More

    ಒಂಬತ್ತರ ಬಾಲಕಿಗೆ ಯಶಸ್ವಿ ಚಿಕಿತ್ಸೆ: ಸತತ ಪರಿಶ್ರಮಕ್ಕೆ ಫಲ

    ವಿಜಯವಾಣಿ ಸುದ್ದಿಜಾಲ ಉಳ್ಳಾಲ

    ಒಂಬತ್ತು ತಿಂಗಳಲ್ಲೇ ಕಣ್ಣಿನ ಮೂಲಕ ಕಾಣಿಸಿಕೊಂಡ ಕ್ಯಾನ್ಸರ್, ದೇಹದ ವಿಭಿನ್ನ ಭಾಗಗಳಾದ ತೊಡೆಯ ಮೂಳೆ, ಕರುಳು ಮತ್ತು ಶ್ವಾಸಕೋಶಕ್ಕೆ ಹರಡಿದ್ದು ಇದರ ನಿಯಂತ್ರಣಕ್ಕೆ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ವೈದ್ಯರ ತಂಡ ತೋರಿಸಿದ ಮಾನವೀಯ ಸೇವೆ, ಸತತ ಪರಿಶ್ರಮ ಫಲ ನೀಡಿದೆ. ಯೆನೆಪೋಯ ವೈದ್ಯರ ಚಿಕಿತ್ಸೆ ಫಲಿಸಿದ್ದು ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಲಾಗಿದೆ.

    ಕೇರಳ ರಾಜ್ಯದ ಕೊಲ್ಲಂ ಮೂಲದ ಶೈಜು ಖಾನ್-ಶೈಮಾ ದಂಪತಿಯ ಪುತ್ರಿಗೆ ಒಂಬತ್ತನೇ ತಿಂಗಳಲ್ಲೇ ಕಣ್ಣಿನ ಕ್ಯಾನ್ಸರ್ ಕಾಣಿಸಿದ್ದು ಮಧುರೈ ಮತ್ತು ಹೈದರಾಬಾದ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. 2021ರಲ್ಲಿ ತೊಡೆಯಲ್ಲಿ ಕಾಯಿಲೆ ಕಾಣಿಸಿಕೊಂಡು ಕೊಚ್ಚಿ ಮತ್ತು ತಿರುವನಂತಪುರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. 2022ರಲ್ಲಿ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಕೊಚ್ಚಿಯಲ್ಲಿ ಚಿಕಿತ್ಸೆ ನೀಡಿದ್ದು, 2023ರಲ್ಲಿ ತಿರುವನಂತಪುರದ ಸರ್ಕಾರಿ ಕಾಲೇಜಿನಲ್ಲಿ ಕರುಳಿನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಿದ ಬಳಿಕ ಕ್ಯಾಲಿಕಟ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಈ ಸಮಯದಲ್ಲಿ ಶ್ವಾಸಕೋಶದ ದ್ವಿತೀಯಕಗಳ ಕ್ಯಾನ್ಸರ್‌ಗೆ ಹೆಚ್ಚಿನ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ಕಾರಣ ‘ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್’ನಲ್ಲಿ ಮುಂದಿನ ನಿರ್ವಹಣೆ ಕುರಿತು ಚರ್ಚಿಸಿ ಶಸ್ತ್ರಚಿಕಿತ್ಸೆ ಬಗ್ಗೆ ನಿರ್ಧರಿಸಲಾಯಿತು. ಇದು ಕಷ್ಟಕರ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಮಂಗಳೂರಿನ ಡಾ.ಜಲಾಲುದ್ದೀನ್ ಅಕ್ಬರ್ ಬಳಿ ಕರೆದೊಯ್ಯಲಾಯಿತು.

    ಸತತ 10 ಗಂಟೆ ಶಸ್ತ್ರಚಿಕಿತ್ಸೆ

    ಜುಲೇಖಾ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಟ್ಯೂಮರ್ ಬೋರ್ಡ್‌ನಲ್ಲಿ ಸತತ 10 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಶ್ವಾಸಕೋಶ ಹಾಗೂ ಎರಡು ಪಕ್ಕೆಲುಬುಗಳಲ್ಲಿ ಹರಡಿದ್ದ 40ಕ್ಕೂ ಅಧಿಕ ಗಡ್ಡೆಗಳನ್ನು ತೆಗೆದು ಹಾಕಿದ್ದಾರೆ. ಇದು ಅತ್ಯಂತ ಅಪೂರ್ವ ಶಸ್ತ್ರಚಿಕಿತ್ಸೆ ಎನಿಸಿದ್ದು ಬಾಲಕಿ ಒಂಬತ್ತೇ ದಿನಗಳಲ್ಲಿ ಚೇತರಿಸಿಕೊಂಡಿದ್ದಾಳೆ.

    ಈ ಬಗ್ಗೆ ಶುಕ್ರವಾರ ಯೆನೆಪೋಯ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ.ಜಲಾಲುದ್ದೀನ್ ಅಕ್ಬರ್, ಇದು ಅಪೂರ್ವ ಪ್ರಕರಣವಾಗಿದ್ದು ಚಿಕಿತ್ಸೆ ದುಬಾರಿಯಾಗಿದ್ದರೂ ನಾವು ಮಗುವಿನ ಜೀವ ಉಳಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇವೆ. ಮಗುವಿನ ಬಲಭಾಗ ಸಂಪೂರ್ಣ ಗುಣಮುಖವಾಗಿದೆ. ಮಗುವಿನ ಚಿಕಿತ್ಸೆಗಾಗಿ ಹೆತ್ತವರು ಹಲವು ಆಸ್ಪತ್ರೆಗಳಿಗೆ ಓಡಾಡಿದ್ದರು. ಇಷ್ಟು ದೊಡ್ಡ ಮಟ್ಟದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟರೂ ಬಾಲಕಿ ಚುರುಕಾಗಿದ್ದಾಳೆ. ಉಪಕುಲಪತಿ ಡಾ.ವಿಜಯಕುಮಾರ್ ಎಂ. ಮಾರ್ಗದರ್ಶನದಲ್ಲಿ ಡಾ.ರೋಹನ್ ಶೆಟ್ಟಿ, ಡಾ.ಎಚ್.ಟಿ.ಅಮರ್ ರಾವ್, ಡಾ.ನೂರ್ ಮೊಹಮ್ಮದ್ ಅವರನ್ನೊಳಗೊಂಡ ತಂಡ ಶಸ್ತ್ರಚಿಕಿತ್ಸೆ ಮಾಡಿದ್ದು, ಡಾ.ತಿಪ್ಪೇಸ್ವಾಮಿ, ಡಾ.ಸಂದೇಶ್, ಡಾ.ಆದರ್ಶ ಸಹಕರಿಸಿದ್ದರು ಎಂದರು.

    ಸಂತಸದಲ್ಲೂ ಆತಂಕ

    ಚಿಕಿತ್ಸೆಯ ಬಗ್ಗೆ ಮಾತನಾಡಿದ ಬಾಲಕಿಯ ತಂದೆ ಶೈಜು ಖಾನ್, ಒಂಬತ್ತು ವರ್ಷದಲ್ಲಿ ನಿರಂತರ ಓಡಾಡಿದ್ದೇವೆ. ನನ್ನ ಮಗಳು ಬದುಕಿ ಬಂದಿದ್ದು ನಿಜಕ್ಕೂ ಅದ್ಭುತ. ಈಗ ಮಗಳು ಆರೋಗ್ಯವಾಗಿದ್ದು ಇಂದು(ಶನಿವಾರ) ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹೋಗುತ್ತಿದ್ದೇವೆ ಎಂದರು. ಒಂಬತ್ತು ವರ್ಷಗಳಲ್ಲಿ ಕೋಟಿಗೂ ಮಿಕ್ಕಿದ ಹಣ ಖರ್ಚಾಗಿದೆ. ಈಗ ಬಲಭಾಗದಲ್ಲಿದ್ದ ಸಮಸ್ಯೆ ಪರಿಹಾರವಾಗಿದ್ದರೂ ಎಡಭಾಗದಲ್ಲಿ ಇನ್ನೂ ಸಮಸ್ಯೆಯಿದೆ. ಅದು ಯಾವಾಗ ಬೇಕಾದರೂ ಗಂಭೀರ ಸ್ವರೂಪ ಪಡೆಯಬಹುದು. ಎರಡು ತಿಂಗಳ ಹಿಂದೆ ಆರೋಗ್ಯ ತುಂಬ ಬಿಗಡಾಯಿಸಿದಾಗ ಯೆನೆಪೋಯ ಆಸ್ಪತ್ರೆಯ ವೈದ್ಯರ ಸ್ಪಂದನೆಯಿಂದ ಮತ್ತೆ ಯಥಾಸ್ಥಿತಿಗೆ ಬಂದಿದ್ದಾಳೆ. ಇಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts