More

    ಏನಾದರೂ ಆಗು, ಮೊದಲು ಸಂಸ್ಕಾರವಂತನಾಗು…

    ಏನಾದರೂ ಆಗು, ಮೊದಲು ಸಂಸ್ಕಾರವಂತನಾಗು...ಇಂದಿನಿಂದ ಪ್ರಾರಂಭವಾಗುತ್ತಿರುವ ಹೊಸ ಅಂಕಣ ‘ಸಂಡೆ ಸೆಲೆಬ್ರಿಟಿ’. ಪ್ರತಿವಾರ ಕರ್ನಾಟಕದ ಜನಪ್ರಿಯ ವ್ಯಕ್ತಿಗಳು ತಮ್ಮ ಬದುಕು, ಬರಹ ಮತ್ತು ವಿಚಾರಗಳಿಂದ ಓದುಗರಿಗೆ ಸ್ಪೂರ್ತಿ ತುಂಬಲಿದ್ದಾರೆ. ಕಳೆದ 45 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಪ್ರಬುದ್ಧ ಅಭಿನಯದಿಂದ ಕನ್ನಡಿಗರ ಮನರಂಜಿಸುತ್ತಿರುವ ಹಿರಿಯ ನಟ ಅನಂತ್ ನಾಗ್ ಈ ಅಂಕಣದ ಮೊದಲ ಸೆಲೆಬ್ರಿಟಿ.

    ಕನಸಿನೊಳು ನನಸಿನೊಳು

    ಮಾತು ಮತಿ ಮನಸಿನೊಳು

    ಇನಿತಾದೊಡಂ ಹುಸಿಯು ಇರದಿರ್ದೊಡೆ

    ಸತಿ ಶಿರೋಮಣಿ ಇವಳು, ಶವವಾದ ಸುತನವನು

    ಪ್ರೀತಿಯೊಳು ಸತ್ಯವನ್ನು ತಡೆಸಿರ್ದೊಡೆ

    ದೈವಕ್ಕೆ ಧರ್ಮಕ್ಕೆ ನ್ಯಾಯಕ್ಕೆ ತಲೆಬಾಗಿ

    ಪ್ರಜೆಗಳನು ಸುತರಂತೆ ಸಲಹಿರ್ದೊಡೆ

    ಸತ್ಯವೇ ಶಿವನೆಂದು ಶಿವನೇ ಸತ್ಯವು ಎಂದು

    ಮನಸಾರೆ ನಂಬಿ ನಾ ನಡೆದಿರ್ದೊಡೆ

    ಈ ವಧೆಯು ಶಿವನಿಗೆ ಪ್ರಿಯವಾಗಲಿ

    ಸತ್ಯವೇ ಲೋಕದಲಿ ಸ್ಥಿರವಾಗಲಿ…

    ಇತ್ತೀಚೆಗಷ್ಟೇ ನಿಧನರಾದ ಖ್ಯಾತ ಕವಿ ಲಕ್ಷ್ಮೀನಾರಾಯಣ ಭಟ್ಟರು ನನ್ನ ಅಭಿನಯದ ಚಿತ್ರವೊಂದಕ್ಕೆ ರಚಿಸಿದ ಕಂದಪದ್ಯ ಇದು. ಬಹಳ ವರ್ಷಗಳ ಹಿಂದೆ ಬಿಡುಗಡೆಯಾದ ‘ನನ್ನ ದೇವರು’ ಚಿತ್ರದ ಒಂದು ಸನ್ನಿವೇಶದಲ್ಲಿ ನಾನು ರಾಜ ಹರಿಶ್ಚಂದ್ರನ ಪಾತ್ರ ಮಾಡಿದ್ದೆ. ಹರಿಶ್ಚಂದ್ರ ಸತ್ಯವನ್ನು ಎತ್ತಿಹಿಡಿಯುವುದಕ್ಕೆ ತನ್ನ ಹೆಂಡತಿಯನ್ನು ವಧಿಸುವ ಈ ದೃಶ್ಯಕ್ಕೆ ಪೂರಕವಾಗಿ ಅವರೊಂದು ಕಂದಪದ್ಯ ಬರೆದುಕೊಟ್ಟಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಈ ಪದ್ಯಕ್ಕೆ ತಮ್ಮ ಅದ್ಭುತ ಗಾಯನದಿಂದ ಜೀವ ತುಂಬಿದ್ದರು. ಸನ್ನಿವೇಶಕ್ಕೆ ಪೂರಕವಾಗಿ ಈ ಪದ್ಯ ಎಲ್ಲರ ಮೆಚ್ಚುಗೆ ಗಳಿಸಿತ್ತು. ಸತ್ಯ, ದೈವ, ಕರ್ಮ, ನ್ಯಾಯದ ಕುರಿತಾಗಿ ಬೆಳಕು ಚೆಲ್ಲುವ ಈ ಪದ್ಯ, ಈಗಲೂ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿದೆ.

    ಈ ಪದ್ಯವನ್ನು ನೆನಪಿಸಿಕೊಳ್ಳುತ್ತಿದ್ದಂತೆ ಹಲವು ವಿಷಯಗಳು ಮನಸ್ಸಿಗೆ ಬರುತ್ತವೆ. ಧರ್ಮವು ಮೌಲಿಕ ವಸ್ತುಗಳನ್ನು ಸಂಸ್ಕಾರ ರೂಪದಲ್ಲಿ ಯಾವತ್ತೂ ವ್ಯವಸ್ಥಿತವಾಗಿ ಹಿಡಿದಿಡುತ್ತದೆ. ಮನುಷ್ಯನಿಗೆ ಧಾರ್ವಿುಕ ಸಂಸ್ಕಾರಗಳು ಅತ್ಯಗತ್ಯ. ಆ ಸಂಸ್ಕಾರಗಳು ಮನುಷ್ಯನನ್ನು ಉತ್ತಮ ದಾರಿಯಲ್ಲಿ ನಡೆಸುತ್ತವೆ. ಕೆಟ್ಟದನ್ನು ಬಿಟ್ಟು ಒಳ್ಳೆಯದನ್ನು ಹಿಡಿದಿಡುವುದೇ ಸಂಸ್ಕಾರದ ಮೂಲ ಹೇತು. ಈ ಅತ್ಯಮೂಲ್ಯವಾದ ಸಂಸ್ಕಾರಗಳು ಭಗವಂತನ ನೆನಪನ್ನು ನೀಡುತ್ತವೆ. ಧರ್ಮ ಮತ್ತು ಧರ್ಮಸಂಸ್ಕಾರಗಳು ಅಂದರೆ ಒಂದರ್ಥದಲ್ಲಿ ವ್ಯವಸ್ಥೆ, ಸ್ಥಿರತೆ, ಶಿಸ್ತು, ಸಂಯಮ, ಸಮಾಧಾನ ಮತ್ತು ಮನಃಶಾಂತಿ ನೀಡುತ್ತವೆ. ಅಧ್ಯಾತ್ಮವಿದ್ಯೆ ಹೇಳುವುದೇನೆಂದರೆ, ನೀತಿ-ನಿಯಮಗಳು ಶಾಶ್ವತ. ಮನುಷ್ಯನು ಆ ನಿಯಮಗಳಿಗೆ ಅನುಸಾರವಾಗಿ ತಾನು ಸ್ವತಃ ಬದಲಾಗಿ ಜೀವನವನ್ನು ನಡೆಸಬೇಕು. ಆ ದಾರಿಯಲ್ಲಿ ನಡೆಯುವುದೇ ಸಾರ್ಥಕತೆ.

    ಹಿಂದೂ ನಂಬಿಕೆಗಳ ಪ್ರಕಾರ, ಪ್ರತಿಯೊಬ್ಬ ಮನುಷ್ಯ ಸಹ ಹಿಂದಿನ ಜನ್ಮದ ಕೆಲವು ಸಂಸ್ಕಾರಗಳೊಂದಿಗೆ ಹುಟ್ಟುತ್ತಾನಂತೆ. ಅವನ ಜೀವಿತಾವಧಿಯಲ್ಲಿ ಅವನ ಯೋಚನೆ, ಯೋಜನೆ ಮತ್ತು ಕೆಲಸಗಳಿಂದ ಇನ್ನಷ್ಟು ಸಂಸ್ಕಾರವಂತನಾಗುತ್ತಾನೆ. ಈ ಸಂಸ್ಕಾರಗಳು ಮನುಷ್ಯನ ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಗಳನ್ನು ರೂಪಿಸುವುದರ ಜತೆಗೆ ಮನುಷ್ಯನ ಸುಖ-ದುಃಖ, ನೋವು-ನಲಿವಿಗೂ ಮೂಲ ಕಾರಣ ಎಂದು ಹೇಳಲಾಗುತ್ತದೆ.

    ಸಂಸ್ಕಾರವಂತನಾಗಿ ಬಾಳು ಎಂದು ಹಿರಿಯರು ಆಶೀರ್ವದಿಸುವುದನ್ನು ಕೇಳಿದ್ದೀರಿ. ಸಂಸ್ಕಾರವಂತನೆಂದರೆ ಏನು? ಸರಳವಾಗಿ ಹೇಳಬೇಕೆಂದರೆ ಅತ್ಯುತ್ತಮನಾಗು ಎಂದರ್ಥ. ಅತ್ಯುತ್ತಮನಾಗು ಎಂದರೇನು? ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಅರಿಷಡ್ವರ್ಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವನೇ ನಿಜವಾದ ಅತ್ಯುತ್ತಮನು. ಈ ಪ್ರಪಂಚದಲ್ಲಿ ಮನುಷ್ಯನಿಗೆ ಅರಿಷಡ್ವರ್ಗಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆಯೇ? ಕಷ್ಟವಿರಬಹುದು. ಆದರೆ, ಖಂಡಿತ ಅಸಾಧ್ಯವಲ್ಲ. ಇಂದಿನ ಪ್ರಪಂಚ ಮನುಷ್ಯನಿಗೆ ಎಲ್ಲ ತರಹದ ಸುಖಗಳನ್ನೂ ನೀಡಿದೆ. ದುಡ್ಡೊಂದಿದ್ದರೆ ಸಾಕು ಏನು ಬೇಕಾದರೂ ಖರೀದಿಸಬಹುದು, ಎಂಥ ಸುಖವನ್ನು ಬೇಕಾದರೂ ಅನುಭವಿಸಬಹುದು ಎಂಬ ನಂಬಿಕೆ ಹಲವರಲ್ಲಿದೆ. ಅದರಲ್ಲೂ ಇಂದಿನ ಬಹಳಷ್ಟು ಯುವಕ-ಯುವತಿಯರು ಅದನ್ನು ಬಲವಾಗಿ ನಂಬಿದ್ದಾರೆ ಎಂದು ನಿರೂಪಿಸುವುದಕ್ಕೆ ಹಲವು ಘಟನೆಗಳನ್ನು ಉದಾಹರಿಸಬಹುದು.

    ದುಡ್ಡಿದ್ದರೆ ಏನನ್ನಾದರೂ ಖರೀದಿಸಬಹುದು. ಸುಖ- ಸಂತೋಷವನ್ನು ಖರೀದಿಸುವುದಕ್ಕೆ ಸಾಧ್ಯವೇ? ಖಂಡಿತ ಇಲ್ಲ. ಸುಖ, ಸಂತೋಷ, ನೆಮ್ಮದಿ, ತೃಪ್ತಿ ಇವೆಲ್ಲ ಮನಸ್ಸಿಗೆ ಸಂಬಂಧಿಸಿದ್ದು. ಇದು ದೇಹಕ್ಕೆ ಸಂಬಂಧಿಸಿದ್ದಲ್ಲ. ದುಬಾರಿ ಬಟ್ಟೆಗಳನ್ನು ತೊಟ್ಟರೆ ಅದು ಬಾಹ್ಯಸೌಂದರ್ಯವನ್ನು ಹೆಚ್ಚಿಸಬಹುದು. ಆದರೆ, ಅದು ಖುಷಿ ಅಥವಾ ತೃಪ್ತಿ ನೀಡುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಅಂತರಂಗದ ಖುಷಿಯೇ ಬೇರೆ. ಸುಸಜ್ಜಿತವಾದ ಮನೆ, ಕಾರು, ಮೊಬೈಲು… ಇವೆಲ್ಲವೂ ನಿಮ್ಮನ್ನು ಹೊರಗೆ ವಿಜೃಂಭಿಸುವಂತೆ ಮಾಡಬಹುದು. ಆದರೆ, ಒಳಗೆ ಸಂತೋಷವಾಗಿರುವುದಕ್ಕೆ ಇನ್ನೇನೋ ಬೇಕು. ಹಾಗಾದರೆ, ಸಂತೋಷವಾಗಿರುವುದಕ್ಕೆ, ತೃಪ್ತಿಯಾಗಿರುವುದಕ್ಕೆ ಏನು ಬೇಕು? ಶ್ರೀಕೃಷ್ಣ ಹೇಳಿದಂತೆ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆಯೇ, ಕೆಲಸ ಮಾಡುವುದು. ನಾವು ಯಾವುದೇ ಕೆಲಸವನ್ನಾದರೂ ಮಾಡುವುದಕ್ಕೆ ಮುಂಚೆ, ಅದರಿಂದ ನಮಗೆ ಏನು ಪ್ರತಿಫಲ ಎಂದು ಯೋಚಿಸುತ್ತೇವೆ. ಪ್ರಶ್ನೆಗೆ ಉತ್ತರಿಸುವುದಕ್ಕಿಂತ ಮುಂಚೆಯೇ ಎಷ್ಟು ಅಂಕಗಳನ್ನು ಪಡೆಯಬಹುದು ಎಂದು ಲೆಕ್ಕ ಹಾಕುತ್ತಿರುತ್ತೇವೆ. ಮೊದಲು ನಮ್ಮ ಕೆಲಸವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಯಾವುದೇ ನಿರೀಕ್ಷೆಗಳಲ್ಲಿದೆ ಅಚ್ಚುಕಟ್ಟಾಗಿ ಮಾಡುವ ಕಲೆಯನ್ನು ಬೆಳೆಸಿಕೊಳ್ಳಬೇಕು. ಆ ಕ್ಷಣಕ್ಕೆ ನಾವು ಕೊಟ್ಟಿದ್ದಕ್ಕೆ ಬೆಲೆ ಸಿಗದಿರಬಹುದು. ಒಂದಲ್ಲ ಒಂದು ದಿನ ಅದು ಖಂಡಿತ ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತದೆ.

    ಇದು ನಾವು ಮಾಡುವ ಕೆಲಸಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ವಿಷಯಗಳಲ್ಲೂ ಇದೆ. ನಾವೆಷ್ಟು ಕೊಡುತ್ತೇವೋ, ಅದು ಒಂದಲ್ಲ ಒಂದು ದಿನ ನಮಗೆ ಬೂಮರ್ಯಾಂಗ್ ಆಗಿ ವಾಪಸ್ಸು ಬರುತ್ತದೆ. ನಾವು ಪ್ರೀತಿ ಕೊಟ್ಟರೆ ಪ್ರೀತಿ ಸಿಗುತ್ತದೆ.

    ದ್ವೇಷ ಮಾಡಿದರೆ, ಅದರಿಂದ ನಾವೇ ಒಂದಲ್ಲ ಒಂದು ದಿನ ಸುಟ್ಟುಹೋಗುತ್ತೇವೆ. ಹಾಗಾಗಿ ಇರುವಷ್ಟು ದಿನ ಒಳ್ಳೆಯತನ ರೂಢಿಸಿಕೊಂಡು, ನಾಲ್ಕು ಜನರಿಗೆ ಒಳ್ಳೆಯದಾಗುವಂತೆ ಬದುಕಬೇಕು. ಇದೇ ನಿಜವಾದ ಸಂಸ್ಕಾರ. ದೈವಕ್ಕೆ, ಧರ್ಮಕ್ಕೆ, ನ್ಯಾಯಕ್ಕೆ ತಲೆಬಾಗುತ್ತ, ಹಿರಿಯರನ್ನು ಗೌರವಿಸುತ್ತ, ಎಲ್ಲರಿಗೂ ಪ್ರೀತಿ ಹಂಚುತ್ತ, ಎಲ್ಲರ ಜತೆಗೆ ಒಂದಾಗಿ ಬದುಕುವುದೇ ನಿಜವಾದ ಮನುಷ್ಯ ಧರ್ಮ. ಇದನ್ನೇ ಡಿ.ವಿ.ಜಿ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದು…

    ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು

    ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ

    ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಗೆ

    ಎಲ್ಲರೊಳಗೊಂದಾಗು ಮಂಕುತಿಮ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts