More

    ಮದಗದ ಕೆರೆಯಿಂದ ಅಕ್ರಮ ನೀರಾವರಿ ಸ್ಥಗಿತಗೊಳಿಸಿ

    ಕಡೂರು: ಅಕ್ರಮವಾಗಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿರುವ ಮದಗದ ಕೆರೆ ಭಾಗದ ಹಾಯುವಳಿದಾರರ ಮೋಟಾರ್ ಮತ್ತು ಪೈಪ್‌ಗಳನ್ನು ತೆರವುಗೊಳಿಸಬೇಕು. ನ್ಯಾಯಯುತವಾಗಿ ನಮಗೆ ಸಿಗಬೇಕಾದ ನೀರನ್ನು ದೊರಕಿಸಿಕೊಡಬೇಕು ಎಂದು ಪಟ್ಟುಹಿಡಿದ ಚಿಕ್ಕಿಂಗಳ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಗುರುವಾರ ಸಣ್ಣನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಜ.31ರಂದು ಕೆರೆಯ ಕಾಲುವೆಯಗಳಲ್ಲಿ ಮಡಬಾಯಿಗಳನ್ನು ಮುಚ್ಚಿಸಲು ಜೆಸಿಬಿಯಿಂದ ಕೈಗೊಂಡಿದ್ದ ಕಾರ್ಯಾಚರಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಸಣ್ಣನೀರಾವರಿ ಇಲಾಖೆ ಅಭಿಯಂತರರ ಕಾರ್ಯವೈಖರಿಗೆ ಆಕ್ರೋಶಗೊಂಡಿದ್ದ ಗ್ರಾಮಸ್ಥರು ತಾಲೂಕು ಕಚೇರಿಗೆ ಸಣ್ಣ ನೀರಾವರಿ ಎಇಇ ದಯಾಶಂಕರ್ ಆಗಮಿಸಿ ಸ್ಪಷ್ಟೀಕರಣ ನೀಡುವವರೆಗೂ ಬಿಡುವುದಿಲ್ಲ ಎಂದು ಪಟ್ಟುಹಿಡಿದರು.
    ತಹಸೀಲ್ದಾರ್ ಎಂ.ಪಿ.ಕವಿರಾಜ್ ದೂರವಾಣಿ ಮೂಲಕ ಎಇಇ ದಯಾಶಂಕರ್ ಅವರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಯಿಸಿಕೊಂಡು ನೀರಿನ ಸಮಸ್ಯೆ ಕೂಡಲೇ ಬಗೆಹರಿಸಬೇಕು. ಅನಧಿಕೃತವಾಗಿ ನೀರು ಹಾಯಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಪ್ರತಿಕ್ರಿಯಿಸಿದ ಎಇಇ ದಯಾಶಂಕರ್, ಗ್ರಾಮದಲ್ಲಿ ಕೆರೆಯ ನೀರಿನ ಏರಿ ಪ್ರದೇಶಕ್ಕೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾಲುವೆಗಳಲ್ಲಿ ಬಹಳಷ್ಟು ಪೈಪ್‌ಗಳು ಹಾನಿಯಾಗಿದ್ದು, ಇದಕ್ಕೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ನೀರಿನ ಸಮಸ್ಯೆಪರಿಹರಿಸಲು ಮೂರು ದಿನ ಅವಕಾಶ ಕೊಡುವಂತೆ ಕೋರಿದರು.
    ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನೀರಿನ ಹಾಹಾಕಾರ ಹೆಚ್ಚಾಗುತ್ತಿದೆ. ಗ್ರಾಮದ ಕೆರೆಗೆ ಹಂಚಿಕೆಯಾಗಬೇಕಾದ ನೀರೂ ಸಿಗದ ಹಾಗೆ ಮದಗದ ಕೆರೆಯ ನೀರಿನ ಕಾಲುವೆಗಳಲ್ಲಿ ಅನಧಿಕೃತವಾಗಿ ಹಾಯುವಳಿದಾರರು ಮೋಟಾರ್‌ಗಳನ್ನು ಅಳವಡಿಸಿಕೊಂಡು ನೀರನ್ನು ಹಾಯಿಸಿಕೊಳ್ಳುತ್ತಿದ್ದರು. ಆದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮದಗದ ಕೆರೆಯಲ್ಲಿ ತೂಬು ತೆಗೆಯುವ ಹಂತಕ್ಕೆ ಬಂದರೂ ಅಧಿಕಾರಿಗಳು ಕ್ರಮಕೈಗೊಳ್ಳದೆ ಅನಧಿಕೃತ ಹಾಯುವಳಿದಾರರ ಪರವಾಗಿ ನಿಲುವು ವ್ಯಕ್ತಪಡಿಸಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಚಿಕ್ಕಿಂಗಳ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.
    ಸಂಘದ ಕಾರ್ಯದರ್ಶಿ ಅಂದೇನಹಳ್ಳಿ ಚಂದ್ರಶೇಖರ್, ಗ್ರಾಮಸ್ಥರಾದ ಗೋವಿಂದರಾಜು, ಯೋಗೀಶ್, ನಟರಾಜ್, ಆನಂದ್, ಕೆಂಚಪ್ಪ, ಲಿಂಗರಾಜು, ಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts