More

    ‘ಮನಸ್ವಿನಿ, ಮೈತ್ರಿ’ ಜಾರಿಗೆ ಶ್ರೀನಿವಾಸಪ್ರಸಾದ್ ಕಾರಣ

    ಮೈಸೂರು: ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ 40 ರಿಂದ 65 ವರ್ಷದ ಅವಿವಾಹಿತ ಮಹಿಳೆಯರಿಗೆ, ಮಂಗಳಮುಖಿಯರಿಗೆ ಜೀವನ ಭದ್ರತೆ ಒದಗಿಸಲು ಮನಸ್ವಿನಿ, ಮೈತ್ರಿ ಯೋಜನೆ ರೂಪಿಸಲು ವಿ.ಶ್ರೀನಿವಾಸಪ್ರಸಾದ್ ಕಾರಣ ಎಂದು ರಾಜ್ಯ ಯೋಜನಾ ಆಯೋಗದ ಮಾಜಿ ಸದಸ್ಯರೂ ಆದ ಮೈವಿವಿ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ರಂಗಸ್ವಾಮಿ ಹೇಳಿದರು.

    ಮೆಸೂರು ಅಥ್ಲೆಟಿಕ್ಸ್ ಕ್ಲಬ್, ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಮೈವಿವಿ ಓವಲ್ ಮೈದಾನದಲ್ಲಿ ಭಾನುವಾರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

    ಐದು ದಶಕಗಳ ಸುದೀರ್ಘ ರಾಜಕಾರಣದ ಅನುಭವ ಶ್ರೀನಿವಾಸಪ್ರಸಾದ್ ಅವರಿಗಿತ್ತು. ವಿಧವೆಯರಿಗೆ, ವೃದ್ಧೆಯರಿಗೆ ಮಾಸಾಶನ ನೀಡಲಾಗುತ್ತದೆ. ಆದರೆ ವಿವಾಹ ಆಗದೇ ಇರುವ ಮಹಿಳೆಯರಿಗೆ ಏನು ಮಾಡುವುದು? ಅವರಿಗೂ ಜೀವನ ಭದ್ರತೆ ಕಲ್ಪಿಸಬೇಕಲ್ಲ ಎಂದು ಮಾಸಿಕ ಎರಡು ಸಾವಿರ ರೂ. ಪಿಂಚಣಿ ನೀಡುವ ಈ ಯೋಜನೆ ರೂಪಿಸಿದರು. ರಾಜ್ಯದಲ್ಲಿ ಸುಮಾರು 1.34 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆದು ಜೀವನ ಸಾಗಿಸುತ್ತಿದ್ದಾರೆ ಎಂದರು.
    ಶ್ರೀನಿವಾಸಪ್ರಸಾದ್ ಅವರ ಪುತ್ರಿ ಪ್ರತಿಮಾ ಮಾತನಾಡಿ, ಅನಾರೋಗ್ಯದಿಂದಾಗಿ ಸುಮಾರು 24 ವರ್ಷಗಳ ಹಿಂದೆಯೇ ತಂದೆಯವರನ್ನು ಏರ್‌ಲಿಫ್ಟ್ ಮಾಡಲಾಗಿತ್ತು. ಆದರೆ ಅವರ ಮನೋಸ್ಥೆರ್ಯ ಚೆನ್ನಾಗಿದ್ದರಿಂದ ಈವರೆಗೆ ಬದುಕುಳಿದು, ಜನಸೇವೆ ಮಾಡಿದರು. ಈ ಬಾರಿಯೂ ಅವರು ಆಸ್ಪತ್ರೆಯಿಂದ ಮನೆಗೆ ಮರಳುತ್ತಾರೆ ಎಂದುಕೊಂಡಿದ್ದೆವು. ಆದರೆ ಆ ರೀತಿಯಾಗಲಿಲ್ಲ ಎಂದು ಭಾವುಕರಾದರು.

    ಮಾಸ್ಟರ್ ಅಥ್ಲಿಟ್ ಎಂ.ಯೋಗೇಂದ್ರ ಮಾತನಾಡಿ, ಸ್ವಾಭಿಮಾನಿ, ಶುದ್ಧ ಹಸ್ತದ ರಾಜಕಾರಣಿಯಾಗಿದ್ದ ಶ್ರೀನಿವಾಸಪ್ರಸಾದ್ ಅವರು ಸ್ವತಃ ಕ್ರೀಡಾಪಟು ಹಾಗೂ ಕ್ರೀಡಾಪ್ರೇಮಿಯಾಗಿದ್ದರು. ಫುಟ್ ಬಾಲ್‌ನಲ್ಲಿ ರಾಜ್ಯ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ರಾಜಕಾರಣದತ್ತ ತೆರಳಿ, ಅಲ್ಲಿಗೆ ಕ್ರೀಡೆ ಮೊಟಕಾಯಿತು. ನನ್ನಂಥ ಕ್ರೀಡಾಪಟು ಈ ಮಟ್ಟಕ್ಕೆ ಬೆಳೆಯಲು ಪ್ರಸಾದ್ ಅವರ ಪ್ರೋತ್ಸಾಹವೇ ಕಾರಣ ಎಂದರು.

    ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಪಿ.ಜಿ.ಸತ್ಯನಾರಾಯಣ್, ಧೀರಜ್ ಪ್ರಸಾದ್, ಪಿ.ಜಿ. ಚಂದ್ರಶೇಖರ್, ಅಥ್ಲೆಟಿಕ್ಸ್ ಕ್ಲಬ್‌ನ ಪದಾಧಿಕಾರಿಗಳಾದ ಸಿ.ಕೆ.ಮರುಳೀಧರ್, ಮಹದೇವಯ್ಯ, ಜಿ.ಆರ್. ಪ್ರಭಾಕರ್, ಕೆ.ಎನ್. ಸೋಮಶೇಖರ್, ಟಿ.ಎಸ್. ರವಿಕುಮಾರ್, ಮಹದೇವರಾವ್, ಎಚ್.ಆರ್. ರಾಮಸ್ವಾಮಿ, ಪದ್ಮನಾಭ, ಕೆ.ಟಿ. ಬಲರಾಮೇಗೌಡ, ಅಭಿಷೇಕ್, ಎನ್.ಪ್ರಸಾದ್, ರೇಖಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts