More

    90.70 ಅಡಿ ತಲುಪಿದ ಕೆಆರ್‌ಎಸ್

    ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆ ನೀರಿನ ಮಟ್ಟ 90.70 ಅಡಿ ತಲುಪಿದ್ದು, ಮುಂದಿನ ದಿನಗಳಲ್ಲಿ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

    124.80 ಗರಿಷ್ಠ ಮಟ್ಟ ಇರುವ ಅಣೆಕಟ್ಟೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 19 ಅಡಿಯಷ್ಟು ನೀರಿನ ಸಂಗ್ರಹ ಕಡಿಮೆ ಇದೆ. ಇದರಿಂದ ಕಾವೇರಿ ನೀರನ್ನು ಕುಡಿಯಲು ಅವಲಂಬಿಸಿರುವ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜನತೆಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗುವ ಪರಿಸ್ಥಿತಿ ಇದೆ.

    ಪ್ರಸ್ತುತ ಬೆಳೆಗೆ ನೀರು ನಿಲ್ಲಿಸಲಾಗಿದೆ. 2022ರ ನವೆಂಬರ್‌ನಲ್ಲಿ ಅಣೆಕಟ್ಟೆ ತುಂಬಿತ್ತು. ಆದರೆ, 2023ರಲ್ಲಿ ಅಣೆಕಟ್ಟೆ ಗರಿಷ್ಠ ಮಟ್ಟ 124.80 ತಲುಪಿರಲಿಲ್ಲ. ಸೆಪ್ಟೆಂಬರ್‌ನಲ್ಲಿ 113 ಅಡಿ ತಲುಪಿದ್ದೇ ಗರಿಷ್ಠವಾಗಿತ್ತು. ಅಣೆಕಟ್ಟೆಯ ನೀರಿನ ಮಟ್ಟ 60 ಅಡಿ ತಲುಪಿದರೂ ಕುಡಿಯಲು ಬಳಸಬಹುದಾಗಿದೆ. ನೀರಿನ ಸಂಗ್ರಹ ಕುಸಿಯುತ್ತಿರುವ ಕಾರಣ ಅಣೆಕಟ್ಟೆ ಬರಿದಾಗಿ ಆಟದ ಮೈದಾನದಂತೆ ಕಾಣಿಸುತ್ತಿದೆ.

    ಗುರುವಾರ ಅಣೆಕಟ್ಟೆಯಲ್ಲಿ 90.70(ಗರಿಷ್ಠ 124.80) ಅಡಿ ನೀರಿದ್ದು, ಒಳಹರಿವು 421 ಕ್ಯೂಸೆಕ್, ಹೊರಹರಿವು 756 ಕ್ಯೂಸೆಕ್, 16.359(ಗರಿಷ್ಠ 49.454) ಟಿಎಂಸಿ ಇದೆ.

    10 ವರ್ಷಗಳಲ್ಲಿ ಫೆ. 22 ರಂದು ನೀರಿನ ಸಂಗ್ರಹದ ವಿವರ
    2015ರಲ್ಲಿ 108.89 ಅಡಿ, ಒಳಹರಿವು 302 ಕ್ಯೂಸೆಕ್, ಹೊರಹರಿವು 4390 ಕ್ಯೂಸೆಕ್
    2016ರಲ್ಲಿ 93.60 ಅಡಿ, ಒಳಹರಿವು 391 ಕ್ಯೂಸೆಕ್, ಹೊರಹರಿವು 585 ಕ್ಯೂಸೆಕ್
    2017ರಲ್ಲಿ 78.34 ಅಡಿ, ಒಳಹರಿವು 105 ಕ್ಯೂಸೆಕ್, ಹೊರಹರಿವು 242 ಕ್ಯೂಸೆಕ್
    2018ರಲ್ಲಿ 90.11 ಅಡಿ, ಒಳಹರಿವು 164 ಕ್ಯೂಸೆಕ್, ಹೊರಹರಿವು 360 ಕ್ಯೂಸೆಕ್
    2019ರಲ್ಲಿ 107.65 ಅಡಿ, ಒಳಹರಿವು 135 ಕ್ಯೂಸೆಕ್, ಹೊರಹರಿವು 33090 ಕ್ಯೂಸೆಕ್
    2020ರಲ್ಲಿ 113.70 ಅಡಿ, ಒಳಹರಿವು 486 ಕ್ಯೂಸೆಕ್, ಹೊರಹರಿವು 4138 ಕ್ಯೂಸೆಕ್
    2021ರಲ್ಲಿ 110.82 ಅಡಿ, ಒಳಹರಿವು 1185 ಕ್ಯೂಸೆಕ್, ಹೊರಹರಿವು 3368 ಕ್ಯೂಸೆಕ್
    2022ರಲ್ಲಿ 115.56 ಅಡಿ, ಒಳಹರಿವು 465 ಕ್ಯೂಸೆಕ್, ಹೊರಹರಿವು 4572 ಕ್ಯೂಸೆಕ್
    2023ರಲ್ಲಿ 109.28 ಅಡಿ, ಒಳಹರಿವು 300 ಕ್ಯೂಸೆಕ್, ಹೊರಹರಿವು 1772 ಕ್ಯೂಸೆಕ್

    ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಡ್ರಿಪ್ ಯೋಜನೆಯಡಿ ಹಳೆಯ ಗೇಟ್‌ಗಳನ್ನು ಬದಲಾವಣೆ ಮಾಡಿದ್ದರಿಂದ ಸೋರಿಕೆ ಕಡಿಮೆಯಾಗಿದೆ. ಸದ್ಯಕ್ಕೆ ಕುಡಿಯುವ ನೀರಿಗೆ ಸಮಸ್ಯೆ ಆಗುವುದಿಲ್ಲ.
    ರಘುರಾಮ ಅಧೀಕ್ಷಕ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ, ಮಂಡ್ಯ ವೃತ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts