More

    ಔಷಧ ಹೊರಗೆ ಬರೆದುಕೊಡುವ ಪರಿಪಾಠ ನಿಲ್ಲಿಸಿ

    ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆಗೆ ಬರುವ ಬಹುತೇಕರು ಬಡವರೇ ಆಗಿರುತ್ತಾರೆ. ಆದರೆ, ಔಷಧ ಹೊರಗೆ ಬರೆದುಕೊಡುತ್ತಾರೆ ಎಂಬುದಾಗಿ ಸಾರ್ವಜನಿಕರು ಆರೋಪಿಸುತ್ತಲೇ ಇದ್ದಾರೆ. ಮೊದಲು ಈ ಪರಿಪಾಠ ನಿಲ್ಲಿಸಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಬಿ.ಕೆ.ಗಿರೀಶ್ ಸೂಚಿಸಿದರು.

    ಜಿಲ್ಲಾಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಔಷಧ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದರೂ ಹೊರಗೆ ಬರೆದುಕೊಟ್ಟರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಕಡಿಮೆ ಇದ್ದಲ್ಲಿ ಹೊರಗೆ ಬರೆದುಕೊಟ್ಟಾಗ ಔಷಧ ಅಂಗಡಿಯಲ್ಲಿ ಖರೀದಿಸಿರುವ ರಸೀದಿಯನ್ನು ಜಿಲ್ಲಾಸ್ಪತ್ರೆಗೆ ನೀಡಿದಲ್ಲಿ ಅದರ ಹಣವನ್ನು ಹಿಂಪಡೆಯಲು ಅವಕಾಶವಿದೆ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.

    ಕೆಲ ವಾರ್ಡ್ ಹಾಗೂ ಶೌಚಗೃಹಗಳಲ್ಲಿನ ಅವ್ಯವಸ್ಥೆ ಕಂಡು ತೀವ್ರ ಅಸಮಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು. ಸರ್ಕಾರ ಸ್ವಚ್ಛತೆಗಾಗಿ ಅನುದಾನ ನೀಡುತ್ತಿದೆ. ಆದರೂ ಗಲೀಜು ಕಣ್ಣಿಗೆ ರಾಚುತ್ತದೆ. ಜನರನು ಆರೋಗ್ಯವಂತರನ್ನಾಗಿಸುವ ಜಾಗದಲ್ಲಿ ಈ ರೀತಿಯ ವಾತಾವರಣ ಇರಬಾರದು. ಇಡೀ ಆಸ್ಪತ್ರೆ ಸದಾ ಸ್ವಚ್ಛವಾಗಿರಬೇಕು ಎಂದು ತಾಕೀತು ಮಾಡಿದರು.
    ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸುವವರು ಪ್ರಾಮಾಣಿಕವಾಗಿ ಇರಬೇಕು. ಭ್ರಷ್ಟಾಚಾರದಲ್ಲಿ ತೊಡಗಿದರೆ, ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ. ವೈದ್ಯರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಿ. ಶುಶ್ರೂಷಕರು ಅಷ್ಟೇ. ಸರ್ಕಾರಿ ಹುದ್ದೆಯಲ್ಲಿ ಇರುವವರು ಕಪ್ಪುಚುಕ್ಕೆ ಬಾರದಂತೆ ನಿವೃತ್ತಿ ಆಗುವವರೆಗೂ ಜನಸೇವೆ ಮಾಡಿ ಎಂದು ಸಲಹೆ ನೀಡಿದರು.

    ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಬೇಕಾದ್ದು, ವೈದ್ಯರು, ಶುಶ್ರೂಷಕರ ಕರ್ತವ್ಯ. ಆದ್ದರಿಂದ ಯಾರಿಂದಲೂ ಲಂಚ ಸ್ವೀಕರಿಸುವುದಿಲ್ಲ ಎಂಬ ದೊಡ್ಡ ನಾಮಫಲಕ ಆಸ್ಪತ್ರೆಯ ಹೊರಭಾಗದಲ್ಲಿ ಅಳವಡಿಸಿ ಎಂದು ತಿಳಿಸಿದರು.

    ಔಷಧ ಗೋದಾಮು ಸೇರಿ ಹಲವು ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕರೊಂದಿಗೆ ಕೆಲಕಾಲ ಚರ್ಚಿಸಿದರು. ಆಂಬುಲೆನ್ಸ್‌ಗೆ ಹೆಚ್ಚು ಹಣ ಪಡೆಯುತ್ತಿದ್ದಾರೆ ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಆರೋಪಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜಪ್ಪ, ವೈದ್ಯಾಧಿಕಾರಿಗಳು ಸೇರಿ ಇತರರಿದ್ದರು.

    *108 ಸಂಪೂರ್ಣ ಉಚಿತ
    ಜಿಲ್ಲೆಯಲ್ಲಿ 113 ಸರ್ಕಾರಿ ಆಂಬುಲೆನ್ಸ್‌ಗಳಿದ್ದು, ಡಿಎಚ್‌ಒ ಕಚೇರಿಯಿಂದ 108 ವಾಹನ 42 ನೀಡಲಾಗಿದೆ. ಅದರಲ್ಲಿ 27ಕ್ಕೂ ಹೆಚ್ಚು ಹಲವು ಪ್ರಾಥಮಿಕ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಯಾವುದೇ ರೀತಿಯಲ್ಲಿ ಸಾರ್ವಜನಿಕರು ಹಣ ನೀಡುವಂತಿಲ್ಲ ಎಂದು ಬಿ.ಕೆ.ಗಿರೀಶ್ ತಿಳಿಸಿದರು. ಖಾಸಗಿಯಾಗಿ 72 ವಾಹನಗಳಿದ್ದು, ಹೆಚ್ಚು ಸಂಖ್ಯೆಯಲ್ಲಿರುವ ಸರ್ಕಾರಿ ವಾಹನಗಳು ಮುನ್ನಲೆಗೆ ಬರುತ್ತಿಲ್ಲ. ಇದು ಎಷ್ಟು ಸರಿ? ಎಂದು ಪ್ರಶ್ನಿಸಿದ ನ್ಯಾಯಾಧೀಶರು, 108 ಹೊರತುಪಡಿಸಿ ಇನ್ನುಳಿದ ಸರ್ಕಾರಿ ಆಂಬುಲೆನ್ಸ್‌ಗಳಿಗೆ ಸರ್ಕಾರ ಪ್ರತಿ ಕಿ.ಮೀ. ನಂತೆ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚು ಪಡೆಯುತ್ತಿರುವ ಕುರಿತು ಆರೋಪವಿದೆ. ಮೊದಲು ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಚಾಲಕರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಇಂದು ಆರೋಗ್ಯ ತಪಾಸಣೆ
    ಚಿತ್ರದುರ್ಗ: ಜಿಲ್ಲೆಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ‌್ಯದರ್ಶಿ, ಎಸ್‌ಡಿಎಗಳಿಗೆ ಜಿಪಂ ಸಭಾಂಗಣದಲ್ಲಿ ಡಿ.2ರ ಬೆಳಗ್ಗೆ 10 ಗಂಟೆಗೆ ಆರೋಗ್ಯ ತಪಾಸಣೆ ಏರ್ಪಡಿಸಲಾಗಿದೆ. ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಿವಿಎಸ್ ಹಾಸ್ಪಿಟಲ್ ಇಂಡಿಯಾನ ಎಸ್‌ಜೆಎಂ ಹಾರ್ಟ್ ಸೆಂಟರ್, ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಪಂ. ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಈ ಕಾರ‌್ಯಕ್ರಮದ ಏರ್ಪಡಿಸಲಾಗಿದೆ ಎಂದು ಜಿಪಂ ಸಿಇಒ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts