More

    ಭಯ ಬಿಟ್ಟು ವಿದ್ಯಾರ್ಥಿಗಳು ಹಾಜರು

    ಧಾರವಾಡ ಕೋವಿಡ್ ಹಿನ್ನೆಲೆಯಲ್ಲಿ ವಿಳಂಬವಾಗಿ ನಿಗದಿಯಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನವಾದ ಸೋಮವಾರ ಜಿಲ್ಲೆಯಾದ್ಯಂತ ಸುಗಮವಾಗಿ ಜರುಗಿತು. ಎಲ್ಲೂ ಪರೀಕ್ಷಾ ಅಕ್ರಮಗಳು ಪತ್ತೆಯಾಗಿಲ್ಲ.
    ಜಿಲ್ಲಾದ್ಯಂತ 29,075 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ ಕೋರ್ ವಿಷಯಗಳಾದ ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಗಣಿತ ಪರೀಕ್ಷೆಗೆ 28,991 ಜನ ಹಾಜರಾಗಿ 84 ವಿದ್ಯಾರ್ಥಿಗಳು ಗೈರಾಗಿದ್ದರು.
    ಕೋವಿಡ್ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಪಾಡುವ ಉದ್ದೇಶದಿಂದ 161 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿತ್ತು. 1 ಕೊಠಡಿಯಲ್ಲಿ ಕೇವಲ 12 ವಿದ್ಯಾರ್ಥಿಗಳು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಕೊಠಡಿ ಮೇಲ್ವಿಚಾರಕರು ಸೇರಿ 4,600 ಸಿಬ್ಬಂದಿ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
    ಅನಾರೋಗ್ಯ ಕಂಡುಬಂದರೆ ಅವರಿಗಾಗಿ ಪ್ರತಿ ಕೇಂದ್ರದಲ್ಲಿ ಪ್ರತ್ಯೇಕ ವಿಶೇಷ ಕೊಠಡಿ ತೆರೆಯಲಾಗಿತ್ತು. ಆದರೆ, ಎಲ್ಲೂ ಅನಾರೋಗ್ಯ ಪ್ರಕರಣ ಕಂಡುಬರಲಿಲ್ಲ. ಅದೇರೀತಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಸಹ ಕಾಣಿಸಿಲ್ಲ.
    ಹಲವು ತಿಂಗಳು ಮನೆಯಲ್ಲಿದ್ದ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದರು. ವಿವಿಧ ಶಾಲೆಗಳಲ್ಲಿ ಸಂಘ- ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್, ಮಾಸ್ಕ್ ನೀಡಿ, ಥರ್ಮಲ್ ಸ್ಕ್ರೀನಿಂಗ್ ಮಾಡಿದ ನಂತರವೇ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅನುಮತಿ ನೀಡಲಾಯಿತು. ವಿದ್ಯಾರ್ಥಿಗಳು ಇದೇ ಮೊದಲ ಬಾರಿ ಬಹುಆಯ್ಕೆ ಮಾದರಿಯ ಪ್ರಶ್ನೆಗಳಿಗೆ ಉತ್ತರಿಸಿ, ಖುಷಿಯಿಂದ ತೆರಳಿದರು.
    ಅಧಿಕಾರಿಗಳಿಂದ ಪರಿಶೀಲನೆ
    ನಗರದ ವಿವಿಧ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಜಿ.ಪಂ. ಸಿಇಒ ಡಾ. ಬಿ. ಸುಶೀಲಾ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
    ನಗರದ ಮಾಳಮಡ್ಡಿಯಲ್ಲಿರುವ ಕೆ.ಇ. ಬೋರ್ಡ್ ಪ್ರೌಢಶಾಲೆ ಹಾಗೂ ಕಿಟೆಲ್ ಕಾಲೇಜು ಆವರಣದ ಬಾಸೆಲ್ ಮಿಷನ್ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದರು. ಜಿ.ಪಂ. ಸಿಇಒ ಡಾ. ಬಿ. ಸುಶೀಲಾ ಅವರು ಪ್ರಜೆಂಟೇಶನ್ ಪ್ರೌಢಶಾಲೆಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಪರೀಕ್ಷಾ ಕೇಂದ್ರಗಳಿಗೆ ಮತ್ತು ಹೆಡ್ ಪೋಸ್ಟ್ ಎದುರಿನ ಬಾಸೆಲ್ ಮಿಷನ್ ಶಾಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಗಳ ಪಾಲನೆ, ಪರಸ್ಪರ ಅಂತರ ಪಾಲನೆ, ಐಸೋಲೇಶನ್ ರೂಂಗಳನ್ನು ಪರಿಶೀಲಿಸಿದರು. ಡಿಡಿಪಿಐ ಮೋಹನಕುಮಾರ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ಇತರರಿದ್ದರು.
    ಗೊಂದಲದಲ್ಲಿದ್ದ ವಿದ್ಯಾರ್ಥಿನಿಗೆ ನೆರವು
    ಹುಬ್ಬಳ್ಳಿ: ಇಲ್ಲಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿಯ ಪರೀಕ್ಷಾ ಕೇಂದ್ರಕ್ಕೆ ಬಂದು ಗೊಂದಲಕ್ಕೀಡಾಗಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪೊಲೀಸ್ ಮತ್ತು ಗೃಹರಕ್ಷಕ ದಳದವರು ಧೈರ್ಯ ತುಂಬಿ, ತಕ್ಷಣದಲ್ಲಿ ನೆರವಾಗುವ ಮೂಲಕ ಪರೀಕ್ಷೆಗೆ ಹಾಜರಾಗಲು ನೆರವಾದರು. ಕೀರ್ತಿ ಎಂಬ ವಿದ್ಯಾರ್ಥಿನಿಯ ಪರೀಕ್ಷಾ ಕೇಂದ್ರ ದುರ್ಗಾದೇವಿ ಪ್ರೌಢಶಾಲೆಯಲ್ಲಿ ಇತ್ತು. ಆದರೆ ಆಕೆ ಲ್ಯಾಮಿಂಗ್ಟನ್ ಶಾಲೆಯಲ್ಲೇ ಇದೆ ಎಂದು ಭಾವಿಸಿ ಬಂದಿದ್ದಳು. ಸೂಚನಾ ಫಲಕದಲ್ಲಿ ಆಕೆಯ ನೋಂದಣಿ ಸಂಖ್ಯೆ ಇರಲಿಲ್ಲ. ಗೊಂದಲಕ್ಕೀಡಾಗಿದ್ದ ವಿದ್ಯಾರ್ಥಿನಿಗೆ ಅಲ್ಲಿಯ ಸಿಬ್ಬಂದಿ, ದುರ್ಗಾದೇವಿ ಪ್ರೌಢಶಾಲೆಗೆ ತೆರಳುವಂತೆ ಸಲಹೆ ನೀಡಿದರು. ಆದರೆ, ನಡೆದುಕೊಂಡು ಹೋಗುವಷ್ಟರಲ್ಲಿ ವಿಳಂಬವಾಗುತ್ತದೆ ಎಂದು ಚಿಂತಿತಳಾಗಿದ್ದಳು. ಅಲ್ಲಿಯೇ ಕರ್ತವ್ಯದಲ್ಲಿದ್ದ ಗೃಹರಕ್ಷಕಿ ಬಸಮ್ಮ ತೋಟದ ಅವರು ವಿದ್ಯಾರ್ಥಿನಿಯ ಸಂಕಷ್ಟ ಗಮನಿಸಿ ಧೈರ್ಯ ಹೇಳಿ, ಪೊಲೀಸರಿಗೆ ಮಾಹಿತಿ ನೀಡಿದಳು. ಕಾನ್​ಸ್ಟೇಬಲ್
    ಎಸ್.ವಿ. ಲಿಂಗದಾಳ ಅವರು ತಮ್ಮ ಬೈಕ್​ನಲ್ಲಿ ಬಾಲಕಿಯನ್ನು ಕರೆದುಕೊಂಡು ಹೋಗಿ, ಸಮಯಕ್ಕೆ ಮುಂಚಿತವಾಗಿಯೇ ದುರ್ಗಾದೇವಿ ಪ್ರೌಢಶಾಲೆಗೆ ತಲುಪಿಸಿ, ಅಲ್ಲಿಯ ಸಿಬ್ಬಂದಿಗೆ ವಿಷಯ ತಿಳಿಸಿ ಕೊಠಡಿ ಸಂಖ್ಯೆ ತಿಳಿದುಕೊಳ್ಳಲು ಸಹಕರಿಸಿದರು. ಧನ್ಯವಾದ ತಿಳಿಸಿದ ಬಾಲಕಿ ನಿಶ್ಚಿಂತೆಯಿಂದ ಕೊಠಡಿಗೆ ತೆರಳಿದಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts