More

    ಮೇಲ್ಮನೆ ಚುನಾವಣೆ ಗೆಲುವಿಗೆ ನಿರಂತರ ಶ್ರಮಿಸಿ

    ಸಾಗರ: ಮೇಲ್ಮನೆ ಚುನಾವಣೆ ಕಾಂಗ್ರೆಸ್‌ಗೆ ಅತ್ಯಂತ ಪ್ರತಿಷ್ಠೆಯದ್ದಾಗಿದೆ. ಮೇಲ್ಮನೆಯಲ್ಲಿ ಪಕ್ಷಕ್ಕೆ ಬಹುಮತದ ಕೊರತೆ ಇದೆ. ವಿಧಾನಸಭೆಯಲ್ಲಿ ಕೆಲವು ಬಿಲ್ ಪಾಸಾದರೂ ವಿಧಾನ ಪರಿಷತ್‌ನಲ್ಲಿ ಬಹುಮತ ಇಲ್ಲದೆ ಇರುವುದರಿಂದ ಅನೇಕ ಕಾನೂನು ಜಾರಿಗೆ ಬರಲು ತೊಡಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ನ ಎಲ್ಲ ಸ್ಥಾನಗಳನ್ನು ಗೆಲ್ಲಬೇಕಿದೆ. ಇದಕ್ಕಾಗಿ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

    ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಾಗರದಲ್ಲಿ ಗುರುವಾರ ಪಕ್ಷದಿಂದ ಆಯೋಜಿಸಿದ್ದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಪ್ರಮುಖರು ವಿಶ್ರಮಿಸದೆ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರವನ್ನು ಗೆಲ್ಲಲು ನಿರಂತರ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
    ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಆಯನೂರು ಮಂಜುನಾಥ್ ಗೆಲುವಿಗೆ ಪೂರಕ ವಾತಾವರಣವಿದೆ. ಕಾರ್ಮಿಕ ಕ್ಷೇತ್ರದಿಂದ ಬಂದಿರುವ ಮಂಜುನಾಥ್‌ಗೆ ಅತಿಹೆಚ್ಚು ಪದವೀಧರರ ಬೆಂಬಲ ಇದೆ. ಶಿಕ್ಷಕರ ಕ್ಷೇತ್ರದಿಂದ ಕೊಡಗಿನಿಂದ ಶಿಕ್ಷಕ ವೃತ್ತಿ ನಿರ್ವಹಿಸಿರುವ ಮಂಜುನಾಥ್ ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ವಿಧಾನ ಪರಿಷತ್ ಚುನಾವಣೆ ವಿಭಿನ್ನ. ಈ ಕ್ಷೇತ್ರಕ್ಕೆ ಮತ ಹಾಕುವವರನ್ನು ಹುಡುಕಿ ಅವರ ಮನವೊಲಿಸಿ, ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮನವಿ ಮಾಡಬೇಕು ಎಂದು ತಿಳಿಸಿದರು.
    ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ವಿಧಾನಪರಿಷತ್ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಕಾಂಗ್ರೆಸ್ ಪಕ್ಷ ಗೆಲ್ಲಬೇಕು. ಕಾಗೋಡು ತಿಮ್ಮಪ್ಪ ಅವರು ಮಾಡಿರುವ ಕೆಲಸಗಳು ನಮಗೆ ಮತ ಕೇಳಲು ಸಹಕಾರಿಯಾಗಿವೆ. ಗೋಪಾಲಕೃಷ್ಣ ಬೇಳೂರು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಎರಡೂ ಕ್ಷೇತ್ರದ ಬಗ್ಗೆ ಅನುಭವ ಇರುವ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕೆ ಇಳಿಸಿದೆ. ಅವರಿಗೆ ಹೆಚ್ಚು ಮತ ಕೊಡಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
    ಬಿಜೆಪಿ ನಾಯಕರದು ಹಗಲುಗನಸು:
    ಸಾಗರ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ತಿರುಕನ ಕನಸು ಕಾಣುತ್ತಿದ್ದಾರೆ. ನಾವು 135 ಶಾಸಕರು ಗಟ್ಟಿಯಾಗಿದ್ದೇವೆ. ನಮ್ಮ ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೋಪಾಲಕೃಷ್ಣ ಬೇಳೂರು ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತೇವೆ ಎಂದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಅದು ಯಾವ ಕಾರಣಕ್ಕೂ ನನಸಾಗುವುದಿಲ್ಲ ಎಂದರು. ಕಾಂಗ್ರೆಸ್‌ನಲ್ಲಿ ಯಾವುದೇ ಬಂಡಾಯ ಇಲ್ಲ. ಹಾಗೆ ನೋಡಿದರೆ ಬಿಜೆಪಿಯಲ್ಲೇ ದೊಡ್ಡಮಟ್ಟದ ಬಂಡಾಯ ಇದೆ. ಯಾವುದೇ ಸಮಸ್ಯೆ ಆಗದಂತೆ ನಮ್ಮ ವರಿಷ್ಠರು ನೋಡಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಪದವೀಧರರು ಮತ್ತು ಶಿಕ್ಷಕರು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.
    ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಘಟಕದ ತಾಲೂಕು ಅಧ್ಯಕ್ಷೆ ಪ್ರಭಾವತಿ ಚಂದ್ರಕಾಂತ್, ಪ್ರಮುಖರಾದ ಕಲಸೆ ಚಂದ್ರಪ್ಪ, ಎನ್.ಉಷಾ, ಮಧುಮಾಲತಿ, ರವಿಕುಮಾರ್, ಸುರೇಶಬಾಬು, ಮಕ್ಬೂಲ್ ಅಹ್ಮದ್, ಕೆ.ಹೊಳೆಯಪ್ಪ, ತಸ್ರ್ೀ, ಎನ್.ಲಲಿತಮ್ಮ, ಮೈಕಲ್ ಡಿಸೋಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts