More

    ಬ್ರೇಕ್​ ಫೇಲ್​ ಆಗಿ ಹಿಂದಕ್ಕೆ ಚಲಿಸಿದ ಕೆಎಸ್​ಆರ್​ಟಿಸಿ ಬಸ್ಸು! ವಿದ್ಯಾರ್ಥಿಗಳಿಂದ ಉಳಿಯಿತು ಪ್ರಯಾಣಿಕರ ಪ್ರಾಣ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ವೀರದಿಮ್ಮಮ್ಮನ ಅರಣ್ಯ ಕಣಿವೆ ಪ್ರದೇಶದ ಏರುಮುಖ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಮುಂದೆ ಬದಲು ಹಿಂದಕ್ಕೆ ಚಲಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಬ್ರೇಕ್​ ಫೇಲ್​ ಆಗಿದ್ದು, ವಿದ್ಯಾರ್ಥಿಗಳಿಂದಾಗಿ ಪ್ರಯಾಣಿಕರ ಪ್ರಾಣ ಉಳಿದಿದೆ.

    ಗೌರಿಬಿದನೂರಿನಿಂದ ಮಂಚೇನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದ ಕೆಎಸ್ಆರ್​ಟಿಸಿ ಬಸ್ಸಿನ ಬ್ರೇಕ್ ವೀರದಿಮ್ಮಮ್ಮನ ಕಣಿವೆಯಲ್ಲಿ ಫೇಲ್ ಆಗಿದೆ. ಜತೆಗೆ ಎಂಜಿನ್ ಆಫ್ ಆಗಿದೆ. ಏರುಮುಖವಾಗಿ ಸಂಚರಿಸುತ್ತಿದ್ದ ವಾಹನ ಇದ್ದಕ್ಕಿದ್ದಂತೆ ಹಿಂದಕ್ಕೆ ಚಲಿಸಲಾರಂಭಿಸಿದೆ. ಭಯದಿಂದ ಪ್ರಯಾಣಿಕರು ಅಘಾತಗೊಂಡು ಕಿರುಚಿಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳು ದಿಢೀರನೇ ಬಸ್ಸಿನಿಂದ ಇಳಿದು ಚಕ್ರದಡಿಗೆ ದೊಡ್ಡ ಕಲ್ಲುಗಳನ್ನು ಹಾಕಿದ್ದಾರೆ. ಇದರಿಂದ ಬಸ್ ರಸ್ತೆಯ ಮಧ್ಯೆ ನಿಂತಿದೆ.

    ವೀರದಿಮ್ಮಮ್ಮನ ಕಣಿವೆ ತಿರುವಿನ ರಸ್ತೆಯಲ್ಲಿ ಬಸ್ ಬ್ರೇಕ್ ಫೇಲಾಗಿ ನಿಂತು ಹೋದ ಹಿನ್ನೆಲೆಯಲ್ಲಿ ವಾಹನದಲ್ಲಿದ್ದ ಶಾಲಾ ಕಾಲೇಜು ವಿದ್ಯಾರ್ಥಿಗಳು , ಪ್ರಯಾಣಿಕರು ಕಿ.ಮೀ.ಗಟ್ಟಲೇ ನಡೆದುಕೊಂಡು ಚಿಕ್ಕಬಳ್ಳಾಪುರ ನಗರಕ್ಕೆ ಬರುವಂತಾಯಿತು.

    ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳ ಪೈಕಿ ಹಲವು ಡಕೋಟಾ. ಇದು ಹದಗೆಟ್ಟ ರಸ್ತೆಗಳು, ಕಣಿವೆ ಪ್ರದೇಶ, ಏರಿಳಿತದ ಮಾರ್ಗಗಳಲ್ಲಿ ಆಗಾಗ ನಿಜ ಎನಿಸುವ ರೀತಿಯಲ್ಲಿ ಬಸ್ ಗಳು ಕೈ ಕೊಡುತ್ತಿವೆ. ಬ್ರೇಕ್ ಫೇಲ್, ಗೇರ್ ಜಾಮ್, ಎಂಜಿನ್ ಆಫ್ ಸೇರಿ ಹಲವು ಸಮಸ್ಯೆಗಳು ಸಂಭವಿಸಿ, ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿದೆ. ಇದೇ ವೇಳೆ ಪ್ರಯಾಣಿಕರು ಅನಿರೀಕ್ಷಿತ ವಿದ್ಯಮಾನದಿಂದ ಆತಂಕಗೊಳ್ಳುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts