್ಷಗಳಿಂದ ಪಂಚಮಸಾಲಿ ಸಮಾಜಕ್ಕೆ ಟಿಕೆಟ್ ಸಿಕ್ಕಿಲ್ಲ. ಪಂಚಮಸಾಲಿ ಜತೆಗೆ ಮಹಿಳಾ ಕೋಟಾ ಹಾಗೂ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸಲ್ಲಿಸಿದ ಸೇವೆ ಪರಿಗಣಿಸಿ ಕಾಂಗ್ರೆಸ್ ಪಕ್ಷದ ಟಿಕೆಟ್ ನನಗೆ ಸಿಗುವ ಭರವಸೆ ಇದೆ.

    | ರಾಜೇಶ್ವರಿ ಪಾಟೀಲ, ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts