More

    ವಿಜಯಪುರ ಇಬ್ಭಾಗಿಸಿದರೆ ಸಿಂದಗಿ ಜಿಲ್ಲೆ ಮಾಡಿ

    ಸಿಂದಗಿ: ಇಂಡಿಯನ್ನು ಜಿಲ್ಲಾ ಕೇಂದ್ರವಾಗಿ ಸೃಜಿಸಲು ಇಂಡಿ ಉಪವಿಭಾಗಾಧಿಕಾರಿಗಳ ಜನಾಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಬಹುತೇಕ ಸಂಘ ಹಾಗೂ ಸಂಘಟನೆಗಳು, ವಿಜಯಪುರ ಜಿಲ್ಲೆಯನ್ನು ಇಬ್ಭಾಗಿಸಿದರೆ ಸಿಂದಗಿ ತಾಲೂಕನ್ನು ಜಿಲ್ಲೆ ಮಾಡಲು ತಮ್ಮ ಹಕ್ಕೊತ್ತಾಯ ಮಂಡಿಸಿದರು.

    ಶುಕ್ರವಾರ ಸಂಜೆ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಸಿಂದಗಿ ಜಿಲ್ಲಾ ಹೋರಾಟ ಸಮಿತಿಯ ಜನಪ್ರತಿನಿಧಿಗಳು, ಗಣ್ಯವ್ಯಕ್ತಿಗಳು, ವರ್ತಕರು, ಸಾಹಿತಿ ಮತ್ತು ಚಿಂತಕರು ಹಾಗೂ ಜನಸಾಮಾನ್ಯರು ಇಂಡಿ ಜಿಲ್ಲೆ ಮಾಡುವುದನ್ನು ವಿರೋಧಿಸದೇ, ಸಿಂದಗಿ ತಾಲೂಕು ಜಿಲ್ಲೆಯಾಗುವ ಅರ್ಹತೆಗಳನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸಿಂದಗಿಯನ್ನು ಜಿಲ್ಲೆ ಮಾಡುವಂತೆ ಎಸಿ ಅಬೀದ್ ಗದ್ಯಾಳ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಇತಿಹಾಸದಲ್ಲಿ ಸಿಂದಗಿ ತನ್ನ ಹೆಜ್ಜೆಯ ಗುರುತು ಮೂಡಿಸಿದೆ. 1857ರ ಸಿಪಾಯಿ ದಂಗೆಗೂ ಮೊದಲು ಬ್ರಿಟಿಷರ ತೆರಿಗೆ ನೀತಿಯನ್ನು ಖಂಡಿಸಿ, 1824ರಲ್ಲಿ ಬಂಡಾಯವೆದ್ದವರು ನಾವು. ಈ ಕುರಿತು ಇತಿಹಾಸದ ಪುಟಗಳಲ್ಲಿ ದಾಖಲಿದೆ. ಹೈದ್ರಾಬಾದ ವಿಮೋಚನಾ ಚಳುವಳಿಯ ರೂವಾರಿ ಸ್ವಾಮಿ ರಮಾನಂದ ತೀರ್ಥರು ಸಿಂದಗಿಯವರು. ರಜಾಕರ ವಿರುದ್ಧ ಚಳುವಳಿ ಮಾಡಿದ ದುಮ್ಮದ್ರಿ ಶರಣಗೌಡರಂಥವರಿಗೆ ಆಶ್ರಯ ನೀಡಿದ, ಈ ಭಾಗದ ಅನೇಕ ಹಳ್ಳಿಗಳು ನಿಜಾಮಶಾಹಿಯ ಆಡಳಿತಕ್ಕೆ ಒಳಪಟ್ಟಿರುವುದು ಇತಿಹಾಸವಾಗಿದೆ.

    ಕೃಷಿ ಉತ್ಪನ್ನದ ದೊಡ್ಡ ಆದಾಯ, ಕಂದಾಯ, ಇಂಡಿಗಿಂತಲೂ ಹೆಚ್ಚು ನೀರಾವರಿ ಹೊಂದಿರುವ ಕ್ಷೇತ್ರವಾಗಿರುವ ಸಿಂದಗಿ ತಾಲೂಕು. ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ತಾಳಿಕೋಟಿ ತಾಲೂಕುಗಳನ್ನು ಸೇರಿಸಿ ಒಂದು ಜಿಲ್ಲೆಯನ್ನಾಗಿ ಮಾಡಿದರೆ, ಭೌಗೋಳಿಕವಾಗಿ ಸಿಂದಗಿ ಒಂದು ಜಿಲ್ಲಾ ಕೇಂದ್ರವಾಗಿ ನಿಲ್ಲುತ್ತದೆ ಎಂಬುದು ಸೇರಿ ಇತರ ಸೌಕರ್ಯಗಳೊಂದಿಗಿನ ಮನವಿಯನ್ನು ವಿಪ ಮಾಜಿ ಸದಸ್ಯ ಅರುಣ ಶಹಾಪುರ ಓದಿ ಎಸಿಗೆ ಸಲ್ಲಿಸಿದರು.

    ಸಭೆಯಲ್ಲಿ ಕೆಲವು ನಾಯಕರು ಜನಾಭಿಪ್ರಾಯ ಸಂಗ್ರಹದ ಕುರಿತು ತಾಲೂಕು ಆಡಳಿತ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಿದರು. ಆಗ ಎಸಿ ತಹಸೀಲ್ದಾರ್ ಕಚೇರಿಯ ಸೂಚನಾ ಫಲಕದಲ್ಲಿ ಹಾಕಲಾಗಿತ್ತು ಎಂದರು. ಅಲ್ಲದೇ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಖುದ್ದಾಗಿ ಬಂದಿದ್ದು, ಮುಂಬರುವ ಜ. 10ರವರೆಗೆ ಲಿಖಿತವಾಗಿ ತಮ್ಮ ಅಭಿಪ್ರಾಯವನ್ನು ತಹಸೀಲ್ದಾರ್ ಕಚೇರಿಗೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

    ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ, ಡಾ. ಎಂ.ಎಂ. ಪಡಶೆಟ್ಟಿ, ಡಾ. ಸಿ.ಕೆ. ಕಟ್ಟಿ, ಹ.ಮ. ಪೂಜಾರ, ಶಿವಕುಮಾರ ಬಡಾನೂರ, ಚಂದ್ರಶೇಖರ ದೇವರಡ್ಡಿ, ಸಿದ್ದು ಪಾಟೀಲ, ಅಶೋಕ ವಾರದ, ಅಶೋಕ ಅಲ್ಲಾಪೂರ, ಡಾ. ದಸ್ತಗೀರ ಮುಲ್ಲಾ, ವೈ.ಸಿ. ಮಯೂರ, ರಾಜಶೇಖರ ಕೂಚಬಾಳ, ಆನಂದ ಶಾಬಾದಿ, ಎಂ.ಎ. ಖತೀಬ, ಶಬ್ಬೀರಪಟೇಲ ಬಿರಾದಾರ, ತಹಸೀಲ್ದಾರ್ ಡಾ. ಪ್ರದೀಪಕುಮಾರ ಹಿರೇಮಠ, ತಾಪಂ ಇಒ ರಾಮು ಅಗ್ನಿ, ಸಿಪಿಐ ಡಿ. ಹುಲಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts