More

    ಉಡುಪಿಯಲ್ಲಿ ಬೀದಿನಾಯಿ ಉಪಟಳ ಹೆಚ್ಚಳ

    ಉಡುಪಿ: ನಗರದಲ್ಲಿ ಮತ್ತೆ ಬೀದಿನಾಯಿಗಳ ಉಪಟಳ ಹೆಚ್ಚುತ್ತಿದೆ. ಬೀದಿನಾಯಿಗಳಿಂದ ಸಾರ್ವಜನಿಕರಿಗೆ ತೀವ್ರ ಕಿರಿಕಿರಿಯಾಗುತ್ತಿದ್ದು, ಕಳೆದ ವಾರ ದೊಡ್ಡಣಗುಡ್ಡೆ ವ್ಯಕ್ತಿಗೆ ಹುಚ್ಚುನಾಯಿ ಕಡಿದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರ ನಗರಸಭೆ ಸಾಮಾನ್ಯ ಸಭೆಯಲ್ಲಿಯೂ ಚರ್ಚೆಯಾಗಿದ್ದು, ನಗರಸಭೆ ಅಧಿಕಾರಿಗಳನ್ನು ಆಡಳಿತ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಅಜ್ಜರಕಾಡು ಪಾರ್ಕ್ ಸಮೀಪ ಬೀದಿನಾಯಿಗಳ ಸಂಖ್ಯೆ ಹೆಚ್ಚಿದ್ದು, ಗುಂಪುಗುಂಪಾಗಿ ಮಕ್ಕಳು, ಹಿರಿಯರನ್ನು ಹಿಂಬಾಲಿಸಿ ಬರುತ್ತವೆ. ಒಟ್ಟಾರೆ ಬೀದಿನಾಯಿಗಳ ಬಗ್ಗೆ ನಗರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ನಗರಸಭೆ ನಿರ್ಲಕ್ಷೃ ವಹಿಸುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಉಡುಪಿ ನಗರ, ಬೀಡಿನಗುಡ್ಡೆ ಭಾಗದಲ್ಲಿ ಮಕ್ಕಳನ್ನು ಅಟ್ಟಿಸಿಕೊಂಡು ಬರುವುದು, ಕೈಗೆ, ಕಾಲಿಗೆ ಕಚ್ಚಿರುವ ಘಟನೆಗಳು ಸಾಕಷ್ಟು ಬಾರಿ ನಡೆದಿದೆ. ಕಿನ್ನಿಮುಲ್ಕಿಯಲ್ಲಿ, ನಗರ ಭಾಗದಲ್ಲಿ ಹಲವಾರು ಹಿರಿಯ ವ್ಯಕ್ತಿಗಳಿಗೆ, ನಿರಾಶ್ರಿತರಿಗೆ ಬೀದಿನಾಯಿಗಳಿಗೆ ಕಡಿದು ಗಾಯಗೊಳಿಸಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು ವಿಜಯವಾಣಿಗೆ ತಿಳಿಸಿದ್ದಾರೆ.

    ಎಲ್ಲೆಲ್ಲಿ ಬೀದಿನಾಯಿಗಳ ಕಾಟ ?
    ಮಿಷನ್ ಕಾಂಪೌಂಡ್, ಅಜ್ಜರಕಾಡು ಭುಜಂಗಪಾರ್ಕ್, ಚಿಟ್ಪಾಡಿ ಸರ್ಕಲ್, ಬನ್ನಂಜೆ, ಸಿಟಿ ಬಸ್‌ನಿಲ್ದಾಣ, ಸರ್ವೀಸ್ ಬಸ್ ನಿಲ್ದಾಣ, ಕೆ.ಎಂ. ಮಾರ್ಗ, ಕಿನ್ನಿಮುಲ್ಕಿ, ಗುಂಡಿಬೈಲಿನಲ್ಲಿ ರಾತ್ರಿಹೊತ್ತು ಬೀದಿನಾಯಿಗಳು ಗುಂಪುಗುಂಪಾಗಿ ಓಡಾಡುತ್ತವೆ. ಕಲ್ಮಾಡಿ, ಆದಿ ಉಡುಪಿ, ಸಂತೆಕಟ್ಟೆ, ಕಲ್ಯಾಣಪುರದಲ್ಲಿ ನಾಯಿ ಕಾಟ ಹೆಚ್ಚಿದೆ. ರಾತ್ರಿವೇಳೆ ಕರ್ಕಶ ಬೊಗಳುವಿಕೆ, ಕಚ್ಚಾಟ ಪರಿಸರದಲ್ಲಿ ತೀರ ಕಿರಿಕಿರಿ ವಾತವರಣ ನಿರ್ಮಾಣವಾಗುತ್ತಿದೆ. ಮನೆಗಳಿಗೆ ನುಗ್ಗಿ ಚಪ್ಪಲಿಯನ್ನು ದೂರಕ್ಕೆ ಕೊಂಡೊಯ್ದು ಚಪ್ಪಲಿಗಳಿಗೆ ಹಾನಿ ಮಾಡುವುದು, ಮನೆ ಹೊರಾಂಗಣದಲ್ಲಿ ಒಣ ಹಾಕಿರುವ ಬಟ್ಟೆ ಬಾಯಲ್ಲಿ ಕಚ್ಚಿ ಹರಿದು ಹಾಕುವುದು ನಗರದಲ್ಲಿ ಸಮಾನ್ಯವಾಗಿದೆ.

    ನಗರ ಪ್ರದೇಶಕ್ಕೆ ವಲಸೆ ಕಾರಣ
    ನಗರಸಭೆ ವತಿಯಿಂದ ಪ್ರತಿವರ್ಷ ಬೀದಿನಾಯಿಗಳನ್ನು ಹಿಡಿದು ಸಾಕಷ್ಟು ಬಾರಿ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲಾಗಿದೆ. ಆದರೂ ನಾಯಿಗಳ ಸಂಖ್ಯೆ ಹೆಚ್ಚುತ್ತಲಿದೆ. ಈ ಸಂತಾನಶಕ್ತಿ ಹರಣ ಚಿಕಿತ್ಸೆ ಮೇಲೆ ಅನುಮಾನ ಪಡುವಂತಾಗಿದೆ. ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಬೇಕು ಎಂದು ನಗರಸಭೆ ಸದಸ್ಯ ವಿಜಯ ಕೊಡವೂರು ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದ್ದರು. ಗ್ರಾಮಾಂತರ ಪ್ರದೇಶಗಳಿಂದ ನಾಯಿಗಳು ಆಹಾರ ಹುಡುಕುತ್ತಾ ನಗರ ಪ್ರದೇಶದತ್ತ ವಲಸೆ ಬರುತ್ತವೆ. ಇಲ್ಲಿಯೇ ಮರಿ ಹಾಕುತ್ತವೆ, ಇದರಿಂದ ನಗರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

    ನಗರದಲ್ಲಿ ಬೀದಿನಾಯಿಗಳ ಕಾಟದ ಬಗ್ಗೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಆಗಾಗ ದೂರು ಕೇಳಿ ಬರುತ್ತಿದೆ. ಬೀದಿನಾಯಿಗಳ ಸಂತಾನ ಶಕ್ತಿಹರಣ ಚಿಕಿತ್ಸೆ ಮತ್ತು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    ಸುಮಿತ್ರಾ ನಾಯಕ್, ಅಧ್ಯಕ್ಷೆ, ಉಡುಪಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts