More

    ದೊಡ್ಡಬಳ್ಳಾಪುರ ನಗರದಲ್ಲಿ ಹೆಚ್ಚಿದ ಬಿಡಾಡಿ ದನಗಳ ಕಾಟ ; ನಿಯಂತ್ರಣಕ್ಕೆ ನಗರಸಭೆ ನಿರ್ಲಕ್ಷ್ಯ

    ದೊಡ್ಡಬಳ್ಳಾಪುರ: ನಗರದ ಪ್ರಮುಖ ರಸ್ತೆಗಳಲ್ಲಿ ನಾಯಿ, ಕುದುರೆ, ಬಿಡಾಡಿ ದನಗಳ ಕಾಟ ಹೆಚ್ಚಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಸಮರ್ಪಕ ರಸ್ತೆಗಳಿಲ್ಲದೆ ಬಸವಳಿದಿರುವ ವಾಹನ ಸವಾರರ ಪಾಲಿಗೆ ಬಿಡಾಡಿ ದನಗಳ ಉಪಟಳ ತಲೆನೋವಾಗಿದೆ.

    ಕೊಂಗಾಡಿಯಪ್ಪ ಕಾಲೇಜು ರಸ್ತೆ, ತಾಲೂಕು ಕಚೇರಿ, ಡಿ ಕ್ರಾಸ್, ಟಿಬಿ ಕ್ರಾಸ್ ರಸ್ತೆಗಳಲ್ಲಿ ಓಡಾಟ ಹೆಚ್ಚಾಗಿರುವ ಕಾರಣ, ಅಲ್ಲೆಲ್ಲ ವಾಹನ ದಟ್ಟಣೆ ಸಾಮಾನ್ಯವಾಗಿದೆ. ಕಿರಿದಾಗಿರುವ ನಗರದ ರಸ್ತೆಗಳನ್ನು ವಿಸ್ತರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದ, ಇತ್ತ ಬಿಡಾಡಿ ದನಗಳನ್ನೂ ನಿಯಂತ್ರಿಸದ ನಗರಸಭೆ ಆಡಳಿತ ನಿರ್ಲಕ್ಷ್ಯ ಮುಂದುವರಿಸಿದೆ.

    ಬಿಡಾಡಿ ದನಗಳು ರಸ್ತೆ ಬದಿಯಲ್ಲಿ ನಿಲ್ಲಿಸಿರುವ ದ್ವಿಚಕ್ರವಾಹನಗಳನ್ನು ಬೀಳಿಸಿ, ಜಖಂಗೊಳಿಸುತ್ತಿವೆ. ಇದರಿಂದಾಗಿ ವಾಹನಗಳ ಮಾಲೀಕರಿಗೆ ಅನಗತ್ಯ ವೆಚ್ಚಗಳು ಹೆಚ್ಚಾಗಿ ಪರಿತಪಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಹೋಗುವಾಗ ಬೆನ್ನಟ್ಟಿ ಹೋಗಿ, ತಿವಿದು ಗಾಯಗೊಳಿಸಿದ ನಿದರ್ಶನಗಳೂ ಇವೆ.

    ಬಿಡಾಡಿ ದನಗಳ ಮಾಲೀಕರು ಯಾರು?: ಬಹುತೇಕ ಎಲ್ಲ ಬೀದಿಗಳಲ್ಲೂ ಸಮಸ್ಯೆ ಹೆಚ್ಚಾಗಿದೆ. ಇವೆಲ್ಲವೂ ನಗರದ ಹೃದಯ ಭಾಗದಲ್ಲಿರುವ ಕಸಾಯಿ ಖಾನೆಗಳ ಮಾಲೀಕರಿಗೆ ಸೇರಿದ ದನಗಳಾಗಿವೆ. ಉಳಿದಂತೆ ದನಗಳನ್ನು ಬೀದಿಗೆ ಬಿಟ್ಟು ಸಂಜೆ ಹಾಲು ಕರೆದುಕೊಂಡು ಪುನಃ ಬೀದಿಗೆ ಬಿಡುವ ಮಾಲೀಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ವಿಷಯಗಳು ಗೊತ್ತಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿಕೊಂಡು ಕುಳಿತಿದ್ದಾರೆ.

    ಮುಖ್ಯರಸ್ತೆಗಳಲ್ಲಿ ಹೆಚ್ಚುತ್ತಿರುವ ಬಿಡಾಡಿ ದನಗಳು, ಕುದುರೆ ಮತ್ತು ನಾಯಿಗಳ ಹಾವಳಿಯಿಂದ ಮಕ್ಕಳು, ಮಹಿಳೆಯರು ಆತಂಕದಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಬಿಡಾಡಿ ದನಗಳಿಂದಾಗಿ ನಿತ್ಯ ವಾಹನದಟ್ಟಣೆ ಉಂಟಾಗುತ್ತಿದೆ. ಸಾಕಷ್ಟು ಅಪಘಾತಗಳಾಗಿ, ಜನರು ಗಾಯಗೊಂಡಿದ್ದಾರೆ. ಆದ್ದರಿಂದ, ಇವುಗಳ ನಿಯಂತ್ರಣಕ್ಕೆ ನಗರಸಭೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು.
    ಸತೀಶ್, ಸ್ಥಳೀಯ ನಿವಾಸಿ

    ಬಿಡಾಡಿ ದನಗಳು ಮತ್ತು ಬೀದಿನಾಯಿಗಳ ಹಾವಳಿ ಕುರಿತು ಜ.10ರ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು. ಈಗಾಗಲೆ ಬೀದಿನಾಯಿಗಳ ಸಂತಾನಶಕ್ತಿಹರಣಕ್ಕೆ ಸಿದ್ಧತೆ ನಡೆದಿದೆ. ಸಂಬಂಧಿಸಿದವರು ಸ್ಪಂದಿಸದಿದ್ದರೆ, ಅವುಗಳನ್ನು ಗೋಶಾಲೆಗೆ ರವಾನಿಸಲಾಗುತ್ತದೆ.
    ಸುಧಾರಾಣಿ, ನಗರಸಭೆ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts