More

    ಬೈಂದೂರು ಅಭಿವೃದ್ಧಿಯತ್ತ ದಾಪುಗಾಲು

    ನರಸಿಂಹ ನಾಯಕ್ ಬೈಂದೂರು

    ನೂತನ ತಾಲೂಕು ಕೇಂದ್ರವಾಗಿ ರೂಪುಗೊಂಡಿರುವ ಬೈಂದೂರು, ಹಂತ ಹಂತವಾಗಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಸದ್ಯ ಕೆಲವೊಂದು ಇಲಾಖೆಗಳು ಹೊರತುಪಡಿಸಿ, ತಾಲೂಕು ಕಚೇರಿಗೆ ಅಗತ್ಯ ಸಿಬ್ಬಂದಿ, ಮಿನಿ ವಿಧಾನಸೌಧ, ಪಟ್ಟಣ ಪಂಚಾಯಿತಿ, ಅಗ್ನಿಶಾಮಕ ಠಾಣೆ, ಆಹಾರ ಇಲಾಖೆ ಸೇರಿದಂತೆ ಬಹುತೇಕ ಎಲ್ಲ ಮೌಲಸೌಕರ್ಯಗಳನ್ನೊಳಗೊಂಡು ಪೂರ್ಣ ಪ್ರಮಾಣದ ತಾಲೂಕು ಕೇಂದ್ರವಾಗಿ ಮಾರ್ಪಾಡುಗೊಳ್ಳುವ ಹಂತದಲ್ಲಿದೆ.

    ಕಳೆದ ನಾಲ್ಕು ವರ್ಷದ ಹಿಂದೆ ಅಂದಿನ ಶಾಸಕ ಕೆ.ಗೋಪಾಲ ಪೂಜಾರಿ ಅವರ ವಿಶೇಷ ಕಾಳಜಿಯಿಂದಾಗಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೈಂದೂರು ಸೇರಿದಂತೆ 43 ನೂತನ ತಾಲೂಕುಗಳನ್ನು ರಚನೆ ಮಾಡಿದ್ದರು. ಆದರೆ ನೂತನ ತಾಲೂಕು ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದರೊಳಗೆ ಅವರ ಅಧಿಕಾರಾವಧಿ ಪೂರ್ಣಗೊಂಡಿತ್ತು. ಬಳಿಕ ಬೈಂದೂರು ಕ್ಷೇತ್ರವನ್ನೊಳಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಇಲ್ಲಿನ ಅಭಿವೃದ್ಧಿ ಚುರುಕುಗೊಂಡಿದೆ. ಹಾಲಿ ಸಂಸದ ಬಿ. ವೈ.ರಾಘವೇಂದ್ರ ಹಾಗೂ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರ ವಿಶೇಷ ಮುತುವರ್ಜಿಯಿಂದಾಗಿ ನೂತನ ಬೈಂದೂರು ತಾಲೂಕು ಹಂತ ಹಂತವಾಗಿ ಅಭಿವೃದ್ಧಿಯೆಡೆಗೆ ದಾಪುಗಾಲಿಟ್ಟಿದ್ದು, ಸದ್ಯ ಪೂರ್ಣ ಪ್ರಮಾಣದ ತಾಲೂಕಾಗಿ ಮೇಲ್ದರ್ಜೆಗೇರುವ ಭರವಸೆ ಮೂಡಿಸುತ್ತಿದೆ.

    ತಾಲೂಕು ಕೇಂದ್ರವಾಗಿ ರಚನೆಗೊಂಡು ನಾಲ್ಕು ವರ್ಷದವರೆಗೂ ಇಲ್ಲಿ ಆಹಾರ ಇಲಾಖೆ ಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿ ಜನ ಪಡಿತರ ಚೀಟಿ ಪಡೆಯಲು ದೂರದ ಕುಂದಾಪುರಕ್ಕೆ ತೆರಳಬೇಕಾಗಿತ್ತು, ಇದರಿಂದಾಗಿ ಗ್ರಾಮೀಣ ಜನ ಸಂಕಷ್ಟ ಎದುರಿಸುವಂತಾಗಿತ್ತು, ಇದನ್ನು ಮನಗಂಡ ಸಂಸದರು ಹಾಗೂ ಶಾಸಕರು ಕಳೆದ ಒಂದೆರಡು ತಿಂಗಳ ಹಿಂದೆ ಆಹಾರ ಇಲಾಖೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಇಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದಾರೆ.

    ಬೈಂದೂರಿನಲ್ಲಿ ನ್ಯಾಯಾಲಯ ನಿರ್ಮಾಣ ಹಾಗೂ ನ್ಯಾಯಾಧೀಶರ ವಸತಿ ಗೃಹ ನಿರ್ಮಾಣಕ್ಕಾಗಿ ಇಲ್ಲಿನ ಕೇಂದ್ರಸ್ಥಾನದಲ್ಲಿ ಈಗಾಗಲೇ ಎರಡು ಏಕರೆ ಜಾಗ ಗುರುತಿಸುವ ಕಾರ್ಯ ನಡೆದಿದೆ, ಶೀಘ್ರ ನ್ಯಾಯಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ವಿಜಯವಾಣಿ ಸಮಗ್ರ ವರದಿ: ತಾಲೂಕು ಕೇಂದ್ರದಲ್ಲಿ ಹಲವು ತಿಂಗಳಿನಿಂದ ತಹಸೀಲ್ದಾರ್ ಸೇರಿದಂತೆ ಹಲವು ಸಿಬ್ಬಂದಿಯ ಕೊರತೆ ಕಂಡು ಬಂದಿತ್ತು, ಈ ಬಗ್ಗೆ ವಿಜಯವಾಣಿ ಸಮಗ್ರ ವರದಿ ಪ್ರಕಟಿಸಿತ್ತು, ಇದಕ್ಕೆ ಸ್ಪಂದಿಸಿದ ಶಾಸಕ ಹಾಗೂ ಸಂಸದರು ನೂತನ ತಹಸೀಲ್ದಾರ್ ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಇಲ್ಲಿನ ಪಟ್ಟಣ ಪಂಚಾಯಿತಿಗೆ ಇಂಜಿನಿಯರ್, ಕಂದಾಯ ನಿರೀಕ್ಷಕರು ಸೇರಿದಂತೆ ಖಾಲಿಯಿರುವ ಎಲ್ಲ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.

    ಬೈಂದೂರನ್ನು ಪೂರ್ಣ ಪ್ರಮಾಣದ ತಾಲೂಕ್ಕಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಈಗಾಗಲೇ ತಾಲೂಕು ಕೇಂದ್ರಕ್ಕೆ ಅಗತ್ಯ ಸಿಬ್ಬಂದಿ, ಮಿನಿ ವಿಧಾನಸೌಧ ಸೇರಿದಂತೆ ಬಹುತೇಕ ಎಲ್ಲ ಮೂಲಸೌಕರ್ಯ ಕಲ್ಪಿಸಲಾಗಿದೆ. ಇಲ್ಲಿನ ಮಿನಿವಿಧಾನಸೌಧ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ತಾಲೂಕು ಮಟ್ಟದ ಎಲ್ಲ ಇಲಾಖೆಗಳು ಕಾರ್ಯಾರಂಭಗೊಳ್ಳಲು ಅಗತ್ಯ ಕ್ರಮ ಕೈಗೊಂಡು ಇದನ್ನು ಮಾದರಿ ತಾಲೂಕಾಗಿ ರೂಪಿಸಲಾಗುವುದು.
    – ಬಿ. ವೈ. ರಾಘವೇಂದ್ರ
    ಸಂಸದರು ಶಿವಮೊಗ್ಗ ಲೋಕಸಭಾ ಕ್ಷೇತ್ರ

    ತಾಲೂಕು ಮಟ್ಟದ ಎಲ್ಲ ಇಲಾಖೆಗಳು ಒಂದೇ ಸೂರಿನಡಿಯಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಇಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಇದರ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ತಾಲೂಕು ಮಟ್ಟದ ಎಲ್ಲ ಇಲಾಖೆಗಳು ಕರ್ತವ್ಯ ನಿರ್ವಹಿಸಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ.
    – ಬಿ. ಎಂ. ಸುಕುಮಾರ ಶೆಟ್ಟಿ
    ಶಾಸಕರು ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts