More

    ಕನ್ನಡಿಗನಿಗೆ ಕರ್ಮಯೋಗಿ ಪುರಸ್ಕಾರ, ಈಶಾನ್ಯದಲ್ಲಿ ಸಾಧನೆ ಮಾಡಿದ ಸುಬ್ರಹ್ಮಣ್ಯ ಭಾರತಿ ಕೊಣಲೆ

    – ರಾಘವ ಶರ್ಮ ನಿಡ್ಲೆ, ನವದೆಹಲಿ
    ಈಶಾನ್ಯ ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿರುವ ‘ಮೈ ಹೋಮ್ ಇಂಡಿಯಾ’ ಸಂಸ್ಥೆ ಈ ವರ್ಷದ ಸ್ವಾಮಿ ವಿವೇಕಾನಂದ ಸ್ಮೃತಿ ಕರ್ಮಯೋಗಿ ಪುರಸ್ಕಾರವನ್ನು ತೆರೆಮರೆ ಸಾಧಕ, ಕನ್ನಡಿಗ ಸುಬ್ರಹ್ಮಣ್ಯ ಭಾರತಿ ಕೊಣಲೆಯವರಿಗೆ ನೀಡಿ ಗೌರವಿಸಿದೆ. ದೆಹಲಿಯ ಮಾಳವೀಯ ಸ್ಮೃತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಸ್ಮರಣಿಕೆ ಹಾಗೂ 1 ಲಕ್ಷ ರೂ. ನಗದನ್ನು ನೀಡಿ ಸನ್ಮಾನಿಸಲಾಯಿತು.

    77 ವರ್ಷದ ಎಸ್.ಬಿ.ಕೊಣಲೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕನ್ಯಾನದವರು. ಶಿಕ್ಷಕ ಮತ್ತು ಸಮಾಜ ಸೇವಕರಾಗಿ ಗುರುತಿಸಿಕೊಂಡ ಅವರು ಜೀವನದ ಹೆಚ್ಚಿನ ಸಮಯವನ್ನೆಲ್ಲ ಬಿಹಾರ ಮತ್ತು ಈಶಾನ್ಯ ಭಾರತದಲ್ಲೇ ಕಳೆದಿದ್ದಾರೆ. ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಹಾಗೂ ಮಾನವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಅವರು, ಅಳಿಕೆಯ ಸತ್ಯ ಸಾಯಿ ಸೇವಾ ಸಂಸ್ಥೆ ಮತ್ತು ಬಿಹಾರದ ಅಲೋಕ್ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ಜಾರ್ಖಂಡ್‌ನಲ್ಲಿ ವಿಶ್ವ ಹಿಂದು ಪರಿಷತ್‌ನ ಜಂಟಿ ಸಂಘಟನಾ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

    1983ರಲ್ಲಿ ಮೊದಲ ಬಾರಿಗೆ ಮೇಘಾಲಯದ ಶಿಲ್ಲಾಂಗ್‌ಗೆ ತೆರಳಿ ಅಲ್ಲಿ 2 ವರ್ಷದ ಕೆಲಸದ ಬಳಿಕ, ಈಶಾನ್ಯದ ಜೈನ್ತಿಯಾ ಬೆಟ್ಟ ಪ್ರದೇಶದಲ್ಲಿರುವ ನೊಂಗ್ಬಾ ಎಂಬ ಹಳ್ಳಿಯ ಎಲ್ಬಿನ್ ಲಮಾರೆ ಮೆಮೋರಿಯಲ್ ಹೈಸ್ಕೂಲ್ನಲ್ಲಿ ಶಿಕ್ಷಕರಾಗಿ ಸೇರಿಕೊಂಡರು. ನಂತರ ಹಳ್ಳಿಯಲ್ಲಿ ವಿಜ್ಞಾನ, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಲ್ಲದೆ, ಅಲ್ಲಿನ ಜನರೊಂದಿಗೆ ಬೆರೆತು, ಸ್ಥಳೀಯ ಸಂಸ್ಕೃತಿ, ಪರಂಪರೆ ಹಾಗೂ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ತೆರೆಮರೆಯಲ್ಲೇ ಕೆಲಸ ಮಾಡಿದರೂ, ಈಶಾನ್ಯದ ಏಳಿಗೆಗೆ ಕೊಣಲೆಯವರ ಪರಿಶ್ರಮ ಸ್ಥಳೀಯರ ಮೆಚ್ಚುಗೆಗೂ ಪಾತ್ರವಾಗಿದೆ.

    ಏನಿದು ಮೈ ಹೋಮ್ ಇಂಡಿಯಾ: ಸರ್ಕಾರೇತರ ಸಂಸ್ಥೆಯಾಗಿರುವ ಮೈ ಹೋಮ್ ಇಂಡಿಯಾ 2005ರಲ್ಲಿ ಆರಂಭಗೊಂಡು, ದೇಶದ ವಿವಿಧ ಭಾಗಗಳಲ್ಲಿರುವ ಈಶಾನ್ಯ ಭಾಗದ ಭಾರತೀಯರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಅಲ್ಲದೆ, ಈ ಭಾಗದ ನಿರ್ಲಕ್ಷಿತ ಸಮುದಾಯ ಹಾಗೂ ಜನರನ್ನು ಮುಖ್ಯವೇದಿಕೆಗೆ ತಂದು, ಶಿಕ್ಷಣ, ಕ್ರೀಡೆ, ಉದ್ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದೆ. ವಾಸ್ತವದಲ್ಲಿ ಇಂಥದ್ದೊಂದು ಸಂಸ್ಥೆ ಈಶಾನ್ಯ ಭಾರತಕ್ಕೆ ಬೇಕು ಎಂಬ ಕಲ್ಪನೆ ಮೂಡಿದ್ದು ಮತ್ತು ಅದರ ಸ್ಥಾಪನೆಗೆ ಪ್ರೇರಣೆಯಾಗಿದ್ದು ಎಸ್.ಬಿ. ಕೊಣಲೆಯವರೇ ಎಂಬುದು ವಿಶೇಷ. ಸಂಸ್ಥೆ ಸ್ಥಾಪಿಸುವ ಹೊಣೆ ಹೊತ್ತಿದ್ದು ಆರ್.ಎಸ್.ಎಸ್. ಪ್ರಚಾರಕರಾಗಿದ್ದ ಮತ್ತು ಈಗ ಬಿಜೆಪಿ ನಾಯಕರಾಗಿರುವ ಸುನೀಲ್ ದೇವಧರ್. ಕಳೆದ 15 ವರ್ಷದಿಂದ ಈಶಾನ್ಯದಲ್ಲಿ ಸಾಧನೆ ಮಾಡಿದವರಿಗೆ ಸಂಸ್ಥೆ ಕರ್ಮಯೋಗಿ ಪುರಸ್ಕಾರ ನೀಡಿ ಗೌರವಿಸಿದೆ. ಈ ಬಾರಿ ಕೊಣಲೆಯವರಿಗೆ ಈ ಗೌರವ ಸಂದಿದೆ.

    ಕರ್ನಾಟಕದ ಯಾವುದೋ ಸಣ್ಣ ಹಳ್ಳಿಯಿಂದ ಬಂದು, ದೇಶದ ಅತಿ ನಿರ್ಲಕ್ಷಿತ ಭಾಗವಾಗಿದ್ದ ಈಶಾನ್ಯ ಭಾರತದಲ್ಲಿ ಸೇವೆ ಸಲ್ಲಿಸಿದ ಕೊಣಾಲೆಯವರು ನಮಗೆಲ್ಲರಿಗೂ ಪ್ರೇರಣಾದಾಯಿ
    – ಬಲದೇವ್ ರಾಜ್ ಸಚ್ದೇವ, ಸಂಚಾಲಕ, ಮೈ ಹೋಮ್ ಇಂಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts