More

    ಭಾನುವಾರವೂ ಸಿಗಲಿದೆ ಸಬ್ ರಿಜಿಸ್ಟ್ರಾರ್ ಸೇವೆ; ಏಪ್ರಿಲ್‌ನಿಂದ ರಾಜ್ಯ ವ್ಯಾಪಿ ಜಾರಿ

    ಬೆಂಗಳೂರು: ರಾಜ್ಯದಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಮತ್ತಷ್ಟು ಜನಸ್ನೇಹಿ ಸೇವೆ ನೀಡಲು ಏ.1 ರಿಂದ ಭಾನುವಾರವೂ ಕಾರ್ಯನಿರ್ವಹಿಸಲಿವೆ. ಉದ್ಯೋಗಸ್ಥರು ದಸ್ತಾವೇಜು ನೋಂದಣಿ ಸಲುವಾಗಿ ಕೆಲಸಕ್ಕೆ ರಜೆ ಹಾಕುವ ಅಗತ್ಯ ಇರುವುದಿಲ್ಲ. ವಿಶೇಷ ಸೌಲಭ್ಯ ಪಡೆಯಬಹುದಾಗಿದೆ.

    ಸಾರ್ವಜನಿಕರ ಅನುಕೂಲಕ್ಕಾಗಿ ಉತ್ತಮ ಸೇವೆಯನ್ನು ನೀಡುವ ಹಾಗೂ ಆಡಳಿತ ಸುಧಾರಣೆ ಸಲುವಾಗಿ ಬೆಂಗಳೂರು ನಗರದ ಐದು ನೋಂದಣಿ ಜಿಲ್ಲೆಗಳಲ್ಲಿ ಪ್ರಯೋಗಿಕವಾಗಿ ತಲಾ ಒಂದು ಸಬ್ ರಿಜಿಸ್ಟ್ರಾರ್ ಕಚೇರಿಯನ್ನು 2ನೇ ಮತ್ತು 4ನೇ ಶನಿವಾರ ಮತ್ತು ಎಲ್ಲ ಭಾನುವಾರ ಕರ್ತವ್ಯ ನಿರ್ವಹಿಸುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶಿಸಿತ್ತು. ಅಲ್ಲದೆ, ಭಾನುವಾರ ರಜೆ ಮಾಡಿದ ಕಚೇರಿ ಅಧಿಕಾರಿ, ಸಿಬ್ಬಂದಿಗೆ ಪರ್ಯಾಯ ರಜೆಯನ್ನು ತಿಳಿಸಿರಲಿಲ್ಲ. ಈ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬಗ್ಗೆ ‘ವಿಜಯವಾಣಿ’ ವಿಶೇಷ ವರದಿ ಪ್ರಕಟ ಮಾಡುವ ಮೂಲಕ ಇಲಾಖೆಯ ಗಮನ ಸೆಳೆದಿತ್ತು.

    ಕಂದಾಯ ಇಲಾಖೆಯೂ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯುವ ಆದೇಶವನ್ನು ರಾಜ್ಯ ವ್ಯಾಪಿ ವಿಸ್ತರಿಸಿ ಗುರುವಾರ ಆದೇಶ ಹೊರಡಿಸಿದೆ. ರಜೆ ದಿನದಲ್ಲಿ ಕರ್ತವ್ಯ ನಿರ್ವಹಿಸುವ ಕಚೇರಿ ಅಧಿಕಾರಿ, ಸಿಬ್ಬಂದಿಗೆ ಮಂಗಳವಾರ ರಜೆ ೋಷಣೆ ಮಾಡಿ ಆದೇಶದಲ್ಲಿ ಉಲ್ಲೇಖಿಸಿದೆ.
    ರಾಜ್ಯದ ಎಲ್ಲ ನೋಂದಣಿ ಜಿಲ್ಲೆಗಳ ಉಪ ನೋಂದಣಿ ಕಚೇರಿಗಳಲ್ಲಿ ಒಂದು ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಏಪ್ರಿಲ್ 1 ರಿಂದ ಪ್ರತಿ ಭಾನುವಾರ ಕಾರ್ಯನಿರ್ವಹಿಸಲಿದೆ. ಈ ಕಚೇರಿಗಳಿಗೆ ಅದಕ್ಕೆ ಬದಲಾಗಿ ಆ ವಾರದ ಮಂಗಳವಾರ ಪರಿಹಾರ ರಜೆಯನ್ನು ನೀಡಲು ಇಲಾಖೆ ಆದೇಶಿಸಿದೆ.

    ಇದರಿಂದ ಸರ್ಕಾರಿ ನೌಕರರು ಸೇರಿದಂತೆ ಉದ್ಯೋಗಸ್ಥರಿಗೆ ದಸ್ತಾವೇಜುಗಳ ನೋಂದಣಿ ವೇಳೆ ಕೆಲಸಕ್ಕೆ ರಜೆ ಪಡೆದು ಬರಬೇಕಾಗಿತ್ತು. ಕೆಲವೊಂದು ವೇಳೆ ಕಚೇರಿಯಲ್ಲಿ ತುರ್ತು ರಜೆ ಸಿಗುತ್ತಿರಲಿಲ್ಲ. ರಜೆ ಪಡೆಯದೇ ಹಾಗೇ ನೋಂದಣಿ ಕಚೇರಿಗೆ ಬಂದಿದ್ದರೇ ತಾಂತ್ರಿಕ ಸಮಸ್ಯೆ ಉಂಟಾಗುತ್ತಿತ್ತು. ಇದೀಗ ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯ ಒಂದು ಸಬ್ ರಿಜಿಸ್ಟ್ರಾರ್ ಕಚೇರಿ ಭಾನುವಾರ ಕಾರ್ಯನಿರ್ವಹಿಸುವ ಪರಿಣಾಮ ಉದ್ಯೋಗಸ್ಥರಿಗೆ ಅನುಕೂಲ ಆಗಲಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟ

    ನೋಂದಣಿ ಜಿಲ್ಲೆಯ ಯಾವ ಸಬ್ ರಿಜಿಸ್ಟ್ರಾರ್ ಕಚೇರಿ ಭಾನುವಾರ ತೆರೆದಿರುತ್ತವೆ ಎಂಬ ಮಾಹಿತಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕೃತ ಜಾಲತಾಣದ ‘ಕಾವೇರಿ’ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts