More

    ಪಪಂ ನಿಗದಿಪಡಿಸಿದ ಜಾಗದಲ್ಲಿ ವ್ಯಾಪಾರ ನಡೆಸಿ

    ಸರಗೂರು: ಬೀದಿ ಬದಿ ವ್ಯಾಪಾರಿಗಳು ಪಟ್ಟಣ ಪಂಚಾಯಿತಿ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ನಡೆಸಬೇಕು ಎಂದು ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ತಿಳಿಸಿದರು.

    ಪಟ್ಟಣದ ನಾಮಧಾರಿಗೌಡ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬೀದಿ ಬದಿ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವ್ಯಾಪಾರಿಗಳು ಪಟ್ಟಣ ಪಂಚಾಯಿತಿಯಲ್ಲಿ ನೋಂದಣಿ ಶುಲ್ಕ, ಘನತ್ಯಾಜ್ಯ ವಿಲೇವಾರಿ ಶುಲ್ಕವಾಗಿ ವಾರ್ಷಿಕವಾಗಿ 1500 ರೂ. ಪಾವತಿಸಬೇಕು. ಪಟ್ಟಣದ ಅಂದ ಹೆಚ್ಚಿಸಲು ಪಟ್ಟಣ ಪಂಚಾಯಿತಿ ಸೂಚಿಸಿರುವ ನಿಗದಿತ ಸ್ಥಳದಲ್ಲಿ ಮಾತ್ರ ವ್ಯಾಪಾರ ವಹಿವಾಟು ನಡೆಸಬೇಕು. ಅನಧಿಕೃತವಾಗಿ ವ್ಯಾಪಾರ-ವಹಿವಾಟು ನಡೆಸುತ್ತಿರುವ ಪೆಟ್ಟಿ ಅಂಗಡಿ ಹಾಗೂ ಇನ್ನಿತರ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.

    ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಾಹನ ಸವಾರರು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರಸ್ಥರು ಕಾನೂನಿನಡಿ ವ್ಯಾಪಾರ ಮಾಡಬೇಕು. ತಪ್ಪಿದ್ದಲ್ಲಿ ಅಂಥವರ ವಿರುದ್ಧ ವ್ಯಾಪಾರ ನಡೆಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಸರ್ಕಾರ ಪ್ಲಾಸ್ಟಿಕ್ ನಿಷೇಧಿಸುವಂತೆ ಆದೇಶ ನೀಡಿದ್ದರೂ ವ್ಯಾಪಾರಿಗಳು ಅನುಸರಿಸುತ್ತಿಲ್ಲ. ಈಗಾಗಲೇ ಪಟ್ಟಣ ಪಂಚಾಯಿತಿಯಿಂದ ಅರಿವು ಮೂಡಿಸಿದ್ದರೂ ಕೆಲ ವ್ಯಾಪಾರಿಗಳು ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಸಿಕ್ಕಿ ಬಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

    ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್ ಮಾತನಾಡಿ, ಜನನಿಬೀಡ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸುವುದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆಯಾಗಲಿದೆ. ಆದ್ದರಿಂದ ಪಪಂ ಗುರುತಿಸಿದ ಸ್ಥಳದಲ್ಲಿ ವ್ಯಾಪಾರ ಮಾಡಬೇಕು. ಸರಗೂರಿನ ಹುಣಸೂರು-ಬೇಗೂರು ಮುಖ್ಯ ರಸ್ತೆಯು ಸುಂದರವಾಗಿ ಕಾಣಬೇಕಿದ್ದು, ಅಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳನ್ನು ತೆರವುಗೊಳಿಸಲಾಗುವುದು ಎಂದರು.

    ಬಾರ್‌ಗಳ ಮುಂಭಾಗದಲ್ಲಿನ ಮಾಂಸದ ಅಂಗಡಿಗಳಿಂದ ಸಾರ್ವಜನಿಕರಿಗೆ ತುಂಬಾ ಕಿರಿಕಿರಿಯಾಗುತ್ತಿದೆ. ಮದ್ಯವ್ಯಸನಿಗಳು ಅಂಗಡಿಗಳ ಮುಂಭಾಗದಲ್ಲಿಯೇ ಕುಳಿತು ಕುಡಿಯುತ್ತಿದ್ದಾರೆ. ಹೀಗಾಗಿ ಮಾಂಸದ ಅಗಡಿಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.

    ತೀರ್ಮಾನ: ಪಟ್ಟಣದಲ್ಲಿ ಬೀದಿ ಬದಿಯ ವ್ಯಾಪಾರಿಗಳು ನೋಂದಣಿ ಮಾಡಿಸಿಕೊಂಡು ಕಾನೂನಾತ್ಮಕವಾಗಿ ತಮ್ಮ ವ್ಯಾಪಾರ ವಹಿವಾಟನ್ನು ನಡೆಸಬೇಕು. ಅನಧಿಕೃತವಾಗಿ ಅಂಗಡಿ ಮುಗ್ಗಟ್ಟುಗಳನ್ನು ತೆರೆಯದಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

    ಪಟ್ಟಣ ಪಂಚಾಯಿತಿ ಸದಸ್ಯರಾದ ಎಸ್.ಎಲ್.ರಾಜಣ್ಣ, ಶ್ರೀನಿವಾಸ್, ಸರಗೂರು ಪೊಲೀಸ್ ಠಾಣೆ ಎಸ್‌ಐ ಲಕ್ಷ್ಮೀಕಾಂತ, ಪಿಎಸ್‌ಐ ನಂದೀಶ್‌ಕುಮಾರ್ ಮಾತನಾಡಿದರು. ಪಪಂ ಉಪಾಧ್ಯಕ್ಷ ವಿನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಉಮಾರಾಮು, ಸದಸ್ಯರಾದ ಸಣ್ಣತಾಯಮ್ಮ, ಚಲುವಕೃಷ್ಣ, ಶಿವಕುಮಾರ್, ಬೀದಿ ಬದಿ ವ್ಯಾಪಾರ ಸಂಘದ ಅಧ್ಯಕ್ಷ ಕೃಷ್ಣ, ಕಾರ್ಯದರ್ಶಿ ರಂಗಸ್ವಾಮಿ, ರವಿಕುಮಾರ್‌, ರಾಮು, ಕೌಶಲಾಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ ಸೇರಿದಂತೆ ವ್ಯಾಪಾರಸ್ಥರು ಹಾಜರಿದ್ದರು. ಸಭೆಯಲ್ಲಿ ವ್ಯಾಪಾರಸ್ಥರು ತಮ್ಮ ಅಭಿಪ್ರಾಯ ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts