More

    ಸುರೇಶ ಅಂಗಡಿ ಶುದ್ಧ ಮನಸ್ಸಿನ ಸಮಾಜ ಸೇವಕ – ಡಾ.ಪ್ರಭಾಕರ ಕೋರೆ

    ಬೆಳಗಾವಿ: ದಿ.ಸುರೇಶ ಅಂಗಡಿ ಅವರು ಸತ್ಯ, ಶುದ್ಧ ಮನಸ್ಸಿನಿಂದ ಸಮಾಜ ಸೇವೆ ಮಾಡಿದರು. ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟಿಗೆ ಶ್ರಮಿಸಿದ್ದರು ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ ನೆನಪಿಸಿಕೊಂಡರು. ಇಲ್ಲಿನ ಶಿವಬಸವನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ ಮಂಗಳವಾರ ಆಯೋಜಿಸಿದ್ದ ‘ಸುರೇಶ ಅಂಗಡಿ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಂಗಡಿ ಅವರನ್ನು ಕಳೆದುಕೊಂಡ ನಮ್ಮ ನಾಡು ಬಡವಾಗಿದೆ ಎಂದರು.

    ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಹೊಂದಿರುವ ನಮ್ಮ ಸಮಾಜವು ಶಾಂತಿ ಹಾಗೂ ಸಾಮರಸ್ಯದಿಂದ ಇರಲು ಶ್ರಮಿಸಿದರು. ಎಲ್ಲ ವರ್ಗದ ಜನರನ್ನು ಪ್ರೇಮದಿಂದ ಕಂಡು, ಯಾರಿಗೇ ಸಮಸ್ಯೆ ಇದ್ದರೂ ಅದನ್ನು ನಿವಾರಿಸಲು ಸ್ಪಂದಿಸುತ್ತಿದ್ದರು ಎಂದು ಅಂಗಡಿ ಅವರ ವಿಶಿಷ್ಟ ವ್ಯಕ್ತಿತ್ವದ ಕುರಿತು ಮಾತನಾಡಿದರು.

    ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ, ಕೆಎಲ್‌ಇ ಸಂಸ್ಥೆ ನಿರ್ದೇಶಕ ಮಹಾಂತೇಶ ಕವಟಗಿಮಠ ಮಾತನಾಡಿ, ದಿ.ಸುರೇಶ ಅಂಗಡಿ ಅವರು ಕಾಯಕ ಯೋಗಿಗಳಾಗಿದ್ದರು. ತಮ್ಮ ಜೀವಿತದ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಜನಸೇವೆ ಮಾಡುವ ಮೂಲಕ ಚಿರಸ್ಥಾಯಿಯಾಗಿದ್ದಾರೆ ಎಂದರು.
    ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ದಿ.ಸುರೇಶ ಅಂಗಡಿ ಅವರು ಅಪ್ಪಟ ಶರಣರಾಗಿದ್ದರು. ಆಸ್ಪತ್ರೆಯಲ್ಲಿಯೂ ಅವರು ಲಿಂಗಪೂಜೆಯನ್ನು ಬಿಡಲಿಲ್ಲ. ಶರಣರಂತೆ ಸಹಬಾಂಧವರನ್ನು ಅತ್ಯಂತ ಗೌರವದಿಂದ ಕಂಡರು. ಮಹಿಳೆಯರನ್ನು ಮಹಾದೇವಿ ಅಕ್ಕನಂತೆ ಕಂಡು ಅವರಿಗೆ ಗೌರವ ನೀಡುತ್ತಿದ್ದರು ಎಂದು ಸ್ಮರಿಸಿದರು.

    ವಕೀಲ ಎಂ.ಬಿ.ಝೀರಲಿ, ಡಾ.ಮಾನ್ವಿ, ಗುರುಬಸಪ್ಪ ಚೊಣ್ಣದ, ಸೋಮಲಿಂಗ ಮಾವಿನಕಟ್ಟಿ, ರಮೇಶ ಕಳಸಣ್ಣವರ, ಪ್ರಕಾಶ ಬಾಳೇಕುಂದ್ರಿ, ಅಣ್ಣಾಸಾಹೇಬ್ ಕೊರಬು, ಶಿವನಗೌಡ ಪಾಟೀಲ, ಮಹೇಶ ಭಾತೆ, ಜ್ಯೋತಿ ಬಾವಿಕಟ್ಟಿ, ಪ್ರತಿಭಾ ಕಳ್ಳಿಮಠ, ಜ್ಯೋತಿ ಬದಾಮಿ, ಆಶಾ ಯಮಕನಮರಡಿ, ಚಂದ್ರಶೇಖರ ಬೆಂಬಳಗಿ, ಪಕ್ಷದ ಕಾರ್ಯಕರ್ತರು ಮತ್ತಿತರರಿದ್ದರು. ಡಾ. ಗುರುದೇವಿ ಹುಲೆಪ್ಪನವರಮಠ ನಿರೂಪಿಸಿದರು. ಶೈಲಜಾ ಸಂಸುದ್ದಿ ಪ್ರಾರ್ಥಿಸಿದರು.

    ಸದಾ ಮಗುವಿನಂತೆ ಮುಗ್ಧತೆ: ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ದಿ. ಸುರೇಶ ಅಂಗಡಿ ಅವರ ಜೀವನವು ಒಂದು
    ಪವಿತ್ರ ತೀರ್ಥಯಾತ್ರೆಯಂತೆಯೇ ಇತ್ತು. ಅದು ಸದ್ಭಾವ, ಸದ್ಭಕ್ತಿಗಳ ಸಂಗಮವಾಗಿತ್ತು. ಸುವಿಚಾರಿಗಳಾಗಿದ್ದ ಅವರು ತಪ್ಪೊಪ್ಪಿಗೆಗಳಿಗೆ ತಮ್ಮನ್ನು ಸದಾ ತೆರೆದುಕೊಂಡಿದ್ದರು. ಯಾರ ಬಗೆಗೂ ಸಿಟ್ಟು, ಸೇಡು ಇಟ್ಟುಕೊಳ್ಳದೆ ಮಗುವಿನಂತೆ ಮುಗ್ಧತೆ ತೋರುತ್ತಿದ್ದರು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts