More

    ವಿಕ್ರಾಂತ್ ರೋಣ ನನ್ನ ಮಗಳಿದ್ದಂತೆ

    |ಚೇತನ್ ನಾಡಿಗೇರ್ ಬೆಂಗಳೂರು

    ‘ಕಳೆದ ಕೆಲವು ದಿನಗಳಿಂದ ಚಿತ್ರದ ಬಗ್ಗೆ ಸತತವಾಗಿ ಮಾತಾಡುತ್ತಲೇ ಇದ್ದೇನೆ. ಇದುವರೆಗೂ ನನಗೆ ಗಂಟಲು ನೋವಿನ ಅನುಭವವೇ ಆಗಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಮಾತಾಡಿ ಮಾತಾಡಿ ಗಂಟಲು ನೋಯುತ್ತಿದೆ’ ಎನ್ನುತ್ತಾರೆ ಸುದೀಪ್.

    ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರ ಜೋರಾಗಿ ನಡೆಯುತ್ತಿದೆ. ಈ ಸಂಬಂಧ ತಮ್ಮಮನೆಯ ಟೆರೇಸ್ ಮೇಲೆ ಕಾಫಿ ಹೀರುತ್ತಾ ಮಾತನಾಡಿದ ಅವರು, ‘ನಿಜ ಹೇಳಬೇಕೆಂದರೆ ಪ್ರಚಾರ ಇನ್ನೂ ಶುರು ಆಗಿಯೇ ಇಲ್ಲ. ಇನ್ನಷ್ಟೇ ಶುರುವಾಗಬೇಕಿದೆ. ದೆಹಲಿ, ಮುಂಬೈ, ಹೈದರಾಬಾದ್, ದುಬೈ ಮುಂತಾದ ಕಡೆ ಹೋಗುವುದಿದೆ. ಬರೀ ಪತ್ರಿಕಾಗೋಷ್ಠಿಗಳಷ್ಟೇ ಅಲ್ಲ, ಕಾಲೇಜ್, ಮಾಲ್​ಗಳಿಗೂ ಹೋಗಿ ಪ್ರಚಾರ ಮಾಡುವುದಿದೆ. ನಾನ್ಯಾವತ್ತೂ ಅಷ್ಟೊಂದು ಸೂಟ್​ಕೇಸ್​ಗಳನ್ನು ತೆಗೆದುಕೊಂಡು ಹೋಗಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ನಾಲ್ಕೈದು ಸೂಟ್​ಕೇಸ್​ಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಒಮ್ಮೆ ಹಾಕಿದ ಬಟ್ಟೆ ಇನ್ನೊಮ್ಮೆ ಹಾಕೋಕೆ ಆಗಲ್ಲ’ ಎಂದು ನಕ್ಕರು ಸುದೀಪ್. ‘ವಿಕ್ರಾಂತ್ ರೋಣ’ ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾದಂತೆ ಚಟುವಟಿಕೆಗಳು ಸಹ ಜೋರಾಗುತ್ತಿದೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ತಯಾರಿ ನಡೆಸಿದೆ. ಇಷ್ಟೆಲ್ಲ ಓಡಾಡಬೇಕಿರುವುದರಿಂದ ಪ್ರಚಾರ ಏನಾದರೂ ಸುದೀಪ್​ಗೆ ಹೊರೆ ಅಥವಾ ಒತ್ತಡ ಅಂತ ಅನಿಸುತ್ತಿದೆಯಾ? ಖಂಡಿತಾ ಇಲ್ಲ ಎಂಬ ಉತ್ತರ ಅವರಿಂದ ಬರುತ್ತದೆ.

    ಹೊರೆ ಎಂದುಕೊಂಡರೆ ತಪು್ಪ: ‘ಬಲವಂತ ಆದಾಗ ಹೊರೆ ಅನಿಸುತ್ತದೆ. ಮಾಡೋಕೆ ಇಷ್ಟ ಇಲ್ಲ ಎಂದರೆ ಕಷ್ಟ ಆಗುತ್ತದೆ. ಆದರೆ, ಇದು ನನ್ನ ಮಗು. ನನ್ನ ಮಗಳಿಗೂ, ಚಿತ್ರಕ್ಕೂ ವ್ಯತ್ಯಾಸವಿಲ್ಲ. ನಾನು ನನ್ನ ಪರಿಚಯ ಮಾಡಿಕೊಡುವುದಕ್ಕೆ ಹೋಗುತ್ತಿಲ್ಲ. ‘ವಿಕ್ರಾಂತ್ ರೋಣ’ ಎನ್ನುವ ಮಗುವಿನ ವಿಶೇಷತೆಗಳ ಬಗ್ಗೆ ಪರಿಚಯ ಮಾಡುತ್ತಿದ್ದೇವೆ. ಆ ನಂತರ ಹೊರಗೆ ಬಿಡುತ್ತೇವೆ. ಅದಕ್ಕೂ ಮುನ್ನ ಅಭಿಪ್ರಾಯಕ್ಕಾಗಿ ಈ ಪ್ರಚಾರ. ಇಡೀ ಪ್ರಪಂಚಕ್ಕೆ ಕಥೆ ಹೇಳುವುದಕ್ಕೆ ಹೊರಟಿದ್ದೇವೆ ಎಂದರೆ ಅದನ್ನು ಮಾಡಲೇಬೇಕು. ಅದನ್ನು ಹೊರೆ ಅಂತಂದುಕೊಂಡರೆ ತಪ್ಪಾಗುತ್ತದೆ’ ಎನ್ನುತ್ತಾರೆ ಸುದೀಪ್.

    ಚಿತ್ರದ ಉದ್ದೇಶ ಮುಖ್ಯ: ಯಾವುದೇ ಚಿತ್ರ ಮಾಡುವುದಕ್ಕಿಂತ ಮುಂಚೆ ಅದರ ಉದ್ದೇಶ ಏನು ಅಂತ ಕಂಡುಕೊಳ್ಳಬೇಕು ಎನ್ನುತ್ತಾರೆ ಸುದೀಪ್. ಎಲ್ಲ ಚಿತ್ರಗಳು ಸಹ ಪ್ಯಾನ್ ಇಂಡಿಯಾ ಸಿನಿಮಾಗಳಾಗುವುದಕ್ಕೆ ಸಾಧ್ಯವಿಲ್ಲ. ಕಥೆಗೆ ತಕ್ಕ ಹಾಗೆ ಚಿತ್ರ ಮಾಡಬೇಕು. ಈ ಚಿತ್ರದಲ್ಲಿ ‘ಜುಮಾಂಜಿ’, ‘ಟಾರ್ಜನ್’ನಂತಹ ಪ್ರಪಂಚ ಸೃಷ್ಟಿ ಮಾಡುವುದಕ್ಕೆ ಅವಕಾಶ ಸಿಕ್ಕಿತು. ‘ಅವತಾರ್’ ಚಿತ್ರ ನೋಡಿದ್ದರೆ, ಅದೇ ಒಂದು ವಿಭಿನ್ನ ಪ್ರಪಂಚ. ಇದು ಸಹ ಅದೇ ರೀತಿ. ಇಲ್ಲಿ ವಿಭಿನ್ನವಾಗೇನೋ ಮಾಡುವ ಅವಕಾಶ ಇತ್ತು. ಅದಕ್ಕೆ ಸರಿಯಾಗಿ ಚಿತ್ರ ಬೆಳೆಯುತ್ತಾ ಹೋಯಿತು. ಇಲ್ಲಿ ನಿರ್ವಪಕ ಮಂಜು ಕೊಡುಗೆ ದೊಡ್ಡದಿದೆ. ಸಾಕಷ್ಟು ಜನ ಹೆದರಿಸಿದರೂ ಅವರು ಚಿತ್ರ ನಿಲ್ಲಿಸಲಿಲ್ಲ. ಚಿಕ್ಕ ಥಾಟ್​ನಿಂದ ಶುರುವಾಗಿದ್ದು ಈಗ ದೊಡ್ಡದಾಗಿದೆ’ ಎನ್ನುತ್ತಾರೆ ಸುದೀಪ್.

    ಔಟ್​ಪುಟ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ: ಈ ಚಿತ್ರಕ್ಕೆ ಏನು ಬೇಕೋ ಅದನ್ನು ಕೊಡುವ ಪ್ರಯತ್ನ ಮಾಡುತ್ತೇನೆಯೇ ಹೊರತು, ಔಟ್​ಪುಟ್ ಹೇಗೆ ಬರುತ್ತದೆ, ಜನ ಏನನ್ನುತ್ತಾರೆ ಎಂದು ಯೋಚಿಸುವುದಿಲ್ಲ ಎನ್ನುತ್ತಾರೆ ಸುದೀಪ್. ‘ಯಾರ್ಯಾರ ರುಚಿ ಏನು ಗೊತ್ತಿಲ್ಲ. ಕೋಟಿಕೋಟಿ ಜನ ಇದ್ದಾರೆ. ಎಲ್ಲರ ಟೇಸ್ಟ್ ಅರ್ಥ ಮಾಡಿಕೊಳ್ಳುವುದು ಕಷ್ಟ. ಒಬ್ಬರಿಗೆ ಹಿಡಿಸಿದ್ದು, ಇನ್ನೊಬ್ಬರಿಗೆ ಹಿಡಿಸುವುದಿಲ್ಲ. ಎಲ್ಲರೂ ಅವರವರ ಮಟ್ಟದಲ್ಲಿ ಸರಿ ಇರುತ್ತಾರೆ. ನಾನು ಯಾರಿಗೋ ಸಿನಿಮಾ ಮಾಡುವುದಿಲ್ಲ. ಕಥೆ ಕೇಳಿದ ದಿನ ಎಕ್ಸೈಟ್ ಆಯಿತು. ಏನು ಮಾಡಬೇಕೆಂದುಕೊಂಡೆವೋ ಅದನ್ನು ಮಾಡೋಣ. ಆ ನಂತರ ಜನರ ಮುಂದಿಡೋಣ. ಅವರು ಇಷ್ಟಪಟ್ಟರೂ ಹೊಸ ಸಿನಿಮಾ ಮಾಡಬೇಕು. ಇಷ್ಟಪಡದಿದ್ದರೂ ಇನ್ನೊಂದು ಸಿನಿಮಾ ಮಾಡಲೇಬೇಕು. ಚಿತ್ರ ಏನಾಗುತ್ತದೋ ಎಂಬ ಒತ್ತಡದಲ್ಲಿ ಕೆಲಸ ಮಾಡುವುದಿಲ್ಲ. ನನಗೆ ಸಿನಿಮಾ ಅಂದರೆ ಇಷ್ಟ. ಅದು ಬಿಟ್ಟು ನನಗೆ ಬೇರೆ ಗೊತ್ತಿಲ್ಲ. ಹಾಗಂತ ತಪು್ಪಗಳನ್ನು ಮಾಡುವುದಿಲ್ಲ ಎಂದಲ್ಲ. ತಪು್ಪ ಮಾಡುತ್ತೇನೆ. ಮಾಡುತ್ತಲೇ 26 ವರ್ಷ ಕಳೆದೆ. ಯಶಸ್ಸು ಬರುತ್ತದೆ. ಹೋಗುತ್ತದೆ. ನಾವು ಹ್ಯಾಂಡಲ್ ಮಾಡಬೇಕಾಗಿರುವುದು ಸೋಲುಗಳನ್ನು. ಜೀವನದಲ್ಲಿ ಸಾಕಷ್ಟು ಸೋಲು ನೋಡಿದ್ದೇನೆ. ಹಾಗಾಗಿ, ಅದು ವಿಶೇಷವೇನಲ್ಲ. ಅದರ ನಂತರವೂ ಒಂದು ಯಶಸ್ಸು ಬರುತ್ತದೆ. ಈ ಸಂದರ್ಭದಲ್ಲಿ ತಾಳ್ಮೆ ಬಹಳ ಮುಖ್ಯ’ ಎಂಬುದು ಅವರ ಅಭಿಪ್ರಾಯ.

    ಸೂಪರ್ ಹೀರೋ ಕಥೆ ಅಲ್ಲ: ‘ವಿಕ್ರಾಂತ್ ರೋಣ’ ಎಲ್ಲರೂ ಅಂದುಕೊಂಡಂತೆ ಸೂಪರ್ ಹೀರೋ ಕಥೆ ಅಲ್ಲ ಎನ್ನುತ್ತಾರೆ ಸುದೀಪ್. ‘ಇದೊಂದು ಸಾಮಾನ್ಯನೊಬ್ಬನ ಕಥೆ. ಅವನು ಹೇಗೆ ಹೀರೋ ಆಗುತ್ತಾನೆ ಎನ್ನುವುದು ಕಥೆ. ಇಲ್ಲಿ ಸುಮ್ಮನೆ ಏನೇನೋ ತುರುಕುವುದಕ್ಕೆ ಹೋಗಿಲ್ಲ. ಚಿತ್ರ ನೋಡಿದ ಪ್ರೇಕ್ಷಕರು ಅವನನ್ನು ಹೃದಯದಲ್ಲಿ ಕೂರಿಸಿಕೊಂಡು ಹೋಗುತ್ತಾರೆ ಎಂಬ ನಂಬಿಕೆ ಇದೆ. ಏಕೆಂದರೆ, ಇದು ಬರೀ ಬೇರೆ ಪ್ರಪಂಚ ಅಥವಾ ಫ್ಯಾಂಟಸಿ ಅಷ್ಟೇ ಅಲ್ಲ. ಚಿತ್ರದಲ್ಲಿ ಸಾಕಷ್ಟು ಸೆಂಟಿಮೆಂಟ್ ಇದೆ. ‘ಹುಚ್ಚ’, ‘ಈಗ’ ಬಿಟ್ಟರೆ ಇದರಲ್ಲಿ ಅವರ ಅಭಿನಯ ನೋಡಬಹುದು ಎಂದು ಹೇಳುವುದನ್ನು ಕೇಳಿರಬಹುದು. ಹಾಗಿರುವಾಗ, ಇದು ಸುಮ್ಮನೆ ಹೀರೋಯಿಸಂ ಪಿಕ್ಚರ್ ಅಲ್ಲ’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts