ಬೆಂಗಳೂರು: ಕೃಷಿ ಮಾರುಕಟ್ಟೆ ಸಮಿತಿ, ಕಾರ್ವಿುಕ ಕಾಯ್ದೆಗಳ ನಂತರ ಇದೀಗ ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ರಾಜ್ಯದ ಕೆಲವು ಅಧಿಕಾರ ಹಿಂಪಡೆಯುತ್ತಿರುವುದಕ್ಕೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ತೀರ್ವನಿಸಿದೆ.
ಕೇಂದ್ರದಿಂದ ವಿದ್ಯುತ್ ಕಾಯ್ದೆ ತಿದ್ದುಪಡಿಯ ಕರಡು ಬರುತ್ತಿದ್ದಂತೆ ಇಂಧನ ಇಲಾಖೆಯ ಅಧಿಕಾರಿಗಳು ನಾಲ್ಕು ಸಭೆಗಳನ್ನು ನಡೆಸಿ ರ್ಚಚಿಸಿ ದ್ದಾರೆ. ಕೆಲವೊಂದು ಅಂಶಗಳಿಗೆ ಸಲ್ಲಿಸಬೇಕಾದ ಆಕ್ಷೇಪಣೆಗಳನ್ನು ಪಟ್ಟಿ ಮಾಡಿದ್ದು, ಇಂಧನ ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ ಭಾರತ-ಚೀನಾ ಉದ್ವಿಗ್ನತೆ: ರಕ್ಷಣಾ ಮುಖ್ಯಸ್ಥರ ಜತೆ ಪ್ರಧಾನಿ ಸಭೆ
ನಗದು ನೇರ ವರ್ಗಾ ವಣೆಗೆ ವಿರೋಧ: ರೈತರು ಹಾಗೂ ಇತರ ಫಲಾನುಭವಿಗಳಿಗೆ ಸಬ್ಸಿಡಿ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಬೇಕೆಂಬ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಲು ನಿರ್ಧರಿಸಲಾಗಿದೆ. ಕೃಷಿ ಪಂಪ್ಸೆಟ್, ಕುಟೀರ ಜ್ಯೋತಿ ಇತರ ಫಲಾನುಭವಿಗಳಿಗೆ ಸರ್ಕಾರ ಸಹಾಯಧನ ನೀಡುತ್ತದೆ. 2020-21ನೇ ಸಾಲಿಗೆ 10,014 ಕೋಟಿ ರೂ. ವೆಚ್ಚ ಮಾಡಲಿದೆ. ಈಗ ನಗದು ನೇರ ವರ್ಗಾವಣೆ ಎಂದು ಮೀಟರ್ ಅಳವಡಿಸಲು ಮುಂದಾದರೆ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆಗಳಿವೆ. ವಿಷಯ ರಾಜಕೀಯವಾಗಿ ವಿವಾದಕ್ಕೆ ಒಳಗಾಗುತ್ತದೆ. ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಯಾದರೆ ವಾಪಸ್ ಸರ್ಕಾರಕ್ಕೆ ಬರುವುದು ಕಷ್ಟ. ಆದ್ದರಿಂದ ಈಗ ಇರುವ ಪದ್ಧತಿಯೇ ಒಳ್ಳೆಯದು ಎಂಬುದು ರಾಜ್ಯ ಸರ್ಕಾರದ ಅಭಿಪ್ರಾಯವಾಗಿದೆ.
ಪೇಮೆಂಟ್ ಸೆಕ್ಯೂರಿಟಿ ಮೆಕಾನಿಸಂ: ಖಾಸಗಿ ವಿದ್ಯುತ್ ಉತ್ಪಾದಕರ ಹಿತ ಕಾಯುವ ಸಲುವಾಗಿ ಅವರಿಗೆ ಹಣ ಪಾವತಿಗೆ ವ್ಯವಸ್ಥೆಯೊಂದನ್ನು ತರಲಿದೆ. ಖಾಸಗಿ ವಿದ್ಯುತ್ ಉತ್ಪಾದಕರಿಗೆ ಸರಬರಾಜು ಮಾಡಿದ 45 ದಿನಗಳಲ್ಲಿ ಸಂಬಂಧಿಸಿದ ಹೆಸ್ಕಾಂಗಳು ಹಣ ಪಾವತಿ ಮಾಡಬೇಕು ಎಂಬುದು ನಿಯಮ. ಒಂದು ವೇಳೆ ಹಣ ಪಾವತಿಯಾಗದಿದ್ದರೆ ಖಾಸಗಿ ಉತ್ಪಾದಕರು ಹೊಸದಾಗಿ ರಚನೆ ಆಗಲಿರುವ ವಿದ್ಯುತ್ ಗುತ್ತಿಗೆ ಜಾರಿ ಪ್ರಾಧಿಕಾರ (ಇಸಿಇಎ)ಕ್ಕೆ ದೂರು ಸಲ್ಲಿಸಬಹುದು. ಪ್ರಾಧಿಕಾರವು ಲೋಡ್ ಡಿಸ್ಪ್ಯಾಚ್ ಸೆಂಟರ್ಗೆ ಸೂಚಿಸ ಸಂಬಂಧಿಸಿದ ಹೆಸ್ಕಾಂಗೆ ವಿದ್ಯುತ್ ಸರಬರಾಜು ನಿಲ್ಲಿಸಬಹುದು. ಈ ಅಂಶಕ್ಕೆ ಆಕ್ಷೇಪ ಸಲ್ಲಿಸಲು ಸರ್ಕಾರ ತೀರ್ವನಿಸಿದೆ. ಈ ರೀತಿ ಮಾಡುವುದರಿಂದ ಗ್ರಾಹಕರಿಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ವಿದ್ಯುತ್ ಖರೀದಿ ಮೊತ್ತ ಪಾವತಿಯ ವಿವಾದಗಳನ್ನು ಈಗ ಇರುವ ಕೆಇಆರ್ಸಿ ಮುಂದೆ ಬಗೆಹರಿಸಿಕೊಳ್ಳುವ ಹಾಗೂ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ಅವಕಾಶ ಮುಂದುವರಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ. ಇಸಿಇಎ ದೆಹಲಿಯಲ್ಲಿ ಕಚೇರಿ ಹೊಂದಿರುತ್ತದೆ. ಪ್ರತಿ ಉತ್ಪಾದಕ ದೂರು ಸಲ್ಲಿಸಿದರೆ ವಿಚಾರಣೆಗೆ ಹಾಜರಾಗುವುದು ಸಮಸ್ಯೆಯಾಗಲಿದೆ ಎಂದು ವಿವರಿಸಲು ನಿರ್ಧರಿಸಲಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳ ಆರ್ಥಿಕ ಸ್ಥಿತಿ ಹಾಳಾಗುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಬೀದಿದೀಪ ಹಾಗೂ ಕುಡಿಯುವ ನೀರು ಯೋಜನೆಗಳ ಬಾಕಿ ಪಾವತಿಸದೆ ಉಳಿಸಿಕೊಂಡಿರುತ್ತವೆ ಎಂಬ ಅಂಶವನ್ನು ಕೇಂದ್ರದ ಗಮನಕ್ಕೆ ತರಲು ನಿರ್ಧರಿಸಲಾಗಿದೆ.
ಇದನ್ನೂ ಓದಿ ಲಾಕ್ಡೌನ್ನಿಂದ ಝೆರಾಕ್ಸ್ ಅಂಗಡಿ ತೆರೆಯದಿದ್ರೂ ವಿದ್ಯುತ್ ಬಿಲ್ ನೋಡಿ ಶಾಕ್ ಆದ ಮಾಲೀಕ!
ಸಬ್ಲೀಸ್ ಬೇಡವೇ ಬೇಡ
ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ವಿತರಣೆ ವ್ಯವಸ್ಥೆಯನ್ನು ಖಾಸಗಿಯವರಿಗೆ ಸಬ್ಲೀಸ್ ನೀಡುವ ಪ್ರಸ್ತಾಪಕ್ಕೂ ವಿರೋಧ ಮಾಡಲಿದೆ. ಇದು ಕಂಪನಿಗಳ ಖಾಸಗೀಕರಣ ಮಾಡಿದಂತೆ ಆಗುತ್ತದೆ. ಇದರಿಂದ ಗೊಂದಲಗಳಾಗುತ್ತದೆ. ಒಂದು ವೇಳೆ ಟ್ರಾನ್ಸ್ಫಾರ್ಮರ್ ಕೆಟ್ಟುಹೋದರೆ ರಿಪೇರಿ ಮಾಡಬೇಕಾದವರು ಯಾರು, ಗ್ರಾಹಕರಿಂದ ಹಣ ವಸೂಲಿ ಮಾಡುವವರು ಯಾರು ಎಂಬ ಪ್ರಶ್ನೆಗಳನ್ನು ಕೇಳಲು ಸರ್ಕಾರ ತೀರ್ವನಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಅಧಿಕಾರ ಕಸಿಯಬೇಡಿ
ರಾಜ್ಯಗಳ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸುವ ಅಧಿಕಾರ ವನ್ನು ಕೇಂದ್ರ ಸರ್ಕಾರದ ಬಳಿ ಇಟ್ಟುಕೊಳ್ಳುವ ಬಗ್ಗೆಯೂ ಕರಡು ಪ್ರತಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಅಂಶವನ್ನು ತೀವ್ರವಾಗಿ ವಿರೋಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದು ಆಯಾ ರಾಜ್ಯಗಳಿಗೆ ಇರುವ ಅಧಿಕಾರ, ಅದು ರಾಜ್ಯಗಳ ಬಳಿಯೇ ಇರಲಿ ಎಂದು ಆಕ್ಷೇಪ ವ್ಯಕ್ತಪಡಿಸಲಿದೆ.
ಭಾರಿ ಮಳೆಯಿಂದಾಗಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಬಿದ್ದ ಮರ: ಸ್ಥಳದಲ್ಲೇ ಮಹಿಳೆ ಸಾವು