More

    ಬಾಕಿ ಬಿಲ್‌ಗಳ ಹಣ ಬಿಡುಗಡೆಗೆ ರಾಜ್ಯ ಗುತ್ತಿಗೆದಾರರ ಸಂಘ ಗಡುವು

    ಬೆಂಗಳೂರು: ಜಲಸಂಪನ್ಮೂಲ,ಸಣ್ಣ ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿ ಹಲವು ಇಲಾಖೆಗಳಲ್ಲಿ ಬಾಕಿ ಉಳಿದಿರುವ ಬಿಲ್‌ಗಳಿಗೆ ತಿಂಗಳದೊಳಗೆ ಹಣ ಬಿಡುಗಡೆ ಮಾಡುವಂತೆ ರಾಜ್ಯ ಗುತ್ತಿಗೆದಾರರ ಸಂಘ, ಸರ್ಕಾರಕ್ಕೆ ಗಡುವು ಕೊಟ್ಟಿದೆ. ಅಲ್ಲದೆ, ನಮ್ಮ ಸಮಸ್ಯೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯುವುದಾಗಿ ಸಂಘ ಹೇಳಿದೆ.

    ವಿವಿಧ ಇಲಾಖೆಗಳಿಂದ ಅಂದಾಜು 20 ಸಾವಿರ ಕೋಟಿ ರೂ.ಅಧಿಕ ಮೊತ್ತದ ಬಿಲ್‌ಗಳು ಬಾಕಿ ಇದೆ. ಇವುಗಳ ವಿಲೇವಾರಿಗೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಮೂರು ಬಾರಿ ಭೇಟಿ ಮಾಡಿ ನಮ್ಮ ಸಂಕಷ್ಟ ಕುರಿತು ಮನವರಿಕೆ ಮಾಡಿಕೊಡಲಾಗಿತ್ತು. ಆದರೂ, ಬಗೆಹರಿದಿಲ್ಲ. ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಗುತ್ತಿಗೆದಾರರ ಸಮಸ್ಯೆಗಳ ಬಗೆಹರಿಯುವ ಬದಲಾಗಿ ಹೊಸದಾಗಿ ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗಿದೆ. ಮುಂದಿನ ವಾರದಲ್ಲಿ ಮತ್ತೊಮ್ಮೆ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಡ ಹಾಕುತ್ತೇವೆ. ಕೊಟ್ಟಿರುವ ಗಡುವುನೊಳಗೆ ಶೇ.50 ಹಣವನ್ನು ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

    ಬಾಕಿ ಬಿಲ್, ಜಿಎಸ್‌ಟಿ ಗೊಂದಲ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೊಸ ಸರ್ಕಾರ ರಚನೆಯಾದಾಗ ಗುತ್ತಿಗೆದಾರರಿಗೆ ಹಂತ ಹಂತವಾಗಿ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವ ಬಗ್ಗೆ ನಿರೀಕ್ಷೆ ಇತ್ತು. ಆದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ತನಿಖೆ ಹೆಸರಿನಲ್ಲಿ ಹಣ ಪಾವತಿಯಾಗದಂತೆ ತಡೆ ಹಿಡಿಯಲಾಗಿದೆ. ಸರ್ಕಾರವೇ ಮಾಡಿರುವ ನಿಯಮಗಳ ಪ್ರಕಾರ ಕಾಮಗಾರಿಗಳಿಗೆ ವರ್ಷದ ಒಪ್ಪಂದ ಮಾತ್ರ ಇರುತ್ತದೆ. ಆದರೆ, ಮೂರು ವರ್ಷದ ತನಿಖೆ ನಡೆಸುವುದಾಗಿ ಹೇಳುತ್ತಿದೆ. ವರ್ಷದಿಂದೀಚೆಗಿನ ಕಾಮಗಾರಿಗಳ ಬಾಕಿ ಮೊತ್ತವನ್ನು ತಡೆ ಹಿಡಿದು ತನಿಖೆ ಮುಗಿದ ನಂತರವೇ ನೀಡಲು ಅಭ್ಯಂತರವಿಲ್ಲ. ಆದರೆ,ಮೂರ್ನಾಲ್ಕು ವರ್ಷಗಳ ಬಾಕಿ ಬಿಲ್ ತಡೆ ಹಿಡಿದಿರುವುದು ಸರಿಯಲ್ಲ.ಈಗಿನ ಸರ್ಕಾರದ ಬಗ್ಗೆ ನಮಗೆ ಯಾವುದೇ ಮೃದು ಧೋರಣೆ ಇಲ್ಲ ಎಂದು ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದರು.

    ಬೇಕಾದವರಿಗೆ ಮಾತ್ರ ಹಣ ಪಾವತಿ
    ಕೆಲ ಇಲಾಖೆಗಳಲ್ಲಿ ಒಳಗೊಳಗೆ ತಮಗೆ ಬೇಕಾದವರಿಗೆ ಮಾತ್ರ ಬಾಕಿ ಮೊತ್ತ ಪಾವತಿಸಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಸ್ಥಳೀಯ ಇಂಜಿನಿಯರ್, ಅಧಿಕಾರಿಗಳು ತಮಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ. ನಮ್ಮ ಹಾಗೂ ಲೆಕ್ಕಪತ್ರ ಇಲಾಖೆ ಅಧಿಕಾರಿಗಳ ಗಮನಕ್ಕೂ ತರದೆ ಶಿಫಾರಸ್ಸು ತಂದವರಿಗೆ ರಾತ್ರೋರಾತ್ರಿ ಚೆಕ್ ನೀಡಲಾಗುತ್ತಿದೆ ಎಂದು ಅಧಿಕಾರಿಗಳೇಹೇಳುತ್ತಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ಮಾಹಿತಿ ನೀಡಿದರು. ಸಚಿವರು ಹಾಗೂ ಅಧಿಕಾರಿಗಳ ನಡುವಿನ ಕಿತ್ತಾಟದಿಂದ ನಾವೆಲ್ಲರೂ ಬಲಿಪಶುರಾಗಿದ್ದೇವೆ.ಮೂರು ಮತ್ತು ನಾಲ್ಕನೇ ದರ್ಜೆ ಗುತ್ತಿಗೆದಾರರ ಕಷ್ಟ ಯಾವ ಶತ್ರುವಿಗೂ ಬರಬಾರದು. ಬ್ಯಾಂಕ್, ಖಾಸಗಿ ಲೇವಾದೇವಿಗಾರರ ಬಳಿ ಆಸ್ತಿ ಅಡವಿಟ್ಟು ತಂದ ಹಣದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ಹಣ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಸಾಕಷ್ಟು ಗುತ್ತಿಗೆದಾರರು ಊರು ಬಿಟ್ಟಿದ್ದಾರೆ.ಯಾವುದೇ ಇಲಾಖೆಯಲ್ಲಿ ಜ್ಯೇಷ್ಠತೆ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಪಿಎಫ್​ ವಿತ್​ಡ್ರಾ ಮಾಡ್ತಿದ್ದೀರಾ? ಟ್ಯಾಕ್ಸ್​ ಬೀಳಬಹುದು ಎಚ್ಚರ!

    ಅನಾಥರಾದ ಗುತ್ತಿಗೆದಾರರು
    ಬಿಬಿಎಂಪಿಯಲ್ಲಿ ಗುತ್ತಿಗೆದಾರರು ಅನಾಥ ಮಕ್ಕಳಾಗಿದ್ದಾರೆ. ಬೃಹತ್ ನೀರುಗಾಲುವೆ (ಕೆ-100 ಯೋಜನೆ ಸಹಿತ) ಕಾಮಗಾರಿಗಳಿಗೆ ಶೇ 30, ಮೇಲ್ಸೇತುವೆ, ಅಂಡರ್‌ಪಾಸ್, ರೈಲು ಮೇಲ್ವೇತುವೆ, ಕೆಳಸೇತುವೆ ಶೇ.10, ಪಾದಚಾರಿ ಮಾರ್ಗ, ಟೆಂಡರ್ ಶೂರ್ ರಸ್ತೆಗಳು ಸೇರಿ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳು ಶೇ.30, ವೈಟ್ ಟಾಪಿಂಗ್ ಮತ್ತು ಕಟ್ಟಡಗಳು ಶೇ.15, ವಾರ್ಡ್ ಕಾಮಗಾರಿಗಳಿಗೆ ಶೇ 15ರಷ್ಟು ಹಣ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಜ್ಯೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆ ಮಾಡುವುದನ್ನು ಕೈ ಬಿಡಲಾಗಿದೆ ಎಂದು ಕೆಂಪಣ್ಣ ಹೇಳಿದರು. ಈ ಸಂಬಂಧ ಬೆಂಗಳೂರು ಉಸ್ತುವಾರಿ ಸಚಿವ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಕೆಲ ವರ್ಗಗಳಿಗೆ ಕಾಮಗಾರಿ ಮುಗಿದ ತಕ್ಷಣ ಅನುದಾನ ಲಭ್ಯವಾದರೆ, ಇನ್ನೂ ಕೆಲ ವರ್ಗಗಳಲ್ಲಿ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ತಾರತಮ್ಯಕ್ಕೆ ಕಾರಣವಾಗಿದೆ. ಪ್ರಭಾವಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ನಿಯಮವನ್ನು ರೂಪಿಸಲಾಗಿದೆ. ಬಾಕಿ ಮೊತ್ತವನ್ನು ಹಿರಿತನದ ಆಧಾರದಲ್ಲಿಯೇ ಬಿಡುಗಡೆ ಮಾಡಬೇಕೆಂದು ಹೈಕೋರ್ಟ್ ನೀಡಿರುವ ತೀರ್ಪುನ್ನು ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts