More

    ಕಬ್ಬು ಕಟಾವಿಗೂ ಕರೊನಾ ಕಂಟಕ

    ಬೆಳಗಾವಿ: ಅತಿವೃಷ್ಟಿ ಹಾಗೂ ಕೋವಿಡ್-19ನಿಂದಾಗಿ ಕೃಷಿ ಕ್ಷೇತ್ರ, ಸಕ್ಕರೆ ಉದ್ಯಮ ನಲುಗಿರುವ ಬೆನ್ನಲ್ಲೇ, ಇದೀಗ ಕರೊನಾ ಕಾರಣದಿಂದಾಗಿ ಕಬ್ಬು ಕಟಾವಿಗೆ ಮಹಾರಾಷ್ಟ್ರದಿಂದ ‘ಕಾರ್ಮಿಕರ ಗ್ಯಾಂಗ್’ ಬರಲು ಹಿಂದೇಟು ಹಾಕುತ್ತಿವೆ.

    ಈ ಬಾರಿ ಉತ್ತಮ ಮಳೆಯಿಂದಾಗಿ ರೈತರು ಸಮೃದ್ಧವಾಗಿ ಕಬ್ಬು ಬೆಳೆದಿದ್ದಾರೆ. ಆದರೆ, ನೆರೆಯ ಮಹಾರಾಷ್ಟ್ರದಲ್ಲಿ ಅತಿಯಾಗಿ ಹಬ್ಬಿರುವ ಕೋವಿಡ್-19 ನಿಂದಾಗಿ ಕಾರ್ಮಿಕರು ಕಬ್ಬು ಕಟಾವು ಮಾಡಲು ಇಲ್ಲಿಗೆ ಬರುತ್ತಿಲ್ಲ. ಹೀಗಾಗಿ ಕಟಾವು ವಿಳಂಬವಾಗಿ ಬೆಳೆ ಹಾಳಾಗುವ ಆತಂಕ ಕಬ್ಬು ಬೆಳೆಗಾರರನ್ನು ಕಾಡುತ್ತಿದೆ.

    ಸ್ಥಳೀಯವಾಗಿ ಕಾರ್ಮಿಕರ ಕೊರತೆ: ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆ ವ್ಯಾಪ್ತಿಯಲ್ಲಿ 4.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುಳೆ ಕಬ್ಬು, ಹೊಸ ಕಬ್ಬು ತಳಿ ಬೆಳೆಯಲಾಗಿದೆ. ಅಲ್ಲದೆ, ಈ ಜಿಲ್ಲೆಗಳ ವ್ಯಾಪ್ತಿಯ 32 ಸಕ್ಕರೆ ಕಾರ್ಖಾನೆಗಳು ಅಕ್ಟೋಬರ್ ತಿಂಗಳಿನಲ್ಲಿ ಕಬ್ಬು ಕಟಾವು ಹಂಗಾಮು ಆರಂಭಿಸುತ್ತವೆ. ಸ್ಥಳೀಯವಾಗಿ ಕಬ್ಬು ಕಡಿಯಲು ಕಾರ್ಮಿಕರ ಅಭಾವ ಮತ್ತು ಕಬ್ಬು ಕಟಾವು ಯಂತ್ರಗಳ ಕೊರತೆಯಿಂದಾಗಿ ಪ್ರತಿವರ್ಷವೂ ಕಬ್ಬು ಕಟಾವಿಗೆ ಮಹಾರಾಷ್ಟ್ರದ ‘ಕಾರ್ಮಿಕರ ಗ್ಯಾಂಗ್’ ಕರೆಸುತ್ತಾರೆ.

    ಇವರಿಗೆಲ್ಲ ಸಕ್ಕರೆ ಕಾರ್ಖಾನೆಗಳು, ಕಬ್ಬು ಸಾಗಣೆ ಮಾಡುವ ಟ್ರಾೃಕ್ಟರ್‌ಗಳ ಮಾಲೀಕರು ಮುಂಗಡವಾಗಿ ಹಣ ಪಾವತಿಸಿ ಕರೆಸುತ್ತಿದ್ದರು. ಆದರೆ, ಈ ಬಾರಿ ಕೋವಿಡ್-19 ಕಾರಣದಿಂದಾಗಿ ‘ಮಹಾ ಗ್ಯಾಂಗ್’ಗೆ ಬುಕ್ ಮಾಡಲು ಹೆದರುವಂತಾಗಿದೆ. ಕೆಲವು ಕಾರ್ಖಾನೆಗಳು ಬುಕ್ ಮಾಡಿವೆ. ಅದರೆ, ಗ್ಯಾಂಗ್‌ಗಳು ಬಂದಿಲ್ಲ. ಹಾಗಾಗಿ ಕಬ್ಬು
    ಬೆಳೆಗಾರರು ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ.

    2 ಲಕ್ಷ ಕಾರ್ಮಿಕರು: ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತಿವರ್ಷ ಕಬ್ಬು ಕಡಿಯಲು ಮಹಾರಾಷ್ಟ್ರ ಸೇರಿ ವಿವಿಧ ಭಾಗಗಳಿಂದ 2 ಲಕ್ಷದಷ್ಟು ಕಾರ್ಮಿಕರು ಬರುತ್ತಾರೆ.ಇವರಿಗಾಗಿ ಸುಮಾರು 500 ಕೋಟಿ ರೂ. ಖರ್ಚು ಮಾಡಲಾಗುತ್ತದೆ. ‘ಮಹಾ ಗ್ಯಾಂಗ್’ ಬುಕ್ ಮಾಡುವ ಕೆಲಸ ಶುರುವಾಗಿದೆ. ಆದರೆ, ಅಕ್ಟೋಬರ್‌ನಲ್ಲಿ ಕೋವಿಡ್-19 ಸ್ಥಿತಿ ಹೇಗಿರುತ್ತದೆಯೀ ಏನೋ ತಿಳಿಯದಾಗಿದೆ ಎನ್ನುತ್ತಾರೆ ರೈತ ಸಂಘಟನೆ ಮುಖಂಡರಾದ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ್.

    ಒಂದು ಗ್ಯಾಂಗ್‌ಗೆ 10 ಲಕ್ಷ ರೂ. ಪಾವತಿ…!

    ಮಹಾರಾಷ್ಟ್ರದಿಂದ ಕಬ್ಬು ಕಡಿಯಲು ಬರುವ ಇಬ್ಬರು ವ್ಯಕ್ತಿಗಳ ಜೋಡಿಗೆ 1.5 ಲಕ್ಷ ರೂ. ವರೆಗೆ ಕೂಲಿ ನೀಡಬೇಕಾಗುತ್ತದೆ. ಇಂತಹ 12 ಅಥವಾ 15 ಜನರಿರುವ ಒಂದು ಗ್ಯಾಂಗ್‌ಗೆ 10 ಲಕ್ಷ ರೂ. ಪಾವತಿಸಲಾಗುತ್ತದೆ. ಒಬ್ಬ ಕಾರ್ಮಿಕ ದಿನಕ್ಕೆ ಒಂದರಿಂದ ಎರಡು ಟನ್ ಕಬ್ಬು ಕಡಿಯುತ್ತಾನೆ. ಹಾಗಾಗಿ, ಈ ಗ್ಯಾಂಗ್‌ಗಳಿಗೆ ಕರ್ನಾಟಕದಲ್ಲಿ ಭಾರಿ ಬೇಡಿಕೆಯಿಂದೆ.

    ಪ್ರತಿವರ್ಷ ಸಕ್ಕರೆ ಕಾರ್ಖಾನೆಗಳು ಮತ್ತು ಟ್ರಾೃಕ್ಟರ್ ಮಾಲೀಕರು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲೇ ಮುಂಗಡವಾಗಿ ಅರ್ಧ ಹಣ ನೀಡಿ ಕಾರ್ಮಿಕರನ್ನು ಬುಕ್ ಮಾಡಿಕೊಳ್ಳುತ್ತಾರೆ. ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ಮಹಾ ಕಾರ್ಮಿಕರನ್ನು ನಾವು ಬುಕ್ ಮಾಡಿಲ್ಲ. ಕೆಲ ಸಕ್ಕರೆ ಕಾರ್ಖಾನೆಗಳು ಗ್ಯಾಂಗ್‌ಗಳನ್ನು ಬುಕ್ ಮಾಡಿವೆ. ಈ ವರ್ಷ ಕಾರ್ಮಿಕರು ಬಾರದಿದ್ದರೆ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಮೂಡಲಗಿ ತಾಲೂಕಿನ ಕಬ್ಬು ಬೆಳೆಗಾರರಾದ ನಿಂಗಪ್ಪ ಪಾಟೀಲ, ಸುರೇಶ ಎಸ್. ನಾಯಕ್.

    ಕೋವಿಡ್-19 ಹಿನ್ನೆಲೆಯಲ್ಲಿ ಕಬ್ಬು ಕಟಾವಿಗೆ ಕಾರ್ಮಿಕರ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಕಬ್ಬು ಕಟಾವು ಯಂತ್ರಗಳನ್ನು ಹೆಚ್ಚು ಬಳಕೆ ಮಾಡುವ ಕುರಿತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ಹಂಗಾಮಿನಲ್ಲಿ ಕಬ್ಬು ಬೆಳೆಗಾರರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಜಿಲ್ಲಾಡಳಿತದಿಂದ ಕ್ರಮ ವಹಿಸಲಾಗುವುದು.
    | ಎಂ.ಜಿ.ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts