More

    ಬಿಸಿಲ ಝಳಕ್ಕೆ ವಿದ್ಯಾರ್ಥಿಗಳು ಹೈರಾಣ : ಕಲಿಕಾ ಒತ್ತಡದಲ್ಲಿ ವಿದ್ಯಾರ್ಥಿಗಳು, ಮಾನಸಿಕ ಪರಿಸ್ಥಿತಿ ಮೇಲೂ ಕೆಟ್ಟ ಪರಿಣಾಮ

     ರಾಮನಗರ :  ಒಂದೆಡೆ ಬಿಸಿಲ ಝಳ, ಮತ್ತೊಂದೆಡೆ ಶಿಕ್ಷಕರ ಒತ್ತಡ. ಇವುಗಳ ನಡುವೆ ಮುಂಬರುವ ಪರೀಕ್ಷೆ ಸಿದ್ಧತೆ ಧಾವಂತದಲ್ಲಿ ಸಿಲುಕಿ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
    ಸಾಮಾನ್ಯವಾಗಿ ಮಾರ್ಚ್ ಎರಡನೇ ವಾರದಲ್ಲಿ ತರಗತಿಗಳು ಮುಗಿದು, ಪರೀಕ್ಷೆಗಳು ಆರಂಭವಾಗುತ್ತಿದ್ದವು. ಆದರೆ ಈ ಬಾರಿ ಕರೊನಾದಿಂದಾಗಿ ತರಗತಿಗಳ ಆರಂಭ ವಿಳಂಬವಾಗಿರುವ ಕಾರಣ ಬೇಸಿಗೆ ಝಳದಲ್ಲಿ ವಿದ್ಯಾರ್ಥಿಗಳು ಬೇಯುವಂತೆ ಆಗಿದೆ.
    ರಾಮನಗರ ಸೇರಿ ರಾಜ್ಯದಾದ್ಯಂತ ಬಿಸಿಲ ತಾಪ ಹೆಚ್ಚಿದೆ. ಈ ವೇಳೆಗಾಗಲೇ ತರಗತಿಗಳು ಮುಗಿದು ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

    ಆದರೆ ಈಗ ಬೇಸಿಗೆ ತಾಪ ಸುಡುತ್ತಿದ್ದರೂ ತರಗತಿಯಲ್ಲಿಯೇ ಕೂತು ಪಾಠ ಕೇಳಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದಲೇ ಪಾಠ ಕೇಳುವಂತೆ ಆಗಿದೆ. ಅಲ್ಲದೆ, ಬಹುತೇಕ ಶಾಲೆಗಳ ಕಟ್ಟಡಗಳು ಆರ್‌ಸಿಸಿ ಛಾವಣಿ ಹೊಂದಿರುವುದರಿಂದ ಬಿಸಿಲ ತಾಪ ದ್ವಿಗುಣಗೊಂಡು ಮಕ್ಕಳು ಅನ್ಯ ಮನಸ್ಕರಾಗಿಯೇ ಪಾಠ ಕೇಳಬೇಕಾಗಿದೆ.

    ಶಿಕ್ಷಕರ ಒತ್ತಡ: ಕೋವಿಡ್ ಹಿನ್ನೆಲೆಯಲ್ಲಿ 2021-22 ಸಾಲಿನ ತರಗತಿಗಳು ತಡವಾಗಿ ಆರಂಭಗೊಂಡ ಕಾರಣ ಶೇ.30 ಪಠ್ಯಕ್ರಮ ಕಡಿತಗೊಳಿಸಲಾಗಿದೆ. ಆದರೆ ಇರುವ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲೇಬೇಕಾದ ಒತ್ತಡದಲ್ಲಿ ಶಿಕ್ಷಕ ಮತ್ತು ಉಪನ್ಯಾಸಕ ಸಮುದಾಯ ಇದೆ. ಇದರ ಜತೆಗೆ ರಾಜ್ಯ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳೂ ಬೋಧಕ ಸಿಬ್ಬಂದಿ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ, ಈ ಒತ್ತಡ ವಿದ್ಯಾರ್ಥಿಗಳ ಕಡೆಗೆ ವರ್ಗಾವಣೆ ಆಗುತ್ತಿದೆ. ಪ್ರತಿದಿನ ಪ್ರತಿಯೊಬ್ಬ ಶಿಕ್ಷಕರೂ ನೀಡುವ ನೋಟ್ಸ್‌ಗಳು, ಅಸೈನ್‌ಮೆಂಟ್‌ಗಳ ಭಾರದಿಂದ ವಿದ್ಯಾರ್ಥಿಗಳ ಬೆನ್ನು ಬಾಗಿದೆ.

    ಫಲಿತಾಂಶದ ದಾಹ ಬಿಡಿ: ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಎನ್ನುವ ವ್ಯತ್ಯಾಸವಿಲ್ಲದೆ, ಫಲಿತಾಂಶ ದಾಹದಿಂದಾಗಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಭಾರ ಹಾಕಲಾಗುತ್ತಿದೆ. ಪ್ರತಿದಿನ ವಿಶೇಷ ತರಗತಿ ಹೆಸರಲ್ಲಿ ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಗಳ ನಡುವೆ ಬಂಧಿಗಳನ್ನಾಗಿಸುತ್ತಿದ್ದು, ವಿದ್ಯಾರ್ಥಿಗಳು ಖಿನ್ನತೆಗೂ ಒಳಗಾಗುತ್ತಿದ್ದಾರೆ. ಕೆಲವು ಖಾಸಗಿ ಶಾಲೆಗಳಂತೂ ಮುಂದಿನ ವರ್ಷದ ದಾಖಲಾತಿ ಮೇಲೆ ಕಣ್ಣಿಟ್ಟು ಕೋವಿಡ್ ಸಂದರ್ಭದಲ್ಲೂ ಹೆಚ್ಚಿನ ಫಲಿತಾಂಶ ದಾಖಲು ಮಾಡಿದ ಹೆಸರು ಪಡೆಯಲು ವಿದ್ಯಾರ್ಥಿಗಳನ್ನು ಬಲಿಕೊಡುವ ಕೆಲಸ ಮಾಡುತ್ತಿವೆ. ಅತ್ತ ಇಲಾಖೆಗಳೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ಹಾಕಿಸುತ್ತಿದ್ದಾರೆ.

    ಮಕ್ಕಳನ್ನು ಕೇವಲ ಪರೀಕ್ಷಾ ಫಲಿತಾಂಶಕ್ಕಾಗಿ ಅಣಿಗೊಳಿಸುವ ಶಿಕ್ಷಣ ಪದ್ಧ್ದತಿಯನ್ನು ಕೈಬಿಡಬೇಕು. ಈಗ ಮಕ್ಕಳು ಬಿಸಿಲ ಝಳ ಮತ್ತು ಕಲಿಕೆ ಒತ್ತಡದಲ್ಲಿ ಸಿಲುಕಿದ್ದಾರೆ. ಇದರಿಂದ ಅವರನ್ನು ಹೊರತರಬೇಕು, ಇಲ್ಲವಾದರೆ ಶಿಕ್ಷಣ ವ್ಯವಸ್ಥೆ ಮೇಲೆಯೇ ಮಾರಕ ಪರಿಣಾಮ ಬೀರುತ್ತದೆ.

    ಏನು ಮಾಡಬೇಕು?
    1. ಬಿಸಿಲ ಝಳ ತಪ್ಪಿಸಲು ತರಗತಿಗಳನ್ನು ಬೇಗ ಆರಂಭಿಸಬೇಕು.
    2. ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲು ಒತ್ತಡ ಹೇರಬಾರದು.
    3. ವಿಶೇಷ ತರಗತಿ, ಅಸೈನ್ಮೆಂಟ್ ಭಾರ ಕಡಿಮೆ ಮಾಡಬೇಕು.
    4. ಶಿಕ್ಷಕರು ಮತ್ತು ಉಪನ್ಯಾಸಕರ ಮೇಲಿನ ಒತ್ತಡ ಕಡಿಮೆ ಮಾಡಬೇಕು.

    ಡಾ.ನಿರಂಜನಾರಾಧ್ಯ ಶಿಕ್ಷಣ ತಜ್ಞರು
    ಫಲಿತಾಂಶ ಹೆಚ್ಚಳ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನಕ್ಕಿಂತ ಹೆಚ್ಚುವರಿಯಾಗಿ ಒಂದು ಗಂಟೆ ತರಗತಿ ಮಾಡಲು ಸೂಚಿಸಿದ್ದೇನೆ. ಈ ಅವಧಿಯಲ್ಲಿ ಕಠಿಣ ವಿಷಯಗಳನ್ನು ಮಕ್ಕಳಿಗೆ ಕಲಿಸಲು ಸೂಚಿಸಿದ್ದೇನೆ. ಹೆಚ್ಚಿನ ಒತ್ತಡ ಹಾಕುತ್ತಿಲ್ಲ.
    ಗುರುಸಿದ್ದಯ್ಯ ಉಪನಿರ್ದೇಶಕರು,
    ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಮನಗರ
    ಫಲಿತಾಂಶಕ್ಕೆ ಸಭೆ
    ಕಳೆದ ಹಲವು ವರ್ಷಗಳಿಂದಲೂ ಫಲಿತಾಂಶದ ಮೂಲಕ ಶಕ್ತಿ ಸಾಮರ್ಥ್ಯ ಸಾಬೀತುಪಡಿಸಲು ಹೊರಟಿರುವ ಶಿಕ್ಷಣ ಇಲಾಖೆ ಕೋವಿಡ್ ಸಂದರ್ಭದಲ್ಲೂ ಫಲಿತಾಂಶದ ಚಟ ಬಿಟ್ಟಂತೆ ಕಂಡಿಲ್ಲ. ಈಗಾಗಲೇ ಪ್ರಾಂಶುಪಾಲರು ಮತ್ತು ಮುಖ್ಯಶಿಕ್ಷಕರ ಸಭೆ ನಡೆಸಿರುವ ಅಧಿಕಾರಿಗಳು ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ಪಡೆಯಲು ಏನೆಲ್ಲಾ ಕ್ರಮ ಅನುಸರಿಸಬೇಕು ಎನ್ನುವ ಖಡಕ್ ನಿರ್ದೇಶನ ನೀಡಿದ್ದಾರೆ. ಆದರೆ, ಎಲ್ಲಿಯೂ ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಚರ್ಚೆಗಳು ನಡೆದೇ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts