More

    ಡೀಮ್ಡ್ ಫಾರೆಸ್ಟ್ ವ್ಯಾಪ್ತಿ ಮನೆಗಳಿಗೆ ನೀರು ಒದಗಿಸಿ

    ಕಾರ್ಕಳ: 94ಸಿ ಮತ್ತು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಮನೆ ಕಟ್ಟಿ ಹಲವು ವರ್ಷಗಳಿಂದ ಜೀವನ ಸಾಗಿಸುತ್ತಿರುವ ಕುಟುಂಬಗಳ ಜಾಗ ಮಂಜೂರಾತಿ ಅರ್ಜಿ ವಿಲೇವಾರಿಯಾಗುವವರೆಗೆ ಮೂಲಸೌಕರ್ಯ ನಿಯಮದಂತೆ ತಾತ್ಕಾಲಿಕ ನೆಲೆಯಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯಿತಿಗಳಿಗೆ ಅವಕಾಶ ಇದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ.ಹರ್ಷ ನಿರ್ದೇಶನ ನೀಡಿದರು.

    ತಾ.ಪಂ .ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಸೌಭಾಗ್ಯ ಮಡಿವಾಳ ಅಧ್ಯಕ್ಷತೆಯಲ್ಲಿ ಜರುಗಿದ ತಾಪಂನ 19ನೇ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದರು. ತಾಲೂಕಿನ ಐದು ಗ್ರಾಪಂ ವ್ಯಾಪ್ತಿಯಲ್ಲಿ ಮೊದಲ ಹಂತವಾಗಿ ತಾತ್ಕಾಲಿಕ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆ ಮೂಲಕ ಸಾಧಕ-ಬಾಧಕಗಳನ್ನು ಅರಿತುಕೊಳ್ಳಬಹುದೆಂದರು.

    ನೀರೆ ಗ್ರಾಮದಲ್ಲಿ ಮೆಸ್ಕಾಂ ಸಬ್‌ಸ್ಟೇಶನ್‌ಗೆ ಜಾಗ ಕಾಯ್ದಿರಿಸುವ ಕುರಿತು ಹಲವು ವರ್ಷಗಳಿಂದ ಸಾಮಾನ್ಯ ಸಭೆಯಲ್ಲಿ ಬೇಡಿಕೆ ಮುಂದಿಟ್ಟಿದ್ದರೂ, ಇದುವರೆಗೆ ಯಾವುದೇ ಪ್ರಗತಿ ನಡೆಯದಿರುವ ಕುರಿತು ತಾಪಂ ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

    ಕೊರಗ ಸಮುದಾಯ ಏಳಿಗೆಗಾಗಿ ಹಲವು ವರ್ಷಗಳ ಹಿಂದೆ ಸರ್ಕಾರ ಮುಂಡ್ಕೂರು ಮುಲ್ಲಡ್ಕ ಪರಿಸರದಲ್ಲಿ ಕೃಷಿ ಕಾಯಕಕ್ಕೆಂದು ಐದು ಎಕ್ರೆ ಜಾಗ ಮಂಜೂರುಗೊಳಿಸಿತ್ತು. ಸಂಪದ್ಭರಿತ ನೀರಾವರಿ ಜಾಗ ಪ್ರಸ್ತುತ ವರ್ಷಗಳಲ್ಲಿ ಕೃತಕವಾಗಿ ಬರಡಾಗುತ್ತಿದೆ. ಪರಿಸರದಲ್ಲಿ ಕೆಂಪುಕಲ್ಲಿನ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಗೋಪಾಲ ಮೂಲ್ಯ ತಿಳಿಸಿದರು.

    ಕೋವಿಡ್ 19 ನಿಯಮದಂತೆ ರೋಗಿಗಳನ್ನು ಹಾಗೂ ಗರ್ಭಿಣಿಯರನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲಾಗಿದೆ. ಗರ್ಭಿಣಿಯರಿಗೆ ಯುಎಸ್‌ಜಿ ಹಾಗೂ ರಕ್ತ ಪರೀಕ್ಷೆ ನಿಯಮಾನುಸಾರ ಮಾಡಲಾಗುತ್ತಿದೆ ಎಂದು ತಾಪಂ ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಸಭೆಗೆ ಮಾಹಿತಿ ನೀಡಿದರು.
    ಉಪಾಧ್ಯಕ್ಷ ಹರೀಶ್ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಕೋಟ್ಯಾನ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ.ಹರ್ಷ ಉಪಸ್ಥಿತರಿದ್ದರು. ಕಾರ್ಯದರ್ಶಿ ನಾರಾಯಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts