More

    ಓದುವ ಹವ್ಯಾಸ ಕುಂಠಿತ, ಖಾಲಿ ಕುರ್ಚಿಗಳ ಸಂಕೇತ, ತುಂಬಿ ತುಳುಕುತ್ತಿದ್ದ ಕೇಂದ್ರ ಗ್ರಂಥಾಲಯಕ್ಕೆ ಬರುವ ಆಸಕ್ತಿ ಕಡಿಮೆ

    ಗಣೇಶ್ ಮಾವಂಜಿ ಸುಳ್ಯ
    ಪುಸ್ತಕ ಓದುವವರ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಿದ್ದು ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂಬ ಆತಂಕಕ್ಕೆ ಪುಷ್ಟಿ ನೀಡುತ್ತಿದೆ. ಗ್ರಂಥಾಲಯದ ಕುರ್ಚಿಗಳೆಲ್ಲ ಭರ್ತಿಯಾಗಿ ಜನ ನಿಂತುಕೊಂಡೇ ಓದುವ ಕಾಲವೊಂದಿತ್ತು. ಆದರೆ ಈಗ ಗ್ರಂಥಾಲಯದ ಕುರ್ಚಿಗಳೆಲ್ಲ ಖಾಲಿ ಖಾಲಿ. ಬೆರಳೆಣಿಕೆಯ ಜನ ಲೈಬ್ರರಿಗೆ ಬಂದು ದಿನಪತ್ರಿಕೆ ಓದುತ್ತಾರಾದರೂ ಮೊಬೈಲ್ ಪರದೆಯ ಮೇಲೆ ಕಣ್ಣಾಡಿಸಿ ಕಾಲ ಕಳೆಯುವವರೂ ಇದ್ದಾರೆ.

    ಸುಳ್ಯದ ಕೇಂದ್ರ ಗ್ರಂಥಾಲಯದ ಪರಿಸ್ಥ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಬೆಳಗ್ಗೆ 9ಕ್ಕೆ ತೆರೆದು ರಾತ್ರಿ 7ರ ತನಕ ಓದುಗರನ್ನು ಕೈ ಬೀಸಿ ಕರೆಯುವ ಈ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕ ಓದುವವರ ಸಂಖ್ಯೆ ಕೆಲವೊಮ್ಮೆ 30 ಕೂಡ ದಾಟಿರುವುದಿಲ್ಲ! ಎಂಟು ವರ್ಷಗಳ ಹಿಂದೆ ಈ ಗ್ರಂಥಾಲಯಕ್ಕೆ ಎಷ್ಟು ಜನ ಬಂದು ಹೋಗುತ್ತಿದ್ದರು ಎಂಬ ಅಂಕಿಅಂಶಗಳನ್ನು ನೋಡಿದರೆ ಓದುವವರ ಸಂಖ್ಯೆ ಎಷ್ಟು ಕಡಿಮೆಯಾಗುತ್ತಿದೆ ಎಂಬ ಮಾಹಿತಿ ಸಿಗುತ್ತದೆ. 2013ರ ಜನವರಿಯಲ್ಲಿ 7,000 ಓದುಗರು ಇಲ್ಲಿನ ಗ್ರಂಥಾಲಯಕ್ಕೆ ಬಂದು ಓದಿ ಹೋಗಿದ್ದರೆ ಫೆಬ್ರವರಿಯಲ್ಲಿ 8,060 ಓದುಗರು, ಮಾರ್ಚ್ 8,050, ಏಪ್ರಿಲ್ 8,100, ಮೇ 8,150, ಜೂನ್ 8,175, ಜುಲೈ 8200, ಆಗಸ್ಟ್ 8,210, ಸೆಪ್ಟೆಂಬರ್ 8,220, ನವೆಂಬರ್ 8,300 ಹಾಗೂ ಡಿಸೆಂಬರ್ 8,350 ಓದುಗರು ಭೇಟಿ ನೀಡಿದ್ದರು.

    ಕರೊನಾ ಕಾಲದಲ್ಲಿ ಜನ ಮನೆಯಲ್ಲೇ ಕುಳಿತು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡಿರಬಹುದೆಂಬ ಅಂದಾಜು ಕೆಲವರದ್ದು. ಆದರೆ ಕರೊನೋತ್ತರ ಕಾಲದಲ್ಲಿ ಅಕ್ಟೋಬರ್‌ನಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ ಕೇವಲ 840. ನವೆಂಬರ್‌ನಲ್ಲಿ ಓದುಗರ ಸಂಖ್ಯೆ 650ಕ್ಕೆ ತಲುಪಿತ್ತು. ಡಿಸೆಂಬರ್, ಜನವರಿ ಹಾಗೂ ಫೆಬ್ರವರಿಯಲ್ಲಿ ಭೇಟಿ ನೀಡಿದವರ ಸಂಖ್ಯೆ ಕ್ರಮವಾಗಿ 920, 1,426 ಹಾಗೂ 1,584. ಹಿಂದೆಲ್ಲ ದಿನಪತ್ರಿಕೆಗಳನ್ನು ಓದಲು ಹೆಚ್ಚೆಚ್ಚು ಜನ ಬರುತ್ತಿದ್ದರೆ ಈಗ ಕೆಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರಷ್ಟೇ ಗ್ರಂಥಾಲಯಕ್ಕೆ ಭೇಟಿ ಕೊಡುತ್ತಾರೆ. ಅದೂ ಕೂಡ ತಮ್ಮ ಕಲಿಕೆಗೆ ಅನುಕೂಲವಾಗುವಂಥ ಕೆಲವೊಂದು ಪುಸ್ತಕಗಳನ್ನು ಪಡೆಯಲಷ್ಟೇ ಬರುತ್ತಾರೆ ಎನ್ನುತ್ತಾರೆ 17 ವರ್ಷಗಳಿಂದ ಇದೇ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಶಾಂತ್.

    ಓದುಗರು ಗ್ರಂಥಾಲಯಕ್ಕೆ ಹೋಗಿಯೇ ಓದಬೇಕೆಂದೇನೂ ಇಲ್ಲ. ಓದಿನ ಪ್ರಕ್ರಿಯೆ ಬೇರೆ ಮಾಧ್ಯಮಕ್ಕೆ ರವಾನೆಯಾದ ಕಾರಣದಿಂದ ಗ್ರಂಥಾಲಯಕ್ಕೆ ಹೋಗುವುದನ್ನು ನಿಲ್ಲಿಸಿರಬಹುದು. ಆದರೆ, ಹಿಂದಿನಂತೆ ಕಥೆ, ಕಾದಂಬರಿಗಳನ್ನು ಗ್ರಂಥಾಲಯಕ್ಕೆ ಹೋಗಿ ಓದುವವರ ಸಂಖ್ಯೆ ಗಣನೀಯ ಕಡಿಮೆಯಾಗಿದೆ. ಕೊಂಡು ಓದುವವರ ಸಂಖ್ಯೆಯೂ ಕಡಿಮೆ ಆಗಿದೆ. ಇದು ಸಾಹಿತ್ಯಲೋಕಕ್ಕೆ ಹೊಡೆತ ನೀಡದಿರಲಾರದು. ಮಕ್ಕಳ ಶೈಕ್ಷಣಿಕ ಒತ್ತಡ ಕಡಿಮೆಗೊಳಿಸಿ ಓದುವ ಹವ್ಯಾಸ ವೃದ್ಧಿಸುವ ಸಾಹಿತ್ಯದ ಅಗತ್ಯತೆ ಇದೆ.
    – ಅರವಿಂದ ಚೊಕ್ಕಾಡಿ, ಲೇಖಕ

    ಮುದ್ರಣ ಮಾಧ್ಯಮಗಳಿಗೆ ಸ್ಪರ್ಧೆ ನೀಡುವ ನೆಲೆಯಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಚಾಲ್ತಿಯಲ್ಲಿವೆ. ಈ ಮಾಧ್ಯಮಗಳಿಗೆ ಸಿಗುವ ಪ್ರಚಾರ, ಪ್ರಾಮುಖ್ಯತೆ ಮುದ್ರಣ ಮಾಧ್ಯಮಕ್ಕೆ ಸಿಗುತ್ತಿಲ್ಲ ಎನ್ನುವುದು ಸತ್ಯ. ಹೊಸ ತಲೆಮಾರು ತಮ್ಮ ಕಾಲಕ್ಕೆ ಒಗ್ಗಿಕೊಳ್ಳುವುದು ಸಹಜ. ಹಾಗೆಂದು ಮುದ್ರಣ ಮಾಧ್ಯಮಕ್ಕೆ ಅದರದೇ ಆದ ಮೌಲ್ಯವಿರುವುದು ಸುಳ್ಳಲ್ಲ. ಆ ಮೌಲ್ಯ ಮುದ್ರಣ ಮಾಧ್ಯಮವನ್ನು ಉಳಿಸುತ್ತದೆ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ.
    – ಡಾ.ಸುಂದರ ಕೇನಾಜೆ, ಆಡಳಿತಾಧಿಕಾರಿ, ಡಾ.ಶಿವರಾಮ ಕಾರಂತ ಬಾಲವನ, ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts