More

    ರಾಜ್ಯ ಸರ್ಕಾರ ಘೋಷಿಸಿದ್ದು ಕೇವಲ 1,100 ಕೋಟಿ ರೂ. ಪ್ಯಾಕೇಜ್​

    ಬೆಂಗಳೂರು: ಕೋವಿಡ್​ ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿರುವ ರಾಜ್ಯದ ವಿವಿಧ ವರ್ಗಗಳ ಜನರಿಗೆ 1,600 ಕೋಟಿ ರೂ. ಆರ್ಥಿಕ ಪ್ಯಾಕೇಜ್​ ಘೋಷಿಸಿರುವುದಾಗಿ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವದಲ್ಲಿ ಕೇವಲ 1,100 ಕೋಟಿ ರೂ. ಪ್ಯಾಕೇಜ್​ ಘೋಷಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ನಿಧಿ ಹೊರತುಪಡಿಸಿದರೆ ಸರ್ಕಾರ ಘೋಷಿಸಿದ್ದು ಕೇವಲ 1,100 ಕೋಟಿ ರೂ. ಪ್ಯಾಕೇಜ್​. ಚಾಲಕರು, ಸವಿತಾ ಸಮಾಜ, ನೇಕಾರರು, ಮಡಿವಾಳರಿಗೆ ಅಲ್ಪಸ್ವಲ್ಪ ಆರ್ಥಿಕ ಸಹಾಯ ಮಾಡಲಾಗಿದೆ. ಆದರೆ ಆ ಹಣ ಇನ್ನೂ ಬಟವಾಡೆಯಾಗಿಲ್ಲ ಎಂದರು.

    ಇದನ್ನೂ ಓದಿ: VIDEO/ ಕೈಯಲ್ಲಿ ಕೆಲಸ ಇದ್ದರೂ ಬೆಂಗಳೂರು ತೊರೆಯಲು ಸಜ್ಜು

    ಕೋವಿಡ್​ 19 ವಿಷಯದಲ್ಲಿ ರಾಜ್ಯ ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುವುದು ಸಲ್ಲ ಎಂದು ಸುಮ್ಮನಿದ್ದೆವು. ಈವರೆಗೂ ಸರ್ಕಾರಕ್ಕೆ ಎಲ್ಲ ರೀತಿಯ ಬೆಂಬಲ, ಸಹಕಾರ ಕೊಟ್ಟಿದ್ದೇವೆ. ಆದರೆ, ಸುಳ್ಳು ಮಾಹಿತಿ ಕೊಟ್ಟಾಗ ಸುಮ್ಮನಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಶೇ.90 ಆಹಾರದ ಕಿಟ್​ಗಳನ್ನು ವಿತರಿಸಿದ್ದಾರೆ. ಅವರೆಲ್ಲರೂ ಸಹಕರಿಸದೇ ಹೋಗಿದ್ದರೆ ರಾಜ್ಯದಲ್ಲಿ ಹಾಹಾಕಾರ ಎದ್ದಿರುತ್ತಿತ್ತು. ಜನರು ಹಸಿವಿನಿಂದ ಸಾಯುತ್ತಿದ್ದರು ಎಂದು ಹೇಳಿದರು.

    ಇದನ್ನೂ ಓದಿ: 900ರ ಗಡಿ ದಾಟಿತು COVID19 ಪ್ರಕರಣಗಳ ಸಂಖ್ಯೆ- ಹೊಸದಾಗಿ 42 ಕೋವಿಡ್​ ಪ್ರಕರಣ ದೃಢ

    ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಅದರಂತೆ ರಾಜ್ಯದಲ್ಲಿ ಸುಗ್ರೀವಾಜ್ಞೆ ತರಲು ಸಿದ್ಧತೆ ನಡೆದಿದೆ. ಹಾಗೇನಾದರೂ ಮಾಡಿದಲ್ಲಿ ಅದು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಹೇಳಿದರು.

    ಈ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗುತ್ತದೆ. ರೈತರಿಗೆ ತುಂಬಾ ಅನ್ಯಾಯವಾಗುತ್ತದೆ. ರೈತರನ್ನು ಅನಗತ್ಯವಾಗಿ ಶೋಷಣೆಗೆ ಒಳಪಡಿಸಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

    ಅಲ್ಲದೆ, ಅಧಿವೇಶನದಲ್ಲಿ ಚರ್ಚಿಸದೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಸರ್ಕಾರದ ಕ್ರಮಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಈ ತಿದ್ದುಪಡಿಯನ್ನು ವಿರೋಧಿಸುವುದಾಗಿ ಹೇಳಿದರು.

    ಗ್ರಾಮ ಪಂಚಾಯ್ತಿ ಚುನಾವಣೆ ಮುಂದೂಡಲಿ: ಕೋವಿಡ್​ 19 ಲಾಕ್​ಡೌನ್​ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ಮುಂದೂಡುವುದು ಒಳಿತು. ಅದನ್ನು ಬಿಟ್ಟು ಹೊಸದಾಗಿ ನಾಮನಿರ್ದೇಶನ ಮಾಡಲು ರಾಜ್ಯ ಸರ್ಕಾರ ಮುಂದಾದಲ್ಲಿ ಅದಕ್ಕೆ ನಮ್ಮ ವಿರೋಧವಿದೆ ಎಂದು ಸಿದ್ದರಾಮಯ್ಯ ಹೇಳಿದರು.

    ಸನ್ನಿ ಲಿಯೋನ್ ಕುಟುಂಬ ಸಮೇತ ಅಮೆರಿಕಾಗೆ ವಾಪಸ್ಸು ಹೋಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts