More

    ಸುದ್ದಿ ಸಮಗ್ರ: ಚೀನಾ ಖೆಡ್ಡಾದಲ್ಲಿ ಬಡದೇಶಗಳು- ಬೆಲ್ಟ್​ ರೋಡ್​ನಿಂದ 28.57 ಲಕ್ಷ ಕೋಟಿ ರೂ. ಋಣಬಾಧೆ

    ಕರೊನಾ ಜನನ ಮತ್ತು ಪ್ರಸರಣದ ವಿಚಾರದಲ್ಲಿ ಜಾಗತಿಕ ದೇಶಗಳು ಚೀನಾ ಬಗ್ಗೆ ಸಂಶಯದಿಂದ ನೋಡುತ್ತಿರುವಾಗಲೇ, ಚೀನಾದ ಮತ್ತೊಂದು ಕಿತಾಪತಿ ಸದ್ದುಮಾಡುತ್ತಿದೆ. ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್​ ಅವರ ಮಹತ್ವಾಕಾಂೆಯ ಬೆಲ್ಟ್​ ರೋಡ್​ ಇನಿಶಿಯೇಟಿವ್​ (ಬಿಆರ್​ಐ) ಯೋಜನೆಗೆ ಮರುಳಾಗಿರುವ ಅನೇಕ ಬಡ ರಾಷ್ಟ್ರಗಳು ಈಗ ಭಾರಿ ಋಣಬಾಧೆಯಿಂದ ನರಳುತ್ತಿವೆ. 28.57 ಲಕ್ಷ ಕೋಟಿ ರೂಪಾಯಿ (385 ಬಿಲಿಯನ್​ ಡಾಲರ್​) ಸಾಲದ ಶೂಲಕ್ಕೆ ಸಿಲುಕಿ, ತೀರಿಸಲಾಗದೆ ಚೀನಾ ಮುಂದೆ ಮಂಡಿಯೂರುವಂತಹ ದೈನೇಸಿ ಸ್ಥಿತಿಗೆ ಬಂದಿವೆ. ಬೆಲ್ಟ್​ ರೋಡ್​ ಯೋಜನೆಯಲ್ಲಿ 3ನೇ ಒಂದು ಭಾಗದಷ್ಟು ಯೋಜನೆಗಳು ಭ್ರಷ್ಟಾಚಾರ ಅಥವಾ ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆಯಿಂದ ಸ್ಥಗಿತಗೊಂಡಿವೆ ಎಂದು ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಲ್ಯಾಬ್​ “ಏಡ್​ಡೇಟಾ’ ಅಧ್ಯಯನ ತಿಳಿಸಿದೆ.

    ಚೀನಾದ ಬಿಆರ್​ಐ ಯೋಜನೆಯನ್ನು ಒಪ್ಪಿಕೊಂಡಿರುವ ದೇಶಗಳ ಪೈಕಿ ಕಡಿಮೆ ಮತ್ತು ಮಧ್ಯಮ ಪ್ರಮಾಣ ಆದಾಯ ಹೊಂದಿರುವ 45 ದೇಶಗಳು ಸಾಲದ ಋಣದಲ್ಲಿ ಬಿದ್ದಿವೆ. ತಮ್ಮ ತಮ್ಮ ದೇಶದ ಒಟ್ಟು ದೇಶೀಯ ಉತ್ಪನ್ನ ದರದಲ್ಲಿ (ಜಿಡಿಪಿ) ಶೇ. 10ಕ್ಕಿಂತ ಹೆಚ್ಚು ಮೊತ್ತವನ್ನು ಇವು ಚೀನಾಕ್ಕೆ ಮರುಪಾವತಿಸಬೇಕಿದೆ ಎಂದು ಅಮೆರಿಕ ವಜಿರ್ನಿಯಾದ ವಿಲಿಯಂ ಆ್ಯಂಡ್​ ಮೇರಿ ಕಾಲೇಜಿನ ಸಹಕಾರದಲ್ಲಿ ಏಡ್​ಡೇಟಾ ನಡೆಸಿರುವ ಅಧ್ಯಯನ ಹೇಳಿದೆ.
    ಈ ಯೋಜನೆಗಾಗಿ ಚೀನಾದ ಬ್ಯಾಂಕ್​ ಮತ್ತು ಕಂಪನಿಗಳ ಜತೆಗೆ ಬಡರಾಷ್ಟ್ರಗಳು ಹೂಡಿಕೆ ಒಪ್ಪಂದ ಮಾಡಿಕೊಂಡಿವೆ. ಆದರೆ ಇದು ಪಾರದರ್ಶಕವಾಗಿಲ್ಲ. ಈ ನೆರವಿನ ಹಣವನ್ನು ಯೋಜನೆ ಅನುಷ್ಠಾನವಾಗುತ್ತಿರುವ ದೇಶದ ಸರ್ಕಾರಕ್ಕೆ ನೀಡಬೇಕಿತ್ತು. ಆದರೆ, ಇದು ನೇರವಾಗಿ ಯೋಜನೆ ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಸಂದಾಯವಾಗಿದೆ. ಇದಕ್ಕೆ ಸರ್ಕಾರಗಳು ಖಾತ್ರಿ ಆಗಿವೆ. ಹೀಗಾಗಿ ಬಡ ರಾಷ್ಟ್ರಗಳು ಸಾಲಕೂಪದಲ್ಲಿ ಸಿಲುಕಿವೆ ಮತ್ತು ಒಂದು ಡಜನ್​ಗೂ ಹೆಚ್ಚು ರಾಷ್ಟ್ರಗಳಿಗೆ ಚೀನಾಕ್ಕೆ ತಾವೆಷ್ಟು ಸಾಲ ಮರುಪಾವತಿಸಬೇಕು ಎಂಬ ನಿಖರ ಲೆಕ್ಕವೂ ತಿಳಿದಿಲ್ಲ ಎಂದು ಏಡ್​ಡೇಟಾ ಎಕ್ಸಿಕ್ಯುಟಿವ್​ ಡೈರೆಕ್ಟರ್​ ಬ್ರಾಡ್​ ಪಾರ್ಕ್ಸ್​ ಹೇಳಿದ್ದಾರೆ.

    ಮೊದಮೊದಲು ಬಿಆರ್​ಐಗೆ ಸೇರಲು ತುದಿಗಾಲಲ್ಲಿ ನಿಂತಿದ್ದ ವಿವಿಧ ರಾಷ್ಟ್ರಗಳ ನಾಯಕರಿಗೆ ಇದು ಸಾಲದ ಪೆಡಂಭೂತವೆಂದು ಈಗ ಅರ್ಥವಾಗಿದೆ. ಹೀಗಾಗಿ ಈ ಯೋಜನೆಯನ್ನು ರದ್ದುಗೊಳಿಸುತ್ತಿದ್ದಾರೆ. ಕುಂಟುತ್ತ ಸಾಗಿರುವ ಕಾಮಗಾರಿಗಳಿಗೆ ಇನ್ನಷ್ಟು ಹಣ ಒದಗಿಸಲಾಗದೆ ಕೆಲಸವನ್ನು ಸ್ಥಗಿತಗೊಳಿಸುತ್ತಿದ್ದಾರೆ ಎಂದು ಪಾರ್ಕ್ಸ್​ ತಿಳಿಸಿದ್ದಾರೆ.

    ಸಾಲದಲ್ಲಿ ಶೇ. 70ರಷ್ಟು ಹಣ ಚೀನಾದ ಬ್ಯಾಂಕ್​ಗಳು ಅಥವಾ ಚೀನಾದ ಕಂಪನಿಗಳು ಸ್ಥಳಿಯರ ಜತೆಗೂಡಿ ನಡೆಸುತ್ತಿರುವ ಜಂಟಿ ವ್ಯವಹಾರಕ್ಕೆ ಸಂದಾಯವಾಗಿದೆ. ಹೀಗಾಗಿ ಅನೇಕ ರಾಷ್ಟ್ರಗಳು ಹೊಸದಾಗಿ ಸಾಲ ಪಡೆಯಲೂ ಆಗದೆ, ಇತ್ತ ಕಾಮಗಾರಿಗಳೂ ಪೂರ್ಣವಾಗದೆ ಎಡಬಿಡಂಗಿ ಸ್ಥಿತಿಯನ್ನು ಎದುರಿಸುತ್ತಿವೆ. ಬೆಲ್ಟ್​ ರೋಡ್​ ಯೋಜನೆ ಒಪ್ಪಿಕೊಂಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿವೆ. ಆದರೆ, ಚೀನಾ ಮಾತ್ರ ಮತ್ತಷ್ಟು ಸಂಪದ್ಭರಿತವಾಗುತ್ತಿದೆ ಎಂದು “ಏಡ್​ಡೇಟಾ’ ವರದಿ ವಾಸ್ತವ ಚಿತ್ರಣವನ್ನು ತೆರೆದಿಟ್ಟಿದೆ.

    ಪಾಕ್​ನಲ್ಲಿ ಪರ-ವಿರೋಧ
    ಪಾಕಿಸ್ತಾನದ ನೈಋತ್ಯ ಭಾಗದ ತೀರ ಹಿಂದುಳಿದಿರುವ ಪ್ರಾಂತ್ಯವಾದ ಬಲೂಚಿಸ್ತಾನದ ಸ್ಥಳಿಯರು ಬಿಆರ್​ಐ ಯೋಜನೆ ಬಗ್ಗೆ ಉತ್ಸುಕರಾಗಿದ್ದಾರೆ. ಈ ಯೋಜನೆಯಿಂದ ಒಂದಿಷ್ಟು ಹಣ ಸಿಗುತ್ತಿದೆ ಎಂದು ಹರ್ಷಚಿತ್ತರಾಗಿದ್ದಾರೆ. ಆದರೆ, ಈ ಹಣವನ್ನು ಲಪಟಾಯಿಸಲು ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ಮಧ್ಯೆ, ಅಭಿವೃದ್ಧಿ ಹೆಸರಿನಲ್ಲಿ ಬಲೂಚಿಸ್ತಾನದ ಸಂಪತ್ತನ್ನು ಪಾಕ್​ ಸರ್ಕಾರ ಚೀನಾಕ್ಕೆ ಧಾರೆ ಎರೆದಿದೆ ಎಂದು ಬಲೂಚ್​ ಪ್ರತ್ಯೇಕತಾ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

    ಹಿನ್ನೆಲೆ
    2013ರಲ್ಲಿ “ಒನ್​ ಬೆಲ್ಟ್​ ಒನ್​ ರೋಡ್​ ಇನಿಶಿಯೇಟಿವ್​’ ಹೆಸರಿನಲ್ಲಿ ಆರಂಭವಾದ ಯೋಜನೆ ಖಂಡಾಂತರಗಳನ್ನು ಬೆಸೆಯುವ ಜಗತ್ತಿನ ಅತಿ ದೊಡ್ಡ “ಸಿಲ್ಕ್​ ರೂಟ್​’ ಎಂದು (ಶತಮಾನಗಳ ಹಿಂದೆ ಚೀನಾ ರೇಷ್ಮೆ ಉತ್ಪಾದನೆ ಆರಂಭಿಸಿದಾಗ ಜಾಗತಿಕ ವ್ಯಾಪಾರ ನಡೆದ ಮಾರ್ಗ) ಚೀನಾ ಬಣ್ಣಿಸಿತು. ಇದು ಜಾಗತಿಕ ಮೈತ್ರಿಗೆ ಹೊಸ ವೇದಿಕೆ ಆಗುತ್ತದೆ ಎಂದು ಬಿಂಬಿಸಿತು. ಆಫ್ರಿಕಾ ಮತ್ತು ಕೇಂದ್ರ ಏಷ್ಯಾದ 163 ದೇಶಗಳಲ್ಲಿ 62 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು (843 ಬಿಲಿಯನ್​ ಡಾಲರ್​) ಹೂಡಿಕೆಯೊಂದಿಗೆ ಮೂಲಸೌಕರ್ಯಗಳಾದ ರಸ್ತೆ, ಸೇತುವೆ, ರೈಲು ಮಾರ್ಗ, ಬಂದರು, ಆಸ್ಪತ್ರೆ ನಿರ್ಮಾಣವನ್ನು ಘೋಷಿಸಿತು. ಇದಕ್ಕೆ ಭಾರತ ಸೇರಿ ಅನೇಕ ರಾಷ್ಟ್ರಗಳ ಸಹಮತ ವ್ಯಕ್ತಪಡಿಸದ ಕಾರಣ ಇದನ್ನು ಬೆಲ್ಟ್​ ರೋಡ್​ ಇನಿಶಿಯೇಟಿವ್​ (ಬಿಆರ್​ಐ) ಯೋಜನೆ ಎಂದು ಮರುನಾಮಕರಣ ಮಾಡಿ ಅನುಷ್ಠಾನ ಮಾಡುತ್ತಿದೆ.

    ಚೀನಾ ನೀಡುತ್ತಿರುವ ಸಾಲಕ್ಕೆ ಅಧಿಕ ಬಡ್ಡಿ ದರವಿದೆ ಮತ್ತು ಇದರ ಮರುಪಾವತಿ ಅವಧಿ ಕೂಡ ಕಡಿಮೆ. ಚೀನಾ ಹೇಳುವಂತೆ ಬಿಆರ್​ಐ ವಿಶ್ವ ಸಮುದಾಯದ ಮೈತ್ರಿ ಕುದುರಿಸುವ ದೊಡ್ಡ ಯೋಜನೆಯಲ್ಲ. ಬದಲಿಗೆ ತನ್ನ ಲಾಭಕ್ಕಾಗಿ ಬಡರಾಷ್ಟ್ರಗಳ ಮೇಲೆ ಚೀನಾ ಆಡುತ್ತಿರುವ ಬೇಟೆ.
    |ಬ್ರಾಡ್​ ಪಾರ್ಕ್ಸ್​, ಏಡ್​ಡೇಟಾ ಎಕ್ಸಿಕ್ಯುಟಿವ್​ ಡೈರೆಕ್ಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts