More

    ಅಟ್ರಾಸಿಟಿ ಕಾಯ್ದೆ ತಿದ್ದುಪಡಿಯ ಸಿಂಧುತ್ವ: ಕೇಂದ್ರ ಸರ್ಕಾರದ ಕ್ರಮವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

    ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಎಸ್​ಸಿ/ಎಸ್​ಟಿ ಅಟ್ರಾಸಿಟಿ ತಡೆ ಕಾಯ್ದೆ ತಿದ್ದುಪಡಿ ಮಾಡಿ ಸೆಕ್ಷನ್ 18ಎ ಸೇರಿಸಿದ ಕೇಂದ್ರ ಸರ್ಕಾರದ 2018ರ ಕ್ರಮವನ್ನು ಎತ್ತಿಹಿಡಿದಿದೆ. ಡಾ.ಸುಭಾಶ್ ಕಾಶೀನಾಥ್ ಮಹಾಜನ್ ವರ್ಸಸ್ ದ ಸ್ಟೇಟ್ ಆಫ್ ಮಹಾರಾಷ್ಟ್ರ ಕೇಸಿನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಇಲ್ಲವಾಗಿಸಲು ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿತ್ತು.
    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅಟ್ರಾಸಿಟಿ ತಡೆ) ತಿದ್ದುಪಡಿ ಕಾಯ್ದೆ 2018ರ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ. 2018ರ ಮಾರ್ಚ್ 20ರಂದು ಜಾರಿಗೆ ಬಂದ ಈ ಕಾಯ್ದೆ ಸುಪ್ರೀಂ ಕೋರ್ಟ್​ನ ಈ ಹಿಂದಿನ ಆದೇಶವನ್ನು ಡೈಲ್ಯೂಟ್ ಮಾಡಿದೆ ಎಂಬ ಆರೋಪ ವ್ಯಾಪಕವಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದರು.
    ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ವಿನೀತ್ ಶರಣ್​, ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಈ ನ್ಯಾಯಪೀಠ, ಈ ಹಿಂದೆ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪಿನ ಅಂಶಗಳನ್ನು ನೆನಪಿಸಿದ್ದಲ್ಲದೆ, ಪರಿಷ್ಕರಣೆ ಕೇಂದ್ರದ ಪರಾಮರ್ಶೆಗೆ ಬಿಟ್ಟ ವಿಚಾರ ಎಂದೂ ಹೇಳಿದೆ.
    ನ್ಯಾಯವಾದಿಗಳಾದ ಪೃಥ್ವಿರಾಜ್ ಚೌಹಾಣ್, ಪ್ರಿಯಾ ಶರ್ಮಾ ಮತ್ತು ಇತರೆ ಕೆಲವರು 1989ರ ಎಸ್​ಸಿ ಎಸ್​​ಟಿ ಅಟ್ರಾಸಿಟಿ ತಡೆ ಕಾಯ್ದೆ ತಿದ್ದುಪಡಿ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ದಾವೆ ಹೂಡಿದ್ದರು. ಈ ತಿದ್ದುಪಡಿ ಸಂವಿಧಾನದ ಅನುಚ್ಚೇಧ 14,19 ಮತ್ತು21ರ ಉಲ್ಲಂಘನೆ ಎಂದು ಅವರು ಪ್ರತಿಪಾದಿಸಿದ್ದರು.
    ಕೇಂದ್ರ ಸರ್ಕಾರ ಹೊಸದಾಗಿ ಸೆಕ್ಷನ್ 18 ಎ ಯನ್ನು 1989ರ ಕಾಯ್ದೆಗೆ ಸೇರಿಸುವ ಮೂಲಕ, ಅಧಿಕಾರಿಯ ಬಂಧನಕ್ಕೆ ಪ್ರಾಥಮಿಕ ತನಿಖೆ ಮತ್ತು ಪೂರ್ವಾನುಮತಿ ಪಡೆಯುವ ವಿಚಾರಕ್ಕೆ ಅವಕಾಶವನ್ನು ಒದಗಿಸಿತ್ತು. ಅಲ್ಲದೆ, ಅಪರಾಧ ನಡೆದಿದ್ದರೆ ನಿರೀಕ್ಷಣಾ ಜಾಮೀನು ಪಡೆಯುವುದನ್ನು ನಿಷೇಧಿಸುವ ಅಂಶವೂ ಸೇರಿಕೊಂಡಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts