More

    ಸರ್ಕಾರಿ ಹಾಸ್ಟೆಲ್ ಕಡೆ; ವಿದ್ಯಾರ್ಥಿಗಳ ನಡೆ…

    ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ (ಕಾಲೇಜ್ ಹಾಸ್ಟೆಲ್) ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದಕ್ಕೆ ಕಾರಣ ಕರೊನಾ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ?

    | ದೇವರಾಜ್ ಕನಕಪುರ

    ಜನರ ಆರ್ಥಿಕ ಪರಿಸ್ಥಿತಿಯ ಮೇಲೆ ಕರೊನಾ ಸಾಕಷ್ಟು ಪರಿಣಾಮ ಬೀರಿದೆ. ಮೊದಲು ಲಕ್ಷಾಂತರ ರೂ. ಶುಲ್ಕ ನೀಡಿ ಮಕ್ಕಳನ್ನು ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ಸೇರಿಸುತ್ತಿದ್ದ ಎಷ್ಟೋ ಪಾಲಕರು ಈಗ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿಹೋಗಿದ್ದಾರೆ. ಪರಿಣಾಮವಾಗಿ ಈ ಬಾರಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲಾ-ಕಾಲೇಜುಗಳಿಗೆ ಸೇರಿಸಿದ್ದಲ್ಲದೆ, ಉಚಿತ ಹಾಸ್ಟೆಲ್​ಗಳಿಗೆ ದಾಖಲಿಸುತ್ತಿದ್ದಾರೆ.

    ವಿದ್ಯಾರ್ಥಿಗಳನ್ನು ಹಾಸ್ಟೆಲ್​ಗೆ ಸೇರಿಸುವುದರಿಂದ ಪಾಲಕರಿಗೆ ಮಕ್ಕಳ ವಸತಿ ವೆಚ್ಚದ ಹೊರೆ ತಗ್ಗಿದಂತಾಗುತ್ತದೆ. ಆದರೆ, ಎಂದಿನಂತೆ ಕಾಲೇಜುಗಳ ಶುಲ್ಕವನ್ನು ಪಾಲಕರೇ ಪಾವತಿಸಬೇಕಿದೆ. ಕಾಲೇಜು ಶುಲ್ಕಕ್ಕಿಂತ ವಸತಿ ವೆಚ್ಚವೇ ಜಾಸ್ತಿ ಇರುವುದರಿಂದ ಪಾಲಕರು ಹಾಸ್ಟೆಲ್​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

    ಸರ್ಕಾರಿ ಹಾಸ್ಟೆಲ್ ಕಡೆ; ವಿದ್ಯಾರ್ಥಿಗಳ ನಡೆ...ರಾಜ್ಯದ 30 ಜಿಲ್ಲೆಗಳಲ್ಲಿ ಬಾಲಕರ 377 ಮತ್ತು ಬಾಲಕಿಯರ 257 ಹೀಗೆ ಒಟ್ಟು 634 ಹಾಸ್ಟೆಲ್​ಗಳಿವೆ. ಇದರಲ್ಲಿ 70,390 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಇಲಾಖೆ ಮಂಜೂರಾತಿ ನೀಡಿದೆ. ವಿಶೇಷ ಎಂದರೆ ಈ ಬಾರಿ ಮಂಜೂರಾತಿ ಮೀರಿ 78,839 ವಿದ್ಯಾರ್ಥಿಗಳ ದಾಖಲಾತಿ ನಡೆದಿದೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2017-18ರಲ್ಲಿ 63,771 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 2018-19ರಲ್ಲಿ 70,133 ಮತ್ತು 2019-20ರಲ್ಲಿ 78,839 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 2020-21ನೇ ಸಾಲಿನ ಪ್ರವೇಶ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಬಾಲಕರೇ ಹೆಚ್ಚು: ಬಾಲಕರ ಹಾಸ್ಟೆಲ್​ಗಳ ಸಂಖ್ಯೆ ಹೆಚ್ಚಿದ್ದು, ಇದರ ಜತೆಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಲ್ಲಿ ಬಾಲಕರೇ ಜಾಸ್ತಿ ಇದ್ದಾರೆ. 2018-19ರಲ್ಲಿ 40,376 ಬಾಲಕರು ಮತ್ತು 23,395 ಬಾಲಕಿಯರಿದ್ದರು. 2019-20ರಲ್ಲಿ 48,295 ಬಾಲಕರು ಮತ್ತು 30,544 ಬಾಲಕಿಯರು ಪ್ರವೇಶ ಪಡೆದಿದ್ದಾರೆ.

    ಬಳ್ಳಾರಿಯಲ್ಲಿ ಅತಿ ಹೆಚ್ಚು: ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಬಳ್ಳಾರಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಸ್ಟೆಲ್​ಗಳಿಗೆ ಪ್ರವೇಶ ಪಡೆದಿದ್ದಾರೆ. ಬಳ್ಳಾರಿ- 6,739, ತುಮಕೂರು- 6,057 ಮತ್ತು ಚಿತ್ರದುರ್ಗ-5,707 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅತಿ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಜಿಲ್ಲೆಗಳನ್ನು ಗಮನಿಸಿದಾಗ ಮೊದಲ ಸ್ಥಾನದಲ್ಲಿ ಕೊಡಗು ಇದೆ. ಇಲ್ಲಿ 313 ಹಾಗೂ ಉತ್ತರ ಕನ್ನಡ- 433, ರಾಮನಗರ- 512 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

    ಸೌಲಭ್ಯಗಳೇನು?: ರಾಜ್ಯ ಸರ್ಕಾರ ಈ ಹಾಸ್ಟೆಲ್​ಗಳ ನಿರ್ವಹಣೆಗಾಗಿ ಪ್ರತಿ ವರ್ಷ 170 ಕೋಟಿ ರೂ. ನೀಡುತ್ತದೆ. ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಿರುತ್ತದೆ. ಹಾಸ್ಟೆಲ್​ನಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ನಿಗದಿ ಪಡಿಸಿರುವಂತೆ ಮಾಸಿಕ 1,600 ರೂ.ಗಳನ್ನು ವಿದ್ಯಾರ್ಥಿವೇತನದಿಂದ ಹಾಸ್ಟೆಲ್ ದರಗಳಂತೆ ವಾರ್ಷಿಕ ತಗಲುವ ವೆಚ್ಚವನ್ನು ಭರಿಸುತ್ತದೆ. ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸೌಲಭ್ಯ, ಸಂಭ್ರಮ ಕಿಟ್​ಗಳನ್ನು ನೀಡುತ್ತದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಇತರ ರಿಯಾಯಿತಿಗಳು, ಬಿ.ಇಡಿ, ಡಿ.ಇಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ಸಹ ನೀಡುತ್ತದೆ.

    ಯಾರಿಗೆ ಪ್ರವೇಶ?: ಪಿಯು, ಪದವಿ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಪಶುವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಈ ಹಾಸ್ಟೆಲ್​ಗಳಲ್ಲಿ ಪ್ರವೇಶ ಪಡೆಯಲು ಅರ್ಹರು.

    ವಲಸೆ ಕಾರಣ: ಉತ್ತರ ಕರ್ನಾಟಕದ ಕೆಲವು ಕುಟುಂಬದವರು ಉದ್ಯೋಗವನ್ನರಸಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಾರೆ. ಇಂತಹ ಸಮಯದಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸ ಮೊಟಕಾಗಬಾರದು ಎಂಬ ಉದ್ದೇಶದಿಂದ ಹಾಸ್ಟೆಲ್​ಗೆ ಸೇರಿಸುತ್ತಾರೆ. ಆದರೆ, ಈ ಬಾರಿ ಕರೊನಾ ಬಂದ ಕಾರಣ, ಅರ್ಥಿಕ ಸಂಕಷ್ಟದಿಂದ ಹಾಸ್ಟೆಲ್​ಗೆ ಸೇರಿಸಿರುವ ಪಾಲಕರ ಸಂಖ್ಯೆಯೇ ಹೆಚ್ಚು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

    ಕರೊನಾದಿಂದ ಮನೆಯಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾಗಿದೆ. ಇದರಿಂದ ಹಾಸ್ಟೆಲ್​ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುವುದು ಉತ್ತಮ ಎಂದು ನನಗೆ ಎನಿಸಿತು. ಈ ಹಿನ್ನೆಲೆಯಲ್ಲಿ ನಾನು ಅನಿವಾರ್ಯವಾಗಿ ಇಲ್ಲಿ ಪ್ರವೇಶ ಪಡೆದಿದ್ದೇನೆ.

    | ಎಲ್. ರಂಜನ್ ಕುಮಾರ್ ಮಂಡ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts