More

    ಜಾನುವಾರುಗಳ ನೀರಿನ ತೊಟ್ಟಿಯಲ್ಲಿ ದುರ್ನಾತ

    ಲಿಂಗದಹಳ್ಳಿ (ತರೀಕೆರೆ): ಉಡೇವಾ ಗ್ರಾಪಂ ವ್ಯಾಪ್ತಿಯ ಗೊಣಗಿಲಕಟ್ಟೆ ಗ್ರಾಮದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಸೇವನೆಗೆ ನಿರ್ಮಿಸಿರುವ ನೀರಿನ ತೊಟ್ಟಿಗಳಿಗೆ ನೀರು ತುಂಬಿಸದಿರುವುದರಿಂದ ಸಾಕು ಪ್ರಾಣಿಗಳು ಪರಿತಪಿಸುವಂತಾಗಿದೆ.

    ಗ್ರಾಮದ ಅಕ್ಕಪಕ್ಕದಲ್ಲಿರುವ ಕೆರೆ, ಕಟ್ಟೆಗಳಲ್ಲಿ ವರ್ಷದಲ್ಲಿ 3-4 ತಿಂಗಳು ಜಾನುವಾರುಗಳಿಗೆ ಸಾಕಾಗುವಷ್ಟು ನೀರು ಸಿಗದ ಕಾರಣ ಉಡೇವಾ ಗ್ರಾಪಂನಿಂದ ಗ್ರಾಮದ ಆಯ್ದ ಭಾಗಗಳಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿತ್ತು. ಇದರಿಂದ ಸಾಕು ಪ್ರಾಣಿಗಳಿಗೆ ಅನುಕೂಲವಾಗಿತ್ತು. ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿರುವ ತೊಟ್ಟಿಗೆ ನೀರು ತುಂಬಿಸದಿರುವುದರಿಂದ ಕುಡಿಯುವ ನೀರಿನ ತೊಂದರೆಯಾಗಿದೆ.
    ಗೊಣಗಿಲಕಟ್ಟೆ ಗ್ರಾಮದ ಮಧ್ಯಭಾಗದಲ್ಲಿರುವ ತೊಟ್ಟಿಗೆ ನೀರು ತುಂಬಿಸಿದರೆ ನೀರಿನಿಂದ ಸೊಳ್ಳೆ ಇನ್ನಿತರೆ ಕ್ರಿಮಿಕೀಟಗಳು ಹೆಚ್ಚಾಗ ಬಹುದು ಎಂದು ತೊಟ್ಟಿಗೆ ನೀರು ತುಂಬಿಸಬಾರದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಬೆರಳೆಣಿಕೆ ಜನರಿಂದಾಗಿ ಇಡೀ ಗ್ರಾಮಕ್ಕೆ ತೊಂದರೆ ಆಗಿರುವುದಲ್ಲದೆ ತೊಟ್ಟಿ ತಳದಲ್ಲಿ ನಿಂತಿರುವ ಅಲ್ಪ ಸ್ವಲ್ಪ ನೀರೆಲ್ಲವೂ ಹಸಿರಿನ ಪಾಚಿ ಕಟ್ಟಿಕೊಂಡಿದ್ದು, ಕೆಲ ಕೀಡಿಗೇಡಿಗಳು ತೊಟ್ಟಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕುತ್ತಿರುವುದರಿಂದ ತೊಟ್ಟಿಯಲ್ಲಿರುವ ನೀರು ದುರ್ನಾತ ಬೀರುತ್ತಿದೆ. ಗ್ರಾಪಂ ಆಡಳಿತ ಕೂಡಲೇ ಇತ್ತ ಗಮನ ಹರಿಸಿ ತೊಟ್ಟಿಗೆ ನೀರು ತುಂಬಿಸಬೇಕು ಇಲ್ಲವೇ ಹಾಲಿ ಇರುವ ನೀರನ್ನೆಲ್ಲ ತೆಗೆದು ಸ್ವಚ್ಚ ಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
    ಗೊಣಗಿಲಕಟ್ಟೆ ಬಸ್ ನಿಲ್ದಾಣ ಸಮೀಪ ನಿರ್ಮಿಸಿರುವ ಕುಡಿಯುವ ನೀರಿನ ತೊಟ್ಟಿಗೆ ನೀರು ತುಂಬಿಸಬಾರದು ಎಂದು ಕೆಲವರು ತಿಳಿಸಿರುವ ಕಾರಣ ನೀರು ತುಂಬಿಸುವುದನ್ನು ನಿಲ್ಲಿಸಲಾಗಿದೆ. ತೊಟ್ಟಿಯಲ್ಲಿ ಸಂಗ್ರವಾದ ನೀರು ಹಾಳಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಸ್ಥಳ ಪರಿಶೀಲನೆ ಮಾಡಿ ಗ್ರಾಮಸ್ಥರ ಅಭಿಪ್ರಾಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉಡೇವಾ ಗ್ರಾಪಂ ಅಧ್ಯಕ್ಷೆ ಭಾರತಿ ಸಿ. ರಾಜಪ್ಪ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts