More

    ಉಪ ನೋಂದಣಿ ಕಚೇರಿಗಿಲ್ಲ ಮೂಲಸೌಲಭ್ಯ, ಬದಲಾವಣೆ ಕಂಡಿಲ್ಲ ಬ್ರಿಟಿಷರ ಕಾಲದ ಕಟ್ಟಡ

    ಶಂಕರನಾರಾಯಣ: ಬ್ರಿಟಿಷರ ಕಾಲದಲ್ಲಿ ಆರಂಭವಾದ ಶಂಕರನಾರಾಯಣ ಉಪ ನೋಂದಣಿ ಕಚೇರಿ ಅತ್ಯಂತ ಗ್ರಾಮೀಣ, ನಕ್ಸಲ್ ಪೀಡಿತ ಪ್ರದೇಶದಲ್ಲಿ ಇದೆ. 1900ರಲ್ಲಿ ಆರಂಭವಾದ ಕಚೇರಿ ಹಿಂದೆ ಹೇಗಿತ್ತೋ ಇಂದಿಗೂ ಹಾಗೆಯೇ ಇದೆ.

    ಕೋಟ, ಬ್ರಹ್ಮಾವರ, ಕುಂದಾಪುರ, ವಂಡ್ಸೆ, ಬೈಂದೂರು ಹೋಬಳಿ, 42 ಗ್ರಾಮ ವಾಸಿಗಳು ಉಪನೋಂದಣಿ ಕಚೇರಿ ಆಶ್ರಿತರು. ಈ ಕಚೇರಿ ಅವ್ಯವಸ್ಥೆಯ ತಾಣವಾಗಿದೆಯಲ್ಲದೆ, ಮಧ್ಯವರ್ತಿಗಳ ಹಾವಳಿ ಕೂಡ ಹೆಚ್ಚಿದೆ. ಕಚೇರಿಗೆ ಪ್ರತಿದಿನ ನೂರಾರು ಜನ ಭೂ ದಾಖಲೆಗಳ ನೋಂದಣಿ, ಋಣಭಾರ ಪತ್ರ, ಅಡಮಾನ ಪತ್ರ, ವಿವಾಹ ನೋಂದಣಿ, ದೃಢೀಕೃತ ನಕಲು ಮೊದಲಾದ ಕೆಲಸಗಳಿಗೆ ಬರುತ್ತಾರೆ. ಶಂಕರನಾರಾಯಣ ಪೇಟೆ ಬಳಿ ಕಿರಿದಾದ ಕಟ್ಟಡದಲ್ಲಿ, ರಾಜ್ಯ ಹೆದ್ದಾರಿ ಪಕ್ಕ 80 ಅಡಿ ಎತ್ತರದ ಗುಡ್ಡದ ತುದಿಯಲ್ಲಿರುವ ಈ ಕಚೇರಿಗೆ ಹೋಗುವುದೇ ದೊಡ್ಡ ಸಾಹಸ.

    ನೂತನ ಕಟ್ಟಡಕ್ಕೆ ಪ್ರಸ್ತಾವನೆ: ಕಚೇರಿ ಇರುವ ಎತ್ತರದ ಗುಡ್ಡವನ್ನು 10ರಿಂದ 15 ಅಡಿಯಷ್ಟು ತಗ್ಗಿಸಿ ಜನರಿಗೆ ಅನುಕೂಲವಾಗುವಂತೆ ಆಧುನಿಕ ಕಟ್ಟಡ ನಿರ್ಮಿಸುವಂತೆ ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿಯ ನಿಯೋಗ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದೆ. ಶಾಸಕರು ಸಚಿವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಆವರ್ಸೆ ರತ್ನಾಕರ ಶೆಟ್ಟಿ, ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ, ಕ್ರೋಡ ಶಂಕರನಾರಾಯಣ ದೇಗುಲ ಪ್ರಧಾನ ಅರ್ಚಕ ಕುಪ್ಪಾರು ರಾಮಚಂದ್ರ ಐತಾಳ, ಹಿಲಿಯಾಣ ನಾರಾಯಣ ಶೆಟ್ಟಿ, ತೋತಾಡಿ ರಮೇಶ್ ಕನ್ನಂಥ, ಹಿಲಿಯಾಣ ಸುಭಾಶ್ಚಂದ್ರ ಹೆಗ್ಡೆ ಮತ್ತಿತರರು ನಿಯೋಗದಲ್ಲಿದ್ದರು.

    ಹಿಂದೆ ಇಲ್ಲಿ ಬರುವವರು ಮೆಟ್ಟಿಲು ಹತ್ತಿ ಹೋಗಬೇಕಿತ್ತು. ಪ್ರಸಕ್ತ ಕಡಿದಾದ ತಿರುವಿನ ಇಕ್ಕಟ್ಟಾದ ಜಾರುವ ರಸ್ತೆ ಇದೆ. ವಾಹನಗಳು ಪ್ರಯಾಸದಿಂದ ಮೇಲ್ಮುಖವಾಗಿ ಚಲಿಸಿದರೆ, ವಾಪಸ್ ಬರುವುದು ಕೂಡ ಅಪಾಯಕಾರಿ. ಇಲ್ಲಿನ ಅವ್ಯವಸ್ಥೆ ಬಗ್ಗೆ ಶಾಸಕರು ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

    – ಚಿಟ್ಟೆ ರಾಜಗೋಪಾಲ ಹೆಗ್ಡೆ, ಸಂಚಾಲಕ ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts