More

    ಸರ್ಕಾರದ ಸಾಧನೆ ಬಗ್ಗೆ ಕಾಂಗ್ರೆಸ್ ಶ್ವೇತಪತ್ರ ಹೊರಡಿಸಲಿ

    ಹುಬ್ಬಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗುತ್ತ ಬಂದಿದೆ. ಈ ಅವಧಿಯಲ್ಲಿ ಸರ್ಕಾರದ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದ್ದಾರೆ.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಪ್ರತಿಪಕ್ಷ ಸ್ಥಾನಕ್ಕೆ ಅಗತ್ಯವಿರುವಷ್ಟು ಕ್ಷೇತ್ರಗಳಲ್ಲಿಯೂ ಗೆಲ್ಲಲು ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್​ಗೆ ತನ್ನ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯೆಂದು ಹೇಳಿಕೊಳ್ಳುವಷ್ಟು ಧೈರ್ಯವೂ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ಕಾಂಗ್ರೆಸ್​ಗೆ ಹೇಳಿಕೊಳ್ಳಲು ಏನೂ ಇಲ್ಲ. ಲೋಕಸಭೆ ಚುನಾವಣೆಯನ್ನು ಗಲ್ಲಿ ಚುನಾವಣೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಿಸಿದ್ದಾರೆ ಎಂದು ಟೀಕಿಸಿದರು.

    ಈ ಚುನಾವಣೆಯಲ್ಲಿ ಬಿಜೆಪಿ ಧಾರವಾಡ ಕ್ಷೇತ್ರ ಸೇರಿದಂತೆ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಲಿದೆ. ‘ನಮ್ಮ ಪರಿವಾರ, ಮೋದಿ ಪರಿವಾರ’ ಘೋಷಣೆ ಅಡಿ ಎಲ್ಲ ಮತದಾರರಿಗೆ ಪರಿವಾರ ಸಮೇತ ಮತಗಟ್ಟೆಗೆ ಆಗಮಿಸಿ, ಮತದಾನ ಮಾಡುವಂತೆ ವಿನಂತಿ ಮಾಡಲಾಗಿದೆ ಎಂದರು.

    ಬೆಳಗ್ಗೆ 10 ಗಂಟೆವೊಳಗಾಗಿ ಹೆಚ್ಚಿನ ಮತದಾನ ಆಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರವೊಂದರಲ್ಲಿಯೇ 130ಕ್ಕೂ ಹೆಚ್ಚು ಸಣ್ಣ ಸಭೆಗಳನ್ನು ಮಾಡಲಾಗಿದೆ. ಸಣ್ಣ ಸಭೆಗಳಿಂದ ಅತಿ ಹೆಚ್ಚಿನ ಪರಿಣಾಮ ಬೀರುತ್ತದೆ. ಧಾರವಾಡ ಲೋಕಸಭೆ ಕ್ಷೇತ್ರದಾದ್ಯಂತ ಹಲವಾರು ಬೈಕ್ ರ್ಯಾಲಿ, ಸಮಾವೇಶಗಳನ್ನು ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಹೇಳಿದರು.

    ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಎಂ. ನಾಗರಾಜ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts