More

    ಈದುಗೆ ಬೇಕು ಸಬ್‌ಸ್ಟೇಷನ್, ನಿರಂತರ ವಿದ್ಯುತ್ ವ್ಯತ್ಯಯ, ಲೋ ವೋಲ್ಟೇಜ್ ಸಮಸ್ಯೆ

    ಆರ್.ಬಿ.ಜಗದೀಶ್ ಕಾರ್ಕಳ

    ತಾಲೂಕಿನ ಬಜಗೋಳಿ ಹೋಬಳಿ ವ್ಯಾಪ್ತಿಯಲ್ಲಿರುವ ನಲ್ಲೂರು, ಈದು, ನೂರಾಳ್‌ಬೆಟ್ಟು ಗ್ರಾಮಗಳಲ್ಲಿ ಐದು ಸಾವಿರಕ್ಕೂ ಅಧಿಕ ವಿದ್ಯುತ್ ಸಂಪರ್ಕಗಳಿವೆ. ಘಟ್ಟದ ತಪ್ಪಲಿನಲ್ಲಿರುವ ಈ ಭಾಗದಲ್ಲಿ ಪ್ರತಿವರ್ಷ ವಾಡಿಕೆಯಲ್ಲಿ ಏಳು ತಿಂಗಳು ಗಾಳಿ, ಮಳೆ, ಸಿಡಿಲು ಇರುತ್ತವೆ. ಹೀಗಾಗಿ ನಿರಂತರ ವಿದ್ಯುತ್ ಸಂಪರ್ಕ ಕಡಿತವುಂಟಾಗುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಈದು ಗ್ರಾಮದಲ್ಲಿ ಸಬ್‌ಸ್ಟೇಶನ್ ಸ್ಥಾಪಿಸಬೇಕು ಎಂಬ ಬೇಡಿಕೆಯಿದೆ.
    ಸುಮಾರು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲಿಯೇ ಒಂದು ಸಣ್ಣ ಕಡ್ಡಿ ವಿದ್ಯುತ್ ಲೈನ್‌ನ ಮೇಲೆ ಬಿದ್ದರೂ ಅಷ್ಟೂ ವ್ಯಾಪ್ತಿಯಲ್ಲಿ ಲೈನ್‌ಮನ್‌ಗಳು ಹುಡುಕುತ್ತಾ ಸಾಗಬೇಕು. ಒಂದು ಕಡೆಯಲ್ಲಿ ಸರಿಪಡಿಸಲು ಮುಂದಾಗುವಾಗ 5 ಸಾವಿರ ಸಂಪರ್ಕಗಳಿಗೂ ವಿದ್ಯುತ್ ಸರಬರಾಜು ಇರುವುದಿಲ್ಲ. ಈ ಎಲ್ಲ ಸಮಸ್ಯೆ ನಿವಾರಿಸಲು ಈದು ಗ್ರಾಮದಲ್ಲಿ ಒಂದು ಸಬ್‌ಸ್ಟೇಷನ್ ಅನಿವಾರ್ಯ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡು ಬಂದಿದ್ದಾರೆ.
    ಅರಣ್ಯ ಇಲಾಖೆ ಅಡ್ಡಿ: ಈದು ಗ್ರಾಪಂ ಅಧ್ಯಕ್ಷರಾಗಿದ್ದ ರತ್ನಾಕರ ಆಚಾರ್ಯ ಅವರು ಗುಂಪಕಲ್ಲು ಬಳಿಯಿರುವ ಗೇರುಬೀಜ ತೋಪನ್ನು ಸಬ್‌ಸ್ಟೇಶನ್ ಸ್ಥಾಪನೆಗೆ ಬಳಸಿಕೊಳ್ಳುವಂತೆ ಕಡತ ಸಿದ್ಧಪಡಿಸಿ ಮೆಸ್ಕಾಂಗೆ ನೀಡಿದ್ದರು. ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದರು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮೀಸಲು ಅರಣ್ಯದ ನೆಪವೊಡ್ಡಿ ಯೋಜನೆಗೆ ತಡೆಯಾಗಿದ್ದರು. ಆ ನಂತರ ಯೋಜನೆ ನನೆಗುದಿಗೆ ಬಿದ್ದಿತ್ತು. ಇದೀಗ ದಿನದ 24 ಗಂಟೆಯಲ್ಲಿ ಸುಮಾರು 50 ರಿಂದ 60 ಬಾರಿ ವಿದ್ಯುತ್ ಸಂಪರ್ಕ ಕಡಿತ ಉಂಟಾಗುತ್ತಿರುವುದರಿಂದ ಗ್ರಾಮಸ್ಥರು ಎಚ್ಚೆತ್ತುಕೊಂಡಿದ್ದಾರೆ. ಸಬ್‌ಸ್ಟೇಶನ್ ಅನಿವಾರ್ಯತೆ ಮತ್ತೆ ಚರ್ಚೆಗೆ ಬಂದಿದೆ.

    ನಿಯಮ ಪರಿಪಾಲನೆಯಾಗಲಿ
    ಮೆಸ್ಕಾಂ ನಿಯಮದಂತೆ ಪ್ರತಿ 20 ಕಿಲೋಮೀಟರ್‌ಗೆ ಒಂದು ಸಬ್‌ಸ್ಟೇಶನ್ ಅಗತ್ಯವಾಗಿ ಬೇಕಿದೆ. ಆದರೆ ಕಾರ್ಕಳ ಸಬ್‌ಸ್ಟೇಶನ್‌ನಿಂದ ಈದು, ಕೂಡ್ಯೆ, ಗುಮ್ಮೆತ್ತು, ಕುರಿಯಾರ್‌ವರೆಗೆ ಸುಮಾರು 40 ಕಿಲೋಮೀಟರ್ ದೂರದವರೆಗೂ ಕಾರ್ಕಳ ಸಬ್‌ಸ್ಟೇಶನ್‌ನಿಂದ ವಿದ್ಯುತ್ ಸರಬರಾಜಾಗುತ್ತಿದೆ. ಇದರಿಂದಾಗಿ ಕಾರ್ಕಳದಿಂದ ಹೊರಡುವ 11 ಸಾವಿರ ಕೆವಿ ವಿದ್ಯುತ್ ಈದುವಿಗೆ ಬರುವಾಗ 2.5 ಸಾವಿರ ಕೆವಿಯಷ್ಟು ಕಡಿಮೆಯಾಗುತ್ತದೆ. ಇದರಿಂದ ನಲ್ಲೂರು, ಈದು ನೂರಾಳ್‌ಬೆಟ್ಟು ಗ್ರಾಮಗಳಿಗೆ 220 ವೋಲ್ಟೇಜ್ ಸಿಗುವ ಬದಲಿಗೆ 170ರ ಆಸುಪಾಸಿನಲ್ಲಿ ಲಭ್ಯವಿರುತ್ತದೆ. ಇದರಿಂದ ಈ ಭಾಗದ ಸಾವಿರಾರು ಕೃಷಿಕರ ಪಂಪ್ ಸೆಟ್‌ಗಳು ನಿರಂತರವಾಗಿ ಹಾಳಾಗುತ್ತಿರುತ್ತದೆ. ನೀರಾವರಿಗೂ ಸಮಸ್ಯೆ ಉಂಟಾಗುತ್ತಿದೆ. ಮನೆಬಳಕೆಯಲ್ಲಿ ಫ್ಯಾನ್, ಮಿಕ್ಸಿ, ರೆಫ್ರಿಜರೇಟರ್‌ಗಳಿಗೆ ಭಾರಿ ಪ್ರಮಾಣದ ಹಾನಿಯೂ ಸಂಭವಿಸುತ್ತಿದೆ.

    ಉಡುಪಿ ಜಿಲ್ಲೆಗೆ ವಿದ್ಯುತ್ ನೀಡುವ ಅದಾನಿ ಪವರ್ ಕಾರ್ಪೋರೇಶನ್‌ನ ಹೈವೋಲ್ಟೇಜ್ ವಿದ್ಯುತ್ ಲೈನ್ ಕೂಡ ಈದು ಗ್ರಾಮವಾಗಿಯೇ ಹಾದುಹೋಗಿರುವುದಿಂದ ಸಬ್‌ಸ್ಟೇಶನ್ ನಿರ್ಮಾಣಕ್ಕೆ ಹೆಚ್ಚಿನ ವೆಚ್ಚ ತಗಲುವುದಿಲ್ಲ. 4 ಎಕರೆ ಜಾಗವಷ್ಟೇ ಮೆಸ್ಕಾಂ ಬೇಕಿರುವ ಮೂಲ ಸೌಕರ್ಯ. ಖಾಸಗಿ ಜಾಗವಿದ್ದರೆ ಅದಕ್ಕೆ ನಿಗದಿತ ಸರ್ಕಾರಿ ಮೌಲ್ಯದ ಬೆಲೆಯಲ್ಲಿ ಮೆಸ್ಕಾಂ ಖರೀದಿಸಲೂ ಸಿದ್ಧವಿದೆ. ಈ ಬಗ್ಗೆ ಸ್ಥಳೀಯ ಜನಪತಿನಿಧಿಗಳು ಆಸಕ್ತಿ ವಹಿಸಿದರೆ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಬಹುದು.

    ಬಜಗೋಳಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋಗಾಗಿ ಕಾದಿರಿಸಿದ ಜಾಗದ ಪಕ್ಕದಲ್ಲಿ ಮೆಸ್ಕಾಂ ಇಲಾಖೆಗಾಗಿ 2 ಎಕರೆ ಜಾಗ ಕಾದಿರಿಸಲಾಗಿದೆ. ಜಾಗ ಮಂಜೂರಾತಿಗಾಗಿ ಕಡತಗಳು ಜಿಲ್ಲಾಧಿಕಾರಿಯವರ ಮುಂದಿದೆ. ಜಾಗ ಮಂಜೂರು ಮಾಡಿದ್ದೇ ಆದಲ್ಲಿ 32 ಕೆವಿ ಸಬ್‌ಸ್ಟೇಶನ್ ನಿರ್ಮಾಣಗೊಳ್ಳಲಿದೆ. ಆ ಮೂಲಕ ಬಹುವರ್ಷ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ.
    ದಿಲೀಪ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಪ್ರಭಾರ) ಕಾರ್ಕಳ ವಿಭಾಗ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts