More

    ವಿದ್ಯಾರ್ಥಿಗಳ ಕೈ ಸೇರದ ಲ್ಯಾಪ್‌ಟಾಪ್

    | ಜಗದೀಶ ಖೊಬ್ರಿ ತೆಲಸಂಗ

    ರಾಜ್ಯ ಸರ್ಕಾರ 2019-2020ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿರುವುದು ಸ್ವಾಗತಾರ್ಹ. ಆದರೆ, ರಾಜ್ಯದ ಎಲ್ಲೆಡೆ ಲ್ಯಾಪ್‌ಟಾಪ್ ವಿತರಣೆಯಾದರೂ ಅಥಣಿ ತಾಲೂಕಿನ ಯಾವೊಂದು ಕಾಲೇಜಿನಲ್ಲಿಯೂ ವಿತರಿಸದಿರುವುದು ಸದ್ಯ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಪೂರೈಕೆಯಾದ ಲ್ಯಾಪ್‌ಟಾಪ್‌ಗಳನ್ನು ಕಾಲೇಜುಗಳಲ್ಲಿಟ್ಟು ಕಾವಲು ಕಾಯುತ್ತಿದ್ದಾರೆ. ವಿತರಣೆ ಮಾತ್ರ ಮಾಡುತ್ತಿಲ್ಲ. ಯಾಕೆ ವಿತರಿಸುತ್ತಿಲ್ಲ ಎಂದು ಕೇಳಿದರೆ ಸಮರ್ಪಕ ಉತ್ತರವಿಲ್ಲ. ಪೂರೈಕೆಯಾಗಿ ಎರಡು ತಿಂಗಳು ಕಳೆದರೂ ಲ್ಯಾಪ್‌ಟಾಪ್ ವಿತರಣೆ ನಡೆಯದಿರುವುದು ವಿಪರ್ಯಾಸ. ಸರ್ಕಾರದ ಯೋಜನೆ ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಂಡಾಗ ಮಾತ್ರ ಯೋಜನೆಗಳ ಪ್ರಯೋಜನ ಸೂಕ್ತವಾಗಿ ಆಗುತ್ತದೆ. ಈ ಕೆಲಸವನ್ನು ಸಮರ್ಪಕವಾಗಿ ಅಧಿಕಾರಿಗಳು ನಿರ್ವಹಿಸಬೇಕು. ಇಲ್ಲಿ ಲ್ಯಾಪ್‌ಟಾಪ್ ವಿತರಣೆಗೆ ಕಾಲೇಜು ಶಿಕ್ಷಣ ಇಲಾಖೆ ತನ್ನ ಕಾರ್ಯವೈಖರಿಯಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳದಿರುವುದಕ್ಕೆ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ ವಿದ್ಯಾರ್ಥಿಗಳ ಗತಿ.

    ಅಥಣಿ ತಾಲೂಕಿನ ಕಾಲೇಜುಗಳಲ್ಲಿ ಲ್ಯಾಪ್‌ಟಾಪ್ ವಿತರಣೆ ಮಾಡದಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ಅದಕ್ಕೆ ವಿತರಿಸಿಲ್ಲ ಎಂದು ಹೇಳುತ್ತಿದ್ದಾರೆ ಶಾಸಕ ಮಹೇಶ ಕುಮಠಳ್ಳಿ. ಇನ್ನು ಧಾರವಾಡದ ಜೆಡಿ ಕಚೇರಿಯಿಂದ ವಿತರಿಸದಂತೆ ದೂರವಾಣಿ ಮೂಲಕ ಸಂದೇಶ ಬಂದಿದ್ದರಿಂದ ವಿತರಿಸಿಲ್ಲ ಎಂದು ಪ್ರಾಚಾರ್ಯರು ಹೇಳುತ್ತಿದ್ದಾರೆ. ಇಂದು ಕೊಡುತ್ತಾರೆ ನಾಳೆ ಕೊಡುತ್ತಾರೆ ಎಂದು ವಿದ್ಯಾರ್ಥಿಗಳು ಮಾತ್ರ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪ್ರತಿಭಟನೆಯ ನೆಪವೊಡ್ಡಿ ಸಮಸ್ಯೆಯೇ ಇಲ್ಲದೆ ವಿತರಣೆಯನ್ನು ತಡೆ ಹಿಡಿದುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಯವಿಟ್ಟು ಲ್ಯಾಪ್‌ಟಾಪ್ ವಿತರಿಸಿ ಎಂದು ಸ್ಥಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಪ್ರಾಚಾರ್ಯರು ಮತ್ತು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರಲ್ಲಿ ಮನವಿ ಮಾಡುತ್ತಿದ್ದಾರೆ. ಆದರೆ ಸಮರ್ಪಕ ಉತ್ತರ ದೊರೆಯದೆ ಲ್ಯಾಪ್‌ಟಾಪ್ ವಿತರಣೆ ಕಾರ್ಯ ಮಾತ್ರ ಕಗ್ಗಂಟಾಗಿಯೇ ಉಳಿದಿದೆ.

    ಲ್ಯಾಪ್‌ಟಾಪ್ ಬಂದಿದ್ದು, ಪ್ರಾದೇಶಿಕ ಜಂಟಿ ನಿರ್ದೇಶಕರ ಕಾಲೇಜು ಶಿಕ್ಷಣ ಇಲಾಖೆ ಧಾರವಾಡ ಕಚೇರಿಯಿಂದ ದೂರವಾಣಿ ಮೂಲಕ ವಿತರಿಸದಂತೆ ಸೂಚನೆ ಬಂದಿದ್ದರಿಂದ ವಿತರಿಸಿಲ್ಲ. ಬಂದಿರುವ ಲ್ಯಾಪ್‌ಟಾಪ್‌ಗಳನ್ನು ಕಾವಲು ಕಾಯುವುದೇ ಸವಾಲಾಗಿದೆ.
    ಆದೇಶ ಬಂದರೆ ತಕ್ಷಣ ವಿತರಿಸಲಾಗುವುದು.
    | ಡಾ.ಉದಯಕುಮಾರ ದೊಡ್ಡಮನಿ ಪ್ರಾಚಾರ್ಯರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಲಸಂಗ

    2019-2020ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್ ಬಂದಿವೆ. ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಬಂದಿಲ್ಲ. ಹಾಗಾಗಿ ನಮಗೂ ಕೊಡಿ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾಗಿ ವಿತರಣೆ ತಡೆ ಹಿಡಿಯಲಾಗಿದೆ.
    | ಮಹೇಶ ಕುಮಠಳ್ಳಿ ಶಾಸಕ

    ನಮ್ಮ ಹೆಸರಲ್ಲಿ ಬಂದ ಲ್ಯಾಪ್‌ಟಾಪ್ ವಿತರಣೆಗೆ ಮೀನಮೇಷ ಎಣಿಸುತ್ತಿರುವುದು ಸರಿ ಅಲ್ಲ. ದ್ವಿತೀಯ, ಅಂತಿಮ ವರ್ಷದ ವಿದ್ಯಾರ್ಥಿಗಳು ನಮಗೂ ಕೊಡಿ ಎಂದು ಪ್ರತಿಭಟಿಸುತ್ತಿದ್ದಾರೆ ಹೊರತು ಪ್ರಥಮ ವರ್ಷದವರಿಗಾಗಿ ಬಂದಿರುವ ಲ್ಯಾಪ್‌ಟಾಪ್ ಕೊಡಬೇಡಿ ಎಂದು ಎಲ್ಲೂ ಪ್ರತಿಭಟಿಸಿಲ್ಲ. ಹಾಗಾಗಿ ಪ್ರಥಮ ವರ್ಷದವರಿಗೆ ಬಂದಿರುವ ಲ್ಯಾಪ್‌ಟಾಪ್ ವಿತರಿಸಿರಿ. ಪ್ರತಿಭಟಿಸುವವರ ಸಮಸ್ಯೆ ಕೇಳಿ ಸರ್ಕಾರದ ನಿರ್ಧಾರ ಪ್ರಕಟಿಸಿ. ಅದು ಬಿಟ್ಟು ಪ್ರತಿಭಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ನಮಗೆ ಅನ್ಯಾಯ ಮಾಡುವುದು ಸರಿಯಲ್ಲ.
    | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ತೆಲಸಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts