More

    ಬೆಳೆ ಹಾನಿ ನಿಖರ ವರದಿ ಸಲ್ಲಿಸಿ

    ರಟ್ಟಿಹಳ್ಳಿ: ಕುಮದ್ವತಿ ನದಿ ಪ್ರವಾಹ ಹೆಚ್ಚಿ ತಾಲೂಕಿನಾದ್ಯಂತ ಬೆಳೆದಿರುವ ಬೆಳೆಗಳೆಲ್ಲ ಹಾನಿಗೀಡಾಗಿವೆ. ಬೆಳೆ ಹಾನಿಗೀಡಾದ ಕುರಿತು ರೈತರು ಕೃಷಿ ಇಲಾಖೆಗೆ ಸೂಕ್ತ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಕುರಿತು ಅಧಿಕಾರಿಗಳು ಸಮರ್ಪಕ ಹಾಗೂ ನಿಖರವಾಗಿ ವರದಿ ಸಲ್ಲಿಸಿದರೆ ಸರ್ಕಾರ ಸೂಕ್ತ ಪರಿಹಾರಧನ ನೀಡಲು ಸಿದ್ಧ್ದಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಕೃಷಿ, ತೋಟಗಾರಿಕೆ ಮತ್ತು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತಾಲೂಕಿನ ವಿವಿಧ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ರೈತರ ಸಮಸ್ಯೆಗಳು ಹಾಗೂ ಹಾನಿಗೀಡಾದ ಬೆಳೆಗಳ ಮಾಹಿತಿ ಪಡೆದು ಅವರು ಮಾತನಾಡಿದರು.

    ತಾಲೂಕು ವ್ಯಾಪ್ತಿಯಲ್ಲಿ ಬೆಳೆದಿರುವ ಗೋವಿನಜೋಳ, ಹತ್ತಿ, ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಈಗಾಗಲೇ ತಾಲೂಕಿನ ಕೃಷಿ ಇಲಾಖೆಗೆ ಕೆಲ ರೈತರು ಬೆಳೆ ಹಾನಿಯ ಅರ್ಜಿ ಸಲ್ಲಿಸಿದ್ದಾರೆ, ಅರ್ಜಿ ಸಲ್ಲಿಸದ ರೈತರು ಶೀಘ್ರವೇ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಕೃಷಿ, ತೋಟಗಾರಿಕೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಸರ್ಕಾರಕ್ಕೆ ನಿಖರ ವರದಿ ಸಲ್ಲಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಅಧಿಕಾರಿಗಳು ಸಮಗ್ರವಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.

    ವಿವಿಧ ಗ್ರಾಮಗಳಿಗೆ ಭೇಟಿ: ತಾಲೂಕಿನ ಹೊಸಳ್ಳಿ, ಶಿರಗಂಬಿ, ರಟ್ಟಿಹಳ್ಳಿ, ಕುಡುಪಲಿ, ಕಡೂರು, ಬುಳ್ಳಾಪುರ, ಹಳ್ಳೂರ, ಪರ್ವತಸಿದ್ಧಗೇರಿ, ಕಿರಗೇರಿ, ಚಿಕ್ಕಕಬ್ಬಾರ, ಹಿರೇಕಬ್ಬಾರ, ಮೈದೂರು, ಗುಡ್ಡದಮಾದಪುರ, ಅಣಜಿ ಸೇರಿ ಸುತ್ತಲಿನ ಗ್ರಾಮಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಭೇಟಿ ನೀಡಿದರು. ರೈತರಿಂದ ಬೆಳೆಗಳ ಹಾನಿ ಕುರಿತು ಮಾಹಿತಿ ಪಡೆದರು. ತಹಸೀಲ್ದಾರ್ ಅರುಣಕುಮಾರ ಕಾರಗಿ, ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ, ಹೆಸ್ಕಾಂ ಅಧಿಕಾರಿ ರಾಜೀವ್ ಮರಿಗೌಡ್ರ, ಸೃಷ್ಟಿ ಪಾಟೀಲ, ಶಂಕ್ರುಗೌಡ ಶಿರಗಂಬಿ, ರೇವಣೆಪ್ಪ ಎರಳ್ಳಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts