More

    ಇನ್ನೂ ಬೆಂಬಲ ಕಾಣದ ಹೆಸರು!

    ಬೆಳಗಾವಿ: ಜಿಲ್ಲೆಯಲ್ಲಿ ಹೆಸರು ಬೆಳೆ ರಾಶಿ ಆರಂಭವಾಗಿ ಮೂರು ವಾರ ಕಳೆದಿದೆ. ಆದರೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಜಿಲ್ಲೆಯಲ್ಲಿ ಹೆಸರು ಖರೀದಿ ಕೇಂದ್ರ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಆರ್ಥಿಕ ಸಂಕಷ್ಟಕದಲ್ಲಿರುವ ರೈತರು ಎಂಎಸ್‌ಪಿಗಿಂತ ಕಡಿಮೆ ದರದಲ್ಲಿ ಹೆಸರು ಮಾರಾಟ ಮಾಡುವಂತಾಗಿದೆ.

    ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 40,782 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದರು. ಆಗಸ್ಟ್ ಮೊದಲ ವಾರದಿಂದ ಮಳೆಯಿದ್ದರೂ ರೈತರು ಹೆಸರು ಬೆಳೆ ರಾಶಿ ಆರಂಭಿಸಿದ್ದಾರೆ. ಕೆಲ ರೈತರು ಸ್ಥಳೀಯ ವ್ಯಾಪಾರಿಗಳಿಗೆ ಗುಣಮಟ್ಟದ ಆಧಾರದ ಮೇಲೆ ಎಂಎಸ್‌ಪಿಗಿಂತ ಕಡಿಮೆ ದರದಲ್ಲಿ ಕ್ವಿಂಟಲ್‌ಗೆ 6,450 ರಿಂದ 6,900 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ.

    7,196 ರೂ. ದರ ನಿಗದಿ: ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆ ಯಡಿ ಖರೀದಿ ಕೇಂದ್ರಗಳಲ್ಲಿ ಕ್ವಿಂಟಾಲ್ ಹೆಸರಿಗೆ 7,196 ರೂ. ದರ ನಿಗದಿ ಮಾಡಿದೆ. ಆದರೆ, ಮಾರುಕಟ್ಟೆಗಳಲ್ಲಿ ಇದಕ್ಕಿಂತ ಕಡಿಮೆ ದರದಲ್ಲಿ ಹೆಸರು ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಕ್ವಿಂಟಾಲ್‌ಗೆ 500 ರೂ.ನಿಂದ ರಿಂದ 800 ರೂ. ನಷ್ಟ ಉಂಟಾಗುತ್ತಿದೆ. ಹೆಸರು ರಾಶಿ ಆರಂಭಗೊಂಡು ಮೂರು ವಾರ ಕಳೆದಿದ್ದರೂ ರೈತರ ನೋಂದಣಿ ಪ್ರಕ್ರಿಯೆಯೇ ಆರಂಭವಾಗಿಲ್ಲ.

    ಅನ್ನದಾತರ ಅಸಮಾಧಾನ: ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಹೆಸರು ಬೆಳೆಯುವ ಜಿಲ್ಲೆಗಳಲ್ಲಿ ಸರ್ಕಾರ ರಾಶಿ ಮುನ್ನವೇ ಖರೀದಿ ಕೇಂದ್ರ ತೆರೆಯಬೇಕು. ಆದರೆ, ಈ ವರ್ಷ ಒಂದೂ ಕೇಂದ್ರ ಆರಂಭ ವಾಗಿಲ್ಲ. 2019-20ನೇ ಸಾಲಿನ ಅವಧಿಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳ ರಾಶಿ ಆರಂಭವಾಗುತ್ತಿದ್ದಂತೆ ಜಿಲ್ಲಾಡಳಿತ ಕೇಂದ್ರ ಆರಂಭಿಸಿತ್ತು. ಆದರೆ, ಈ ವರ್ಷ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ, ರವಿ ದೂರಿದ್ದಾರೆ.

    ದರ ಕಡಿಮೆ ಇದ್ದರಷ್ಟೇ ಕೇಂದ್ರ ಆರಂಭ

    ಜಿಲ್ಲೆಯ ವಿವಿಧ ಮಾರುಕಟ್ಟೆಗಳಲ್ಲಿ ಹೆಸರು ಬೆಳೆ ದರವು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಇದ್ದರೆ ಮಾತ್ರ ಖರೀದಿ ಕೇಂದ್ರ ಆರಂಭಿಸಲಾಗುತ್ತದೆ. ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದ್ದರೆ ಖರೀದಿ ಕೇಂದ್ರ ಪ್ರಾರಂಭಿಸುವ ಅವಶ್ಯಕತೆ ಇರುವುದಿಲ್ಲ. ಮಾರುಕಟ್ಟೆಯಲ್ಲಿ ಹೆಸರಿನ ಮಾರಾಟ ದರ ಕುರಿತು ಎಪಿಎಂಸಿ ಅವರು ವರದಿ ಸಲ್ಲಿಸಬೇಕು. ಬಳಿಕ ಎಲ್ಲೆಲ್ಲಿ ಹೆಸರು ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎನ್ನುತ್ತಾರೆ ಎಪಿಎಂಸಿಯ ಹಿರಿಯ
    ಮಾರುಕಟ್ಟೆ ಮೇಲ್ವಿಚಾರಕ ಎಂ.ಹೊಸಮನಿ.

    ಅಥಣಿಯಲ್ಲಿ 615 ಹೆಕ್ಟೇರ್, ಬೈಲಹೊಂಗಲ 5,911 ಹೆ., ಬೆಳಗಾವಿ 40 ಹೆ, ಚಿಕ್ಕೋಡಿ 647 ಹೆ, ಗೋಕಾಕ 632 ಹೆ, ರಾಮದುರ್ಗ 14,150 ಹೆ, ಸವದತ್ತಿ 18,100 ಹೆ, ಹುಕ್ಕೇರಿ 182 ಹೆ, ರಾಯಬಾಗ 505 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಹೆಸರು ಬೆಳೆಗಳ ರಾಶಿ ಆರಂಭವಾಗಿದ್ದು, ಶೀಘ್ರ ಖರೀದಿ ಕೇಂದ್ರ ಆರಂಭಿಸುವ ಕುರಿತು ಸಭೆ ಕರೆಯಲಾಗುವುದು.
    | ಶಿವನಗೌಡ ಎಸ್. ಪಾಟೀಲ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts