More

    ಭಾಂಡಗೆ ಹತ್ಯೆ ಹಿಂದೆ ಸುಪಾರಿ!

    ಹುಬ್ಬಳ್ಳಿ: ಆರ್​ಟಿಐ ಕಾರ್ಯಕರ್ತ ರಮೇಶ ಭಾಂಡಗೆ ಹತ್ಯೆ ಒಂದು ಸೈಟ್ ವಿಚಾರವಾಗಿ ಒಬ್ಬನಿಂದ ನಡೆದಿದ್ದಲ್ಲ; ಇದೊಂದು ಸುಪಾರಿ ಕೊಲೆ ಎನ್ನುವುದನ್ನು ಪೊಲೀಸರು ಭೇದಿಸಿದ್ದು, ಇನ್ನೂ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಕೂಲಂಕಷ ತನಿಖೆ ನಡೆಸಿದ ಶಹರ ಠಾಣೆ ಪೊಲೀಸರು, 25 ಲಕ್ಷ ರೂ.ಗೆ ಸುಪಾರಿ ನೀಡಿದ್ದ ಇಬ್ಬರು ಸಂಚುಕೋರರು ಹಾಗೂ ಇತರ ಮೂವರನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಆ ಮೂಲಕ, ಭಾಂಡಗೆ ಹತ್ಯೆಗೆ ಗಬ್ಬೂರಿನ ಅನಧಿಕೃತ ಆಸ್ತಿ ಕೈ ತಪ್ಪಿಹೋಗುವ ಭೀತಿಯೇ ಕಾರಣ ಎಂಬುದು ಗೊತ್ತಾಗಿದೆ.

    ಹಳೇಹುಬ್ಬಳ್ಳಿ ಸದರಸೋಫಾ ನಿವಾಸಿ ರಫೀಕ ಅನ್ವರಸಾಬ ಜವಾರಿ (40), ವಸೀಮ ಖಾಜಾಸಾಬ ಬಂಕಾಪುರ (29), ಜಂಗ್ಲಿಪೇಟೆಯ ಶಿವಾಜಿ ದೇವೇಂದ್ರಪ್ಪ ಮಿಶಾಳ (60), ಮಯೂರ ನಗರದ ಫಯಾಜ ಅಹ್ಮದ ಜಾಫರಸಾಬ ಪಲ್ಲಾನ (34) ಹಾಗೂ ಗದಗ ಮಹಾವೀರ ನಗರದ ತೌಸೀಫ ಮಹಮ್ಮದ ಇಸಾಕ ನರಗುಂದ (33) ಬಂಧಿತರು. ಮಂಟೂರು ರೋಡ್ ನಿವಾಸಿ ಇಜಾಜಹ್ಮದ ಖಾಜಾಸಾಬ ಬಂಕಾಪುರ (43) ಎಂಬಾತ ಈ ಮೊದಲೇ ಶರಣಾಗಿ, ಬಂಧಿಸಲ್ಪಟ್ಟಿದ್ದ. ಆರೋಪಿತರಿಂದ 6.10 ಲಕ್ಷ ರೂ. ನಗದು, 2 ಬೈಕ್, 5 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

    ಗಬ್ಬೂರು ಗ್ರಾಮದ ಸಿ.ಟಿ.ಎಸ್.ನಂ 112/1ರಲ್ಲಿನ ಅನಧಿಕೃತ ಫ್ಯಾಕ್ಟರಿ ಹಾಗೂ ಮನೆಗಳನ್ನು ತೆರವುಗೊಳಿಸುವಂತೆ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ರಮೇಶ ಭಾಂಡಗೆ ಹೆಸ್ಕಾಮ್ೆ ಪತ್ರ ಬರೆದಿದ್ದರು. ಆ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಅದರಿಂದ ಆಕ್ರೋಶಗೊಂಡ ರಫೀಕ ಜವಾರಿ ಹಾಗೂ ಶಿವಾಜಿ ಮಿಶಾಳ ಇಬ್ಬರೂ ಸೇರಿ ಭಾಂಡಗೆ ಹತ್ಯೆಗೆ ಸಂಚು ರೂಪಿಸಿದ್ದರು.

    ಇವರಿಂದ ಇಜಾಜಹ್ಮದ ಬಂಕಾಪುರ 25 ಲಕ್ಷ ರೂ. ಪಡೆದು ಕೊಲೆ ಮಾಡಲು ಒಪ್ಪಿಕೊಂಡಿದ್ದ. ತನ್ನ ಸಹೋದರ ವಸೀಮ ಬಂಕಾಪುರ, ಸ್ನೇಹಿತ ಫಯಾಜ ಅಹ್ಮದ ಹಾಗೂ ಸಂಬಂಧಿ ಗದಗ ನಿವಾಸಿ ತೌಸೀಫ ನರಗುಂದನೊಂದಿಗೆ ಸೇರಿ ನ.25ರಂದು ಬೆಳಗ್ಗೆ ಬಾಬಾಸಾನ ಗಲ್ಲಿಯಲ್ಲಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದ.

    ಪೊಲೀಸ್ ಆಯುಕ್ತ ಲಾಬು ರಾಮ್ ಡಿಸಿಪಿ ಆರ್.ಬಿ. ಬಸರಗಿ ಮಾರ್ಗದರ್ಶನದಲ್ಲಿ ಎಸಿಪಿ ಎಂ.ವಿ. ಮಲ್ಲಾಪುರ ಹಾಗೂ ಶಹರ ಠಾಣೆ ಇನ್ಸ್​ಪೆಕ್ಟರ್ ಎಂ.ಎಸ್. ಪಾಟೀಲ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪಿಎಸ್​ಐ ಬಿ.ಎನ್. ಸಾತನ್ನವರ, ಸಿಬ್ಬಂದಿ ಎಂ.ಎ. ಅಯ್ಯನಗೌಡರ, ಸಿ.ಎಸ್. ಚಲವಾದಿ, ಎಸ್.ಎ. ಕಲಘಟಗಿ, ಕೃಷ್ಣ ಕಟ್ಟಿಮನಿ, ಎಸ್.ಬಿ. ಕಟ್ಟಮನಿ, ಎಸ್.ವಿ. ಯರಗುಪ್ಪಿ, ಎಸ್.ಕೆ. ಇಂಗಳಗಿ, ಎಚ್.ಬಿ. ನಂದೇರ, ಕೆ.ಎಚ್. ರಗಣಿ ಹಾಗೂ ಮಾರುತಿ ಬಸಣ್ಣವರ ತಂಡದಲ್ಲಿದ್ದರು.

    ನಿಜವಾಯ್ತು ಸಮಾಜದವರ ತರ್ಕ: ರಮೇಶ ಭಾಂಡಗೆ ಹತ್ಯೆ ಮಾಡಿದ್ದ ಇಜಾಜಹ್ಮದ ಬಂಕಾಪುರನನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದರು. ಶಿಕ್ಷಣ ಪ್ರೇಮಿ, ಕೊಡುಗೈ ದಾನಿ ರಮೇಶ ಭಾಂಡಗೆ ಹತ್ಯೆ ಹಿಂದೆ ಬೇರೆಯದೇ ವ್ಯಕ್ತಿಳಿದ್ದಾರೆ, ಪ್ರಭಾವಿಗಳಿಂದ ಲಕ್ಷಾಂತರ ರೂ. ಕೈ ಬದಲಾಗಿದೆ ಎಂಬ ಎಸ್​ಎಸ್​ಜೆ ಸಮಾಜದವರ ತರ್ಕ ನಿಜವಾಗಿದೆ.

    ಕೂಲಂಕಷ ತನಿಖೆ ನಡೆಸಿ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಎಸ್​ಎಸ್​ಕೆ ಸಮಾಜ ಪ್ರತಿಭಟನೆ ನಡೆಸಿ ಒತ್ತಡ ಹೇರಿತ್ತು. ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಸಂಚುಕೋರರನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ. ಇದರಿಂದಾಗಿ, ಹಣಕ್ಕಾಗಿ ಗುತ್ತಿಗೆ ಹತ್ಯೆ ಮಾಡುವಂಥ ಪಾತಕಿಗಳಿಗೆ ತಾವು ಕಾನೂನು, ಪೊಲೀಸರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ಕಠಿಣ ಎಚ್ಚರಿಕೆ ಸಂದೇಶ ಹೋದಂತಾಗಿದೆ.

    ಫಲಾನುಭವಿಗಳಿಂದ ಹಣ ಸಂಗ್ರಹ: ಗಬ್ಬೂರಿನ ಅನಧಿಕೃತ ಜಾಗದಲ್ಲಿ ಸಣ್ಣ ಕೈಗಾರಿಕೆ ಘಟಕಗಳು ಮತ್ತು ಮನೆಗಳು ನಿರ್ವಣವಾಗಿದ್ದವು. ಅವುಗಳ ವಿರುದ್ಧ ಭಾಂಡಗೆ ಹೋರಾಟ ನಡೆಸಿದ್ದರು. ಇದರಿಂದ ಉಂಟಾಗಿರುವ ಆತಂಕ ನಿವಾರಣೆಗಾಗಿ ರಫೀಕ ಜವಾರಿ ಹಾಗೂ ಶಿವಾಜಿ ಮಿಶಾಳ ಅಲ್ಲಿನ 15ಕ್ಕೂ ಹೆಚ್ಚು ಜನರಿಂದ 25 ಲಕ್ಷ ರೂ. ಸಂಗ್ರಹಿಸಿ ಸುಪಾರಿ ನೀಡಿದ್ದರು ಎಂದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

    ಸಿಸಿಟಿವಿ, ಮೊಬೈಲ್ ಸುಳಿವು : ಕೊಲೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಹಾಗೂ ಇಜಾಜ ಅಹ್ಮದನ ಫೋನ್ ಕರೆ ವಿವರ, ಮತ್ತಿತರ ಸುಳಿವಿನ ಮೂಲಕ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಉದ್ದೇಶ ಈಡೇರುವುದೆ? : ಸರ್ಕಾರಿ ಜಾಗವು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಪರಭಾರೆಯಾಗುವುದು ತಪ್ಪಬೇಕು ಎಂಬ ಸದುದ್ದೇಶದಿಂದ ರಮೇಶ ಭಾಂಡಗೆ ಮಾಹಿತಿ ಹಕ್ಕಿನಡಿ ವಿವರ ಪಡೆದುಕೊಂಡು ಏಕಾಂಗಿ ಹೋರಾಟ ನಡೆಸಿದ್ದರು. ಅವರಿಗೆ ಅನೇಕ ಅಧಿಕಾರಿಗಳು ಸಹಕಾರ ನೀಡಿರಲಿಲ್ಲ. ಅಂಥ ಅಧಿಕಾರಿಗಳ ವಿರುದ್ಧವೂ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದ್ದರು. ಅಂತೂ ಅನಧಿಕೃತ ಕಟ್ಟಡಗಳಿಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ನ್ಯಾಯಕ್ಕಾಗಿ ರಮೇಶ ಭಾಂಡಗೆ ನಡೆಸಿದ ಹೋರಾಟದಿಂದ ಅಕ್ರಮ ಕುಳಗಳು ಕಂಗಾಲಾಗಿದ್ದವು. ಒಳ್ಳೆಯ ಗುರಿ ಇಟ್ಟುಕೊಂಡು ಹೋರಾಡಿದ್ದೇ ಭಾಂಡಗೆ ಹತ್ಯೆಗೆ ಕಾರಣವಾಯಿತು. ಈಗ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ಮತ್ತು ತ್ವರಿತವಾಗಿ ನಿಭಾಯಿಸುವ ಮೂಲಕ ಸರ್ಕಾರಿ ಜಮೀನನ್ನು ವಾಪಸ್ ಪಡೆಯುವರೆ? ಆ ಮೂಲಕ ರಮೇಶ ಭಾಂಡಗೆ ಉದ್ದೇಶ ಈಡೇರುವುದೆ ಎಂಬ ಕುತೂಹಲ ಉಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts