More

    ಶೋಭಾ ಕರಂದ್ಲಾಜೆ ವಿರುದ್ಧದ ಕೇಸ್‌ಗೆ ಹೈಕೋರ್ಟ್ ತಡೆ

    ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ತಮಿಳುನಾಡಿನ ಸಂಬಂಧ ಕಲ್ಪಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.

    ಪ್ರಕರಣ ಸಂಬಂಧ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಹಾಗೂ ಅದರ ಸಂಬಂಧ 5ನೇ ಎಸಿಎಂಎಂ ನ್ಯಾಯಾಲಯದ ಮುಂದಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಶೋಭಾ ಕರಂದ್ಲಾಜೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

    ವಿಚಾರಣೆ ವೇಳೆ ಶೋಭಾ ಕರಂದ್ಲಾಜೆ ಪರ ವಕೀಲ ವೆಂಕಟೇಶ್ ದಳವಾಯಿ, ಭಾಷಣದಲ್ಲಿ ಯಾವುದೇ ಧರ್ಮ, ಜಾತಿ, ಪಂಗಡದ ಬಗ್ಗೆ ಮಾತನಾಡಿರಲಿಲ್ಲ. ಎಫ್‌ಐಆರ್ ದಾಖಲಿಸುವ ಮೊದಲು ದೂರುದಾರರು ಪ್ರಾಥಮಿಕ ತನಿಖೆ ನಡೆಸಬೇಕಿತ್ತು. ಆದ್ದರಿಂದ ಇದೊಂದು ರಾಜಕೀಯಪ್ರೇರಿತ ಪ್ರಕರಣವಾಗಿದ್ದು, ಎಫ್‌ಐಆರ್ ದಾಖಲಿಸಿರುವುದು ಕಾನೂನಿನ ದುರ್ಬಳಕೆ ಆಗಿದೆ. ಹೀಗಾಗಿ, ಎಫ್‌ಐಆರ್ ರದ್ದುಪಡಿಸಬೇಕು ಎಂದು ಪೀಠದ ಮುಂದೆ ಮನವಿ ಮಾಡಿದರು. ವಾದವನ್ನು ಮನ್ನಿಸಿ ಪ್ರಕರಣಕ್ಕೆ ತಡೆ ನೀಡಿದೆ. ಪ್ರತಿವಾದಿಗಳಾದ ಕಾಟನ್‌ಪೇಟೆ ಪೊಲೀಸರು ಹಾಗೂ ದೂರು ದಾಖಲಿಸಿದ್ದ ಚುನಾವಣಾ ನೀತಿಸಂಹಿತೆ ಸಂಚಾರಿ ದಳದ ಅಧಿಕಾರಿ ಎಂ.ಎನ್. ಶಿವರಾಜು ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

    ಕೇಂದ್ರ ಸಚಿವೆಗೆ ಬುದ್ಧಿಮಾತು:
    ಮಾತು ಆಡಿದರೆ ಮುತ್ತಿನಂತಿರಬೇಕು. ಮಾತು ಮೀತಿ ಮೀರದಂತಿರಲಿ ಎಂದು ಅರ್ಜಿದಾರರಿಗೆ ನ್ಯಾಯಪೀಠ ಅರ್ಜಿದಾರರಿಗೆ ಸಲಹೆ ನೀಡಿತು. ಯಾವುದೇ ಪಕ್ಷವಾದರೂ ರಾಜಕೀಯ ನಾಯಕರು ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಬೇಕು. ವಾಕ್ ಸ್ವಾತಂತ್ರೃ, ಅಭಿವ್ಯಕ್ತಿ ಸ್ವಾತಂತ್ರೃ ಇರಬಹುದು. ಆದರೆ, ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ. ಇಲ್ಲದಿದ್ದರೆ ಭಾರತವು ಅಫ್ಘಾನಿಸ್ತಾನ ಆಗಬಹುದು. ಅಲ್ಲಿ ಯಾರಿಗೂ ಸ್ವಾತಂತ್ರೃವಿಲ್ಲ ಎಂದು ಕಟುವಾಗಿ ನುಡಿಯಿತು. ಅಷ್ಟೇ ಅಲ್ಲದೆ ಮಾತಿನ ಮೇಲೆ ಸಂಯಮ ಇರಲಿ ಎಂದು ನ್ಯಾಯಮೂರ್ತಿಗಳು ಮನವಿ ಮಾಡಿಕೊಂಡಿದ್ದಾರೆ ಎಂದು ನಿಮ್ಮ ಕಕ್ಷಿದಾರರಿಗೆ ತಿಳಿಸಿ ಎಂದು ಕರಂದ್ಲಾಜೆ ಪರ ವಕೀಲರಿಗೆ ಹೇಳಿತು.

    ಶೋಭಾ ಹೇಳಿದ್ದೇನು?ಇತ್ತೀಚೆಗೆ ನಗರ್ತಪೇಟೆಯಲ್ಲಿ ನಡೆದ ಘಟನೆ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಿತು. ಆ ಸಂದರ್ಭ ‘ಒಬ್ಬ ವ್ಯಕ್ತಿ ತಮಿಳುನಾಡಿನಿಂದ ಬಂದು ಬಾಂಬ್ ಸ್ಪೋಟಿಸುತ್ತಾನೆ, ಮತ್ತೊಬ್ಬ ಕೇರಳದಿಂದ ಬಂದು ಆ್ಯಸಿಡ್ ದಾಳಿ ನಡೆಸುತ್ತಾನೆ, ಇನ್ನೊಬ್ಬ ದೆಹಲಿಯಿಂದ ಬಂದು ಪಾಕ್ ಪರ ಘೋಷಣೆ ಕೂಗುತ್ತಾನೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ್ದ ತಮಿಳುನಾಡು ಸಿಎಂ ಸ್ಟಾಲಿನ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ವಿರೋಧ ವ್ಯಕ್ತವಾಗುತ್ತಿದ್ದಂತೆ ಕರಂದ್ಲಾಜೆ ಕ್ಷಮೆಯಾಚಿಸಿದ್ದರು. ಈ ಮಧ್ಯೆ, ಪ್ರಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸೂಚನೆ ನೀಡಿತ್ತು. ಅದರಂತೆ, ಕಾಟನ್‌ಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts