More

    ಯಶಸ್ವಿ ಉದ್ಯಮಿ ಸಿ.ಎಸ್. ವೇಣುಗೋಪಾಲ್: ಕಟ್ಟಡ ವಿನ್ಯಾಸದಲ್ಲಿ ನೈಪುಣ್ಯ, ಯುವಜನರಿಗೆ ಸ್ಪೂರ್ತಿ

    ಸರ್ಕಾರಿ ಶಾಲೆ-ಕಾಲೇಜಿನಲ್ಲೇ ಓದಿ ಉತ್ತಮ ಜ್ಞಾನವನ್ನು ಪಡೆದುಕೊಂಡು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ. ಕುಟುಂಬ ನಿರ್ವಹಣೆಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಲೇ ಸಂಜೆ ಕಾಲೇಜಿನಲ್ಲಿ ಬಿಇ ಪದವಿ ಪಡೆದು ಹುಟ್ಟೂರಿನ ಜನರ ಬಾಯಲ್ಲಿ ವಿದ್ಯಾವಂತ ಎನಿಸಿಕೊಂಡರು. ಸರ್ಕಾರಿ ಕೆಲಸಕ್ಕೆ ಸೇರದೆ ಸ್ವಂತ ಉದ್ಯಮ ಸ್ಥಾಪಿಸುವ ಕನಸಿನೊಂದಿಗೆ ಮಂಡ್ಯ ಜಿಲ್ಲೆ ನಾಗಮಂಗಲದಿಂದ ಬೆಂಗಳೂರಿಗೆ ಬಂದು ಪರಿಶ್ರಮದಿಂದ ದುಡಿಮೆ ಮಾಡಿದರು. ಸತತ ಪರಿಶ್ರಮ, ಕರ್ತವ್ಯನಿಷ್ಠೆ, ಹೊಸ ಆಲೋಚನೆಯ ತುಡಿತದಿಂದಾಗಿ ‘ಡಿಸೈನ್ ಹೈಟ್ಸ್’ ಕಂಪನಿ ಹುಟ್ಟುಹಾಕಿ ತಾವು ಬೆಳೆದು, ಇತರರಿಗೂ ಉದ್ಯೋಗ ನೀಡಿ ಯಶಸ್ವಿ ಉದ್ಯಮಿ ಎನಿಸಿದ್ದಾರೆ ಸಿ.ಎಸ್. ವೇಣುಗೋಪಾಲ್. ಯುವ ಜನರಿಗೆ ಸ್ಪೂರ್ತಿಯ ಸೆಲೆಯಾಗಿರುವ ಇವರಿಗೆ ‘ವಿಜಯವಾಣಿ’ ಪತ್ರಿಕೆ ಬೆಂಗಳೂರು ರತ್ನ ಪ್ರಶಸ್ತಿ ಮೂಲಕ ಗೌರವಿಸಿದೆ.

    ಯುವಕರೆಲ್ಲ ಉದ್ಯೋಗ ಅರಸುತ್ತ ಹೋದರೆ ಉದ್ಯೋಗ ಸೃಷ್ಟಿಸುವವರು ಯಾರು?’ ಎಂದು ರಾಷ್ಟ್ರಕವಿ ಕುವೆಂಪು ಬರೆದಿರುವ ಸಂದೇಶವು ಸಿ.ಎಸ್. ವೇಣುಗೋಪಾಲ್ ಅವರಿಗೆ ಪ್ರೇರಣೆ ನೀಡಿದೆ. ಈ ಸಂದೇಶವನ್ನು ತಪ್ಪದೆ ಓದಿ ಮುಂದಿನ ದೈನಂದಿನ ಕಾರ್ಯ ಆರಂಭಿಸುವ ವೇಣುಗೋಪಾಲ್, ಕೃಷಿ ಕುಟುಂಬದಿಂದ ಬಂದವರು. 2003ರಲ್ಲಿ ‘ಡಿಸೈನ್ ಹೈಟ್ಸ್’ ಟಿ ಸಿವಿಲ್ ಇಂಜಿನಿಯರಿಂಗ್ ಮತ್ತು ಕನ್​ಸ್ಟ್ರಕ್ಷನ್ ಕಂಪನಿ ಆರಂಭಿಸಿದವರು. ಗ್ರಾಮೀಣ ಪ್ರದೇಶದಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬಂದು ಆರಂಭದಲ್ಲಿ ಎದುರಾದ ಅಡೆತಡೆ ಮೀರಿ, ಇದೀಗ ಯಶಸ್ವಿ ಯುವ ಉದ್ಯಮಿಯಾಗಿ ಬೆಳೆದಿದ್ದಾರೆ.

    1978ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶಿವಪುರ ಗ್ರಾಮದಲ್ಲಿ ಶ್ರೀನಿವಾಸ್ ಮತ್ತು ಸರೋಜಮ್ಮ ದಂಪತಿಯ ಮಗನಾಗಿ ವೇಣುಗೋಪಾಲ್ ಜನಿಸಿದರು. ಇವರ ತಂದೆ ಸೈನ್ಯದಲ್ಲಿ 18 ವರ್ಷ ದೇಶಸೇವೆ ಮಾಡಿದ್ದಾರೆ. ಇದರಿಂದಾಗಿ ಮನೆತನಕ್ಕೆ ಒಳ್ಳೆಯ ಹೆಸರು ಬಂದಿತ್ತು. ತಮ್ಮ ಬಾಲಾಜಿ, ಅಕ್ಕ ಮಮತಾ ಒಡಹುಟ್ಟಿದವರು. ಮೂಲತಃ ನಾಗಮಂಗಲದವರು. 2004ರಲ್ಲಿ ಬಿಂದುಶ್ರೀ ಎಂಬುವರನ್ನು ವೇಣುಗೋಪಾಲ್ ವಿವಾಹವಾದರು. ದಂಪತಿಗೆ ತನ್ಮಯಿ ಮತ್ತು ತನಯಿ ಮಕ್ಕಳಿದ್ದಾರೆ. ಶಿವಪುರ ಸರ್ಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಓದಿದರು. ಮದ್ದೂರು ಜವಹರ್ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ಚನ್ನಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾದಲ್ಲಿ ಸಿವಿಲ್ ಕೋರ್ಸ್ ಪೂರೈಸಿದರು. ಮೂರು ವರ್ಷ ಕೋರ್ಸ್ ಮುಗಿದ ಬಳಿಕ 1996ರಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದರು. ಈ ವೇಳೆ ಸಿವಿಲ್ ಕೋರ್ಸ್​ಗೆ ಬೇಡಿಕೆ ಇರದ ಕಾರಣ ಪ್ರಾರಂಭದಲ್ಲಿ ಕೆಲಸ ಸಿಗದೆ ತುಂಬ ಕಷ್ಟಪಟ್ಟರು. ಆ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್ ಇಂಜಿನಿಯರಿಂಗ್ ಕೋರ್ಸ್​ಗೆ ಬೇಡಿಕೆ ಇತ್ತು. ನಂತರ, ಕಟ್ಟಡ ನಿರ್ಮಾಣ ಮಾಡುವವರ ಬಳಿ ರೈಟರ್ ಆಗಿ ಕೆಲಸಕ್ಕೆ ಸೇರಿಕೊಂಡರು.

    ಆಗ 750 ರೂ. ವೇತನ ಸಿಗುತ್ತಿತ್ತು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಾಲೂರಿನಲ್ಲಿ ಪ್ರಾಜೆಕ್ಟ್ ಸಿಕ್ಕಿತ್ತು. ಜತೆಗೆ, ವೇತನವೂ ಹೆಚ್ಚಳವಾಯಿತು. ‘ಬದಲಾವಣೆ ಜಗದ ನಿಯಮ’ ಎಂಬಂತೆ ತಾವು ಮಾಡುತ್ತಿರುವ ಕೆಲಸವನ್ನು ಬದಲಾಯಿಸಲು ವೇಣುಗೋಪಾಲ್ ಮುಂದಾದರು. ಈ ವೇಳೆ ಜಯನಗರದ ‘ಡೈನಟೆಕ್’ ಕನ್​ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಸಿವಿಲ್ ಕ್ಷೇತ್ರದಲ್ಲಿ ಇನ್ನಷ್ಟು ಕಲಿಯುವ ಹುಮ್ಮಸ್ಸು ಬಂತು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಿ.ಎಸ್. ರಾಮಚಂದ್ರ ಎಂಬುವರು ವೇಣುಗೋಪಾಲ್​ಗೆ ಪರಿಚಯವಾಯಿತು. ಒಂದೇ ಕಚೇರಿಯಲ್ಲಿ ಇವರಿಬ್ಬರೂ ಸತತ 6 ವರ್ಷ ಕಾಲ ಕೆಲಸ ಮಾಡಿದರು. ಉದ್ಯೋಗದಲ್ಲಿದ್ದಾಗಲೇ 2001ರಲ್ಲಿ ಬಿಎಂಎಸ್ ಸಂಜೆ ಕಾಲೇಜಿನಲ್ಲಿ ಬಿಇ ಮುಗಿಸಿದರು. ಮನೆ, ಕಚೇರಿ, ಅಪಾರ್ಟ್​ವೆುಂಟ್ ನಕ್ಷೆ, ವಿನ್ಯಾಸ, ಲೇಔಟ್ ಮಾಲ್ಯಮಾಪನ ಸೇರಿ ಸಿವಿಲ್ ಕ್ಷೇತ್ರದ ಬಗ್ಗೆ ಅಪಾರ ಜ್ಞಾನ ವೃದ್ಧಿಸಿಕೊಂಡರು. ಒಂದೇ ಸೂರಿನಡಿ ಎಲ್ಲವನ್ನೂ ಕಲಿತರು. ವೇಣುಗೋಪಾಲ್ ಅವರಿಗೆ ರಾಮಚಂದ್ರ ಗಾಡ್​ಫಾದರ್ ಆಗಿದ್ದರು. ಕೆಲಸ ಮುಗಿದ ಬಳಿಕ ಸಂಜೆ ಆರ್ಕಿಟೆಕ್ಟ್​ಗಳ ಕೆಲಸ ಮಾಡಿಕೊಡುತ್ತಿದ್ದರು. ಕೈಯಲ್ಲೇ ನಕ್ಷೆ ರಚಿಸಿ ಕ್ಲೈಂಟ್​ಗಳಿಗೆ ಕೊಡುತ್ತಿದ್ದರು. ಹಣದ ಜತೆಗೆ ಜ್ಞಾನ ಸಂಪಾದನೆಯೂ ಹೆಚ್ಚಿತ್ತು. ಹೆಚ್ಚು ಆಸಕ್ತಿವಹಿಸಿ ಕೆಲಸ ಮಾಡುವಂತೆ ಪ್ರೇರಣೆ ಕೊಟ್ಟವರು ರಾಮಚಂದ್ರ. ಕೆಲಸವನ್ನೇ ಹವ್ಯಾಸವಾಗಿ ಪರಿವರ್ತಿಸಿಕೊಂಡು ಕೆಲಸ ಮಾಡಿರುವುದು ಗಮನಾರ್ಹ. ಬಳಿಕ, ಈ ಕೆಲಸವನ್ನು ತ್ಯಜಿಸಿ ಇದೇ ಕ್ಷೇತ್ರದಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಸರ್ಕಾರಿ ಪ್ರಾಜೆಕ್ಟ್​ಗಳನ್ನು ಮಾಡುವುದಕ್ಕೆ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಅವಕಾಶ ಸಿಕ್ಕಿತ್ತು, ಆದರೆ, ಸರ್ಕಾರಿ ಕೆಲಸದ ಬಗ್ಗೆ ಅಷ್ಟೇನೂ ಒಲವು ಇರಲಿಲ್ಲ. ನಂತರ, ದೊಡ್ಡ ಪ್ರಾಜೆಕ್ಟ್ ಸಿಕ್ಕಿತ್ತು. ಇದು ವೇಣುಗೋಪಾಲ್ ಅವರ ಜೀವನದ ಟರ್ನಿಂಗ್ ಪಾಯಿಂಟ್ ಎನ್ನಬಹುದು. ರಾಮಚಂದ್ರ ಜತೆ ಸೇರಿ ‘ಡಿಸೈನ್ ಹೈಟ್ಸ್’ ಕಂಪನಿ ಹುಟ್ಟು ಹಾಕಿದರು. ನಂತರ, ಹಂತಹಂತವಾಗಿ ಕಂಪನಿಯನ್ನು ಬೆಳೆಸಿದ್ದು ರೋಚಕ ಸಂಗತಿ.

    Venugopal

    ಸಮಾಜ ಸೇವೆಯಲ್ಲೂ ಸಕ್ರಿಯ
    ವೇಣು ಗೋಪಾಲ್ ಅವರು ಸಮಾಜ ಸೇವೆ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದಾರೆ. ತಮ್ಮ ಆದಾಯದ ಸ್ವಲ್ಪ ಹಣವನ್ನು ಈ ಸೇವೆಗೆ ವಿನಿಯೋಗಿಸುತ್ತಿದ್ದಾರೆ. ಬೇಗೂರಿನ ವಿಶ್ವಪ್ರಿಯ ಲೇಔಟ್​ನ 15ನೇ ಕ್ರಾಸ್​ನಲ್ಲಿರುವ ಡಿಸೈನ್ ಹೈಟ್ಸ್ ಕಚೇರಿ ಸುತ್ತಮುತ್ತ 5 ವರ್ಷದಿಂದ ಗಿಡ ನೆಡುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಸೇರಿ ಉದ್ಯಾನ ನಿರ್ವಹಣೆ ಮಾಡಿದ್ದಾರೆ. ಕೆರೆ ದತ್ತು ತೆಗೆದುಕೊಂಡು ನಿರ್ವಹಣೆ ಮಾಡಲು ಆಲೋಚಿಸಿದ್ದಾರೆ. ನಾಗರಬಾವಿಯಲ್ಲಿರುವ ‘ಕರ್ಟಸಿ ಫೌಂಡೇಷನ್’ ಅನಾಥ ಆಶ್ರಮ ಸಂಸ್ಥೆಗೆ ಉಚಿತವಾಗಿ ಆಹಾರ ನೀಡುತ್ತಿದ್ದಾರೆ. ವರ್ಷಕ್ಕೊಮ್ಮೆ ಮಕ್ಕಳಿಗೆ ಬಟ್ಟೆ, ಬ್ಯಾಗ್, ಚಪ್ಪಲಿ ಸೇರಿ ಇತರ ವಸ್ತುಗಳನ್ನು ನೀಡಿದ್ದಾರೆ. ಕೋವಿಡ್ ವೇಳೆ ಅಸೋಸಿಯೇಷನ್ ಮೂಲಕ ಸ್ಥಳೀಯ ನಿವಾಸಿಗಳಿಗೆ ಉಚಿತ ಫುಡ್ ಕಿಟ್ ಸಹ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ‘ರಸ್ತೆಗುಂಡಿ’ ಮುಚ್ಚಲು, ಪ್ರತಿ ವರ್ಷ 500 ಸಸಿ ನೆಡಲು ಸೇರಿ ಇತರ ಕಾರ್ಯಕ್ರಮಗಳನ್ನು ರೂಪಿಸಲು ಗುರಿ ಹಾಕಿಕೊಂಡಿದ್ದಾರೆ.

    ಪ್ರಶಸ್ತಿಗಳ ವಿವರ
    * ಐಸಿಐ ನೀಡುವ ವೆಲ್ ಬಿಲ್ಡ್ ರೆಸಿಡೆನ್ಷಿಯಲ್ ಅವಾರ್ಡ್
    * ಬೇಗೂರು ಒಕ್ಕಲಿಗರ ಸಂಘದಿಂದ ಕೆಂಪೇಗೌಡ ಪ್ರಶಸ್ತಿ
    * ಡಾ. ಕೆ. ಶಿವರಾಮ ಕಾರಂತ ಸದ್ಭಾವನಾ ಅವಾರ್ಡ್
    * ಆರ್ಯಭಟ

    ಅಂತಾರಾಷ್ಟ್ರೀಯ ಪ್ರಶಸ್ತಿ
    * ಅಲ್ಟ್ರಾಟೆಕ್ ವತಿಯಿಂದ ಯುಟೆಕ್ ಜೋನಲ್ ವಿನ್ನರ್ ಪ್ರಶಸ್ತಿ
    * ಆತ್ಮನಿರ್ಭರ್ ಭಾರತದಡಿ ಬ್ಯಾಂಕಾಕ್​ನಲ್ಲಿ ನಡೆದ 17ನೇ ಇಂಟರ್​ನ್ಯಾಷನಲ್ ಬ್ಯುಸಿನೆಸ್ ಅವಾರ್ಡ್
    * ದೆಹಲಿಯಲ್ಲಿ ನಡೆದ ಆಲ್ ಇಂಡಿಯಾ ಅಚೀವರ್ಸ್ ಪ್ರಶಸ್ತಿ

    ನಕ್ಷೆ, ಮನೆ ನಿರ್ವಣ, ಒಳಾಂಗಣ ವಿನ್ಯಾಸ ಬಗ್ಗೆ ಬುಕ್​ನಲ್ಲಿ ಓದಿ ತಿಳಿದು ಕೊಂಡಿದ್ದೆ. 2 ವರ್ಷದಿಂದ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹೇಗೆ ಒಳಾಂಗಣ ವಿನ್ಯಾಸ, ನಕ್ಷೆ ರಚಿಸಿರುವುದು ಸೇರಿ ಇತರೆ ವಾಸ್ತುಶಿಲ್ಪದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದೇನೆ. ಹಿಂದೆ ಕಂಪನಿಯಲ್ಲಿ ಕೆಲಸ ಮಾಡಿರುವವರು ಬೇರೆ ಕಡೆ ಸ್ವಂತವಾಗಿ ಕಂಪನಿ ಆರಂಭಿಸಿ ಕೆಲವರಿಗೆ ಉದ್ಯೋಗ ನೀಡಿರುವುದುಂಟು. ಕಂಪನಿಯನ್ನು ಇನ್ನಷ್ಟು ಯಶಸ್ವಿಯಾಗಿ ಮುನ್ನಡೆಸಲು ವೇಣುಗೋಪಾಲ್​ಗೆ ಸರ್​ಗೆ ದೇವರು ಶಕ್ತಿ ಕೊಡಲಿ.

    | ಸೌಜನ್ಯ ಉದ್ಯೋಗಿ ಡಿಸೈನ್ ಹೈಟ್ಸ್ ಕಂಪನಿ

    Bengaluru Rathna Venugopal 1

    ಕಡಿಮೆ ಅವಧಿಯಲ್ಲಿ ಖ್ಯಾತಿ
    ರಾಮಚಂದ್ರ ಜತೆ ಸೇರಿ 2003ರಲ್ಲಿ ‘ಡಿಸೈನ್ ಹೈಟ್ಸ್’ ಕಂಪನಿ ಆರಂಭಿಸಿದರು. 2003ರಿಂದ 2008ರವರೆಗೆ ಕಂಪನಿಗೆ ಒಳ್ಳೆಯ ಹೆಸರು ಬಂತು ಎನ್ನುತ್ತಾರೆ ವೇಣುಗೋಪಾಲ್. 2008ರಲ್ಲಿ ಇನ್ನಷ್ಟು ಪ್ರಾಜೆಕ್ಟ್​ಗಳು ಲಭಿಸಿದವು. ಪ್ರಾರಂಭದಲ್ಲಿ ನಾವು ಮತ್ತು ರಾಮಚಂದ್ರ ಇದ್ದೆವು. ಈಗ 80 ಮಂದಿಗೆ ಉದ್ಯೋಗ ನೀಡಿದ್ದೇವೆ. ಕಂಪನಿಯಲ್ಲಿ ಕೆಲಸ ಮಾಡಿದವರು ಹೊಸದಾಗಿ ಸಣ್ಣ ಕಂಪನಿ ಆರಂಭಿಸಿ ನಾಲ್ಕೈದು ಜನರಿಗೆ ಉದ್ಯೋಗ ಕೊಟ್ಟಿರುವುದುಂಟು. ಕ್ಲೈಂಟ್​ಗಳಿಗೆ ಗುಣಮಟ್ಟದ ಸೇವೆ ನೀಡಲಾಗುತ್ತಿದೆ. ಕಂಪನಿ ಮಾಡಿಕೊಟ್ಟಿರುವ ಕೆಲಸವನ್ನು ನೂರಾರು ಕ್ಲೈಂಟ್​ಗಳು ಇಷ್ಟಪಟ್ಟಿದ್ದಾರೆ. ಗುಣಮಟ್ಟದ ಸೇವೆ ನೀಡಿದರೆ ಮಾತ್ರ ನಮಗೆ ಹೊಸ ಪ್ರಾಜೆಕ್ಟ್ ಸಿಗುತ್ತದೆ ಎಂದರು. ಪ್ರಸ್ತುತ ದಿನಗಳಲ್ಲಿ ಅರ್ಕಿಟೆಕ್ಟ್​ಗೆ ತುಂಬ ಬೇಡಿಕೆ ಬಂದಿದೆ. ಕೋರ್ಸ್ ಮುಗಿದ ಬಳಿಕ 3-4 ವರ್ಷ ಒಳ್ಳೆಯ ಅರ್ಕಿಟೆಕ್ಟ್ ಕಂಪನಿಗಳಲ್ಲಿ ಉದ್ಯೋಗ ಮಾಡಿ ಪ್ರಾಯೋಗಿಕ ಜ್ಞಾನವನ್ನು ಚೆನ್ನಾಗಿ ಕಲಿತರೆ ಒಳ್ಳೆಯದು. ಕೋರ್ಸ್ ಓದುವಾಗ ಬರೀ ಥಿಯರಿ ಜ್ಞಾನ ಸಿಗುತ್ತದೆ. ಅರ್ಕಿಟೆಕ್ಟ್ ಬಗ್ಗೆ ಅಳವಾಗಿ ಅಧ್ಯಯನ ಮಾಡಬೇಕು. ಆತ್ಮವಿಶ್ವಾಸ, ನಂಬಿಕೆ, ಪರಿಶ್ರಮ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಯುವಜನತೆಗೆ ಸಲಹೆ ನೀಡುತ್ತಾರೆ ವೇಣುಗೋಪಾಲ್.

    ‘ಡಿಸೈನ್ ಹೈಟ್ಸ್’ ಕಾರ್ಯವೈಖರಿ
    * 300ಕ್ಕೂ ಅಧಿಕ ಕಟ್ಟಡ ನಿರ್ಮಾಣ
    * 6 ಸಾವಿರಕ್ಕೂ ಹೆಚ್ಚು ನಕ್ಷೆ, ವಿನ್ಯಾಸ ರಚನೆ
    * ವಾರ್ಷಿಕ 9 ಕೋಟಿ ರೂ. ವಹಿವಾಟು
    * ಪ್ರತಿ ವರ್ಷ 400 ವಿನ್ಯಾಸ ರಚನೆ
    * ಇಲ್ಲಿಯವರೆಗೆ 30 ಸುಸಜ್ಜಿತ ಕಟ್ಟಡ ನಿರ್ವಿುಸಿ ಮಾರಾಟ
    * ಸದ್ಯ 9 ಪ್ರಾಜೆಕ್ಟ್​ಗಳ ಕಾರ್ಯ ಪ್ರಗತಿ
    * ಪ್ರತಿ ವರ್ಷ 10 ವಸತಿ ಪ್ರಾಜೆಕ್ಟ್ ಪೂರ್ಣ
    * ಪ್ರತಿ ಚದರ ಅಡಿಗೆ ಮನೆ ಕಟ್ಟಲು 2 ಲಕ್ಷ ರೂ.ನಿಂದ ಆರಂಭ
    * ಸಣ್ಣ- ದೊಡ್ಡ ಕಟ್ಟಡಗಳ ನಿರ್ಮಾಣ
    * ಅಪಾರ್ಟ್​ವೆುಂಟ್​ಗೆ ನಕ್ಷೆ, ವಿನ್ಯಾಸ ರಚನೆ
    * ಬೆಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಉತ್ತರ ಕನ್ನಡದಲ್ಲಿ ಮನೆ ನಿರ್ಮಾಣ
    * ಮನೆ ನಿರ್ಮಾಣ ಮಾಡುವವರಿಗೆ ಉಚಿತ ಸಲಹೆ ನೀಡಿಕೆ
    * ಬಜೆಟ್ ಆಧಾರದಲ್ಲಿ ಮನೆ, ವಿನ್ಯಾಸ ರಚನೆ
    * ಗುಣಮಟ್ಟ ಸೇವೆ ನೀಡುವಲ್ಲಿ ಮುಂಚೂಣಿ

    ಒಳಾಂಗಣ ವಿನ್ಯಾಸಕ್ಕೆ ಹೆಚ್ಚಿದ ಬೇಡಿಕೆ
    ದೇಶದಲ್ಲಿ ಈಗ ಒಳಾಂಗಣ ವಿನ್ಯಾಸ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಹೆಚ್ಚಿನವರು ನಮ್ಮ ಮನೆ, ಸುವ್ಯವಸ್ಥಿತ, ಗಾಳಿ- ಬೆಳಕು ಬರುವಂತಿರಲಿ ಎಂದು ಬಯಸುತ್ತಾರೆ. ಹೀಗಾಗಿ, ಮನೆ ಕಟ್ಟಿಸುವಾಗ ಒಳಾಂಗಣ ವಿನ್ಯಾಸಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಹೀಗಾಗಿ, ಗ್ರಾಹಕರ ಅಭಿರುಚಿ ತಕ್ಕಂತೆ ಮನೆಗಳನ್ನು ವಿನ್ಯಾಸ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ವೇಣುಗೋಪಾಲ್. ಜಾಗ ಚಿಕ್ಕದಾದರೆ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವುದು ಹೇಗೆ ಎಂಬ ಉಪಾಯವನ್ನೂ ಒಳಾಂಗಣ ವಿನ್ಯಾಸ ಒದಗಿಸುತ್ತದೆ. ಮನೆ, ಸೂಪರ್ ಮಾರ್ಕೆಟ್, ಕಚೇರಿ, ಮಾಲ್, ಕಂಪನಿ, ಕಾಫಿಶಾಪ್, ರೆಸ್ಟೋರೆಂಟ್, ಹೋಟೆಲ್… ಹೀಗೆ ಯಾವುದೇ ಕಟ್ಟಡವಿರಲಿ, ಒಳಾಂಗಣ ವಿನ್ಯಾಸ ಮಹತ್ವದ ಪಾತ್ರವಹಿಸುತ್ತದೆ. ಒಳಸುವ ಬಣ್ಣ, ಸಾಮಗ್ರಿ, ಪೀಠೋಪಕರಣ, ನೆಲಹಾಸು, ಲೈಟಿಂಗ್​ಗಳಿಂದ ಹಿಡಿದು ಗೋಡೆಯ ಮೇಲೆ ಹಾಕುವ ಬಣ್ಣ ಮಹತ್ವದಾಗಿದೆ. ಒಳಾಂಗಣ ವಿನ್ಯಾಸ ಪಟ್ಟಣ-ನಗರಗಳೆನ್ನದೆ ಎಲ್ಲೆಡೆ ವಿಸ್ತರಿಸಿದೆ. ಸುರಕ್ಷತೆ ದೃಷ್ಟಿಯಿಂದಲೂ ಮಹತ್ವ ಪಡೆದಿದೆ ಎಂದು ವೇಣುಗೋಪಾಲ್ ವಿವರಿಸಿದರು.

    ಮೂರು ವರ್ಷದಿಂದ ಡಿಸೈನ್ ಹೈಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ವೇಣುಗೋಪಾಲ್ ಅವರು ಗ್ರಾಮೀಣ ಪ್ರತಿಭೆಗಳಿಗೆ ಮೊದಲು ಪ್ರೋತ್ಸಾಹ ಕೊಡುತ್ತಾರೆ. ಮನೆ ನಿರ್ವಣ, ನಕ್ಷೆ, ವಿನ್ಯಾಸ ರಚನೆ ಸೇರಿ ಇತರ ವಿಷಯಗಳ ಬಗ್ಗೆ ಚೆನ್ನಾಗಿ ಹೇಳಿಕೊಡುತ್ತಾರೆ. ಹೊಸ ಹೊಸ ಪರಿಕಲ್ಪನೆ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಇವರಿಗೆ ‘ಬೆಂಗಳೂರು ರತ್ನ ಪ್ರಶಸ್ತಿ’ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗಿದೆ.

    | ಅರವಿಂದ್ ಉದ್ಯೋಗಿ ಡಿಸೈನ್ ಹೈಟ್ಸ್ ಕಂಪನಿ

    Bengaluru Rathna Venugopal 2

    ಪ್ಯಾನಲ್ ಹೌಸ್ ಪರಿಚಯ
    ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ‘ಪ್ಯಾನಲ್ ಹೌಸ್’ ಯೋಜನೆ ಜಾರಿಗೆ ಬಂದರೆ ಒಟ್ಟು ಮನೆ ವೆಚ್ಚದಲ್ಲಿ ಶೇ.40 ಕನ್​ಸ್ಟ್ರಕ್ಷನ್ ಖರ್ಚು ತಗ್ಗಲಿದೆ. ಕಂಪನಿಗಳ ಕಚೇರಿ, ಅಪಾರ್ಟ್​ವೆುಂಟ್​ನಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಇದನ್ನು ಮನೆ ನಿರ್ವಣಕ್ಕೂ ವಿಸ್ತರಿಸಲು ಆಲೋಚಿಸಲಾಗುತ್ತಿದೆ. ಕಡಿಮೆ ಅವಧಿಯಲ್ಲಿ ಮನೆ ಪೂರ್ಣಗೊಳಿಸಬಹುದು. ಈ ಯೋಜನೆ ವಿದೇಶಗಳಲ್ಲಿಯೂ ಇದೆ. ವಾರದಲ್ಲೇ ಮೂರು ಅಂತಸ್ತಿನ ಕಟ್ಟಡ ನಿರ್ವಣವಾಗಿದೆ ಎಂದು ಮಾಹಿತಿ ಕೊಡುತ್ತಾರೆ ವೇಣುಗೋಪಾಲ್. ಈ ಯೋಜನೆಯನ್ನು ಸದ್ಯದಲ್ಲಿಯೇ ಕಾರ್ಯರೂಪಕ್ಕೆ ತರಲು ತಯಾರಿ ನಡೆಸಲಾಗಿದೆ. ಇದನ್ನು ಜನರ ಮುಂದಿಡಲು ಉತ್ಸುಕರಾಗಿದ್ದಾರೆ. ಇದರಿಂದ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಸಾಧ್ಯ ಎಂಬುದು ಸಾಬೀತಾಗಲಿದೆ.

    ನಮ್ಮ ಸಾಧನೆ ಗುರುತಿಸಿ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿರುವ ‘ವಿಜಯವಾಣಿ’ ಪತ್ರಿಕೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಶಸ್ತಿಯಿಂದಾಗಿ ಇನ್ನಷ್ಟು ಸೇವೆ ಒದಗಿಸಲು ಜವಾಬ್ದಾರಿ ಹೆಚ್ಚಿರುವ ಜತೆಗೆ ಕಂಪನಿಗೂ ಒಳ್ಳೆಯ ಹೆಸರು ಬಂದಿದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಹೊಸ ವಿನ್ಯಾಸಗಳ ಪರಿಕಲ್ಪನೆ ಆಧಾರದಲ್ಲಿ ಮನೆ ನಿರ್ಮಾಣ ಮಾಡುವುದೇ ನಮ್ಮ ಗುರಿ.

    | ಸಿ.ಎಸ್. ವೇಣುಗೋಪಾಲ್ ಡಿಸೈನ್ ಹೈಟ್ಸ್ ಟಿ ಕಂಪನಿ ಸಂಸ್ಥಾಪಕ

    ‘ಡಿಸೈನ್ ಹೈಟ್ಸ್’ ಟಿ ಸಿವಿಲ್ ಇಂಜಿನಿಯರ್ ಮತ್ತು ಕನ್​ಸ್ಟ್ರಕ್ಷನ್ ಕಂಪನಿ, ನಂ.435, 15ನೇ ಕ್ರಾಸ್, 2ನೇ ಬ್ಲಾಕ್, ವಿಶ್ವಪ್ರಿಯ ಲೇಔಟ್, ಬೇಗೂರು,
    ಬೆಂಗಳೂರು- 560 068. ವಿವರಕ್ಕಾಗಿ
    ದೂ: 080- 2574 2715, 94484 52970, 93800 22044.

    ಕರ್ಮದ ಫಲ ಸಿಲ್ಕ್​ ಸ್ಮಿತಾ ಸಾವಿಗೆ ಕಾರಣವಾಯ್ತಾ? ಅತಿದೊಡ್ಡ ರಹಸ್ಯ ಬಯಲು ಮಾಡಿದ ಹಿರಿಯ ನಟಿ

    ಶಾಸ್ತ್ರೋಕ್ತವಾಗಿ ಸಹೋದರನನ್ನೇ ಮದುವೆಯಾದ ಮಹಿಳೆ! ಕಾರಣ ತಿಳಿದರೆ ಹೌಹಾರ್ತೀರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts