More

    ಕಾಂಗ್ರೆಸ್ ಸರ್ಕಾರದಲ್ಲಿಯೂ ಶೇ.40 ಕಮಿಷನ್ ದಂಧೆ ಜೋರು: ರಾಜ್ಯ ಗುತ್ತಿಗೆದಾರರ ಸಂಘ ಗುಡುಗು

    ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಶೇ.40 ಕಮಿಷನ್ ದಂಧೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿಯೂ ಮುಂದುವರಿದಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಆರೋಪಿಸಿದೆ.

    ಗುತ್ತಿಗೆದಾರರ ಬಳಿ ಮೊದಲು ಸಚಿವರು, ಶಾಸಕರು ನೇರವಾಗಿ ಕಮಿಷನ್ ಕೇಳುತ್ತಿದ್ದರು. ಇದೀಗ ಅಧಿಕಾರಿಗಳೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸದ್ಯದಲ್ಲೇ ಅಧಿಕಾರಿಗಳ ಹೆಸರುಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೇಲಿನವರಿಗೆ ನೀಡಬೇಕು ಎನ್ನುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಏಜೆಂಟ್ ದರ್ಬಾರ್ ದಂಧೆ ರಾಜೋರೋಷವಾಗಿ ನಡೆಯುತ್ತಿದೆ. ಜತೆಗೆ,ಅಧಿಕಾರಿಗಳ ಭ್ರಷ್ಟಾಚಾರವೂ ಮೀತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಸಂಘದ ಅಧ್ಯಕ್ಷ ಕೆಂಪಣ್ಣ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

    ಪೊಲೀಸ್ ವಸತಿ ಗೃಹ ಅಭಿವೃದ್ಧಿ ನಿಗಮ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ, ಬಿಬಿಎಂಪಿ ಸೇರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ವಿರುದ್ಧವಾಗಿ ಕರೆದಿರುವ ಪ್ಯಾಕೆಜ್ ಟೆಂಡರ್‌ಗಳನ್ನು ರದ್ದುಪಡಿಸಿ ಪ್ರತಿ ಕಾಮಗಾರಿಗೂ ಪ್ರತ್ಯೇಕವಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಇತ್ತೀಚೆಗಷ್ಟೇ ಹೈಕೋರ್ಟ್ ಪ್ಯಾಕೇಜ್ ಟೆಂಡರ್ ಆಹ್ವಾನಿಸಬಾರದು ಎಂದು ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದೆ. ಕೋರ್ಟ್ ಆದೇಶದನ್ವಯ ಸರ್ಕಾರವು, ಯಾವುದೇ ಕಾರಣಕ್ಕೂ ಪ್ಯಾಕೇಜ್ ಟೆಂಡರ್ ಆಹ್ವಾನಿಸದಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ಹಲವು ಬಾರಿ ಭೇಟಿ ಮಾಡಿ ಪ್ಯಾಕೆಜ್ ಟೆಂಡರ್ ಕರೆಯದಂತೆ ಲಕ್ಷಾಂತರ ಗುತ್ತಿಗೆದಾರರ ಪರವಾಗಿ ಮನವಿ ಮಾಡಲಾಗಿತ್ತು. ಹತ್ತಾರು ಪತ್ರ ಬರೆದು ಸಿಎಂ ಗಮನಕ್ಕೆ ತಂದು ಎಚ್ಚರಿಸುವ ಕೆಲಸ ಮಾಡಲಾಗಿತ್ತು. ಆದರೂ, ಎಲ್ಲ ಇಲಾಖೆಗಳಲ್ಲಿ ಎಗ್ಗಿಲ್ಲದೆ ಪ್ಯಾಕೆಜ್ ಟೆಂಡರ್ ಕರೆಯಲಾಗುತ್ತಿದೆ ಇದೆ. ಈ ಬಗ್ಗೆ ಮುಖ್ಯ ಇಂಜಿನಿಯರ್ ಪ್ರಶ್ನಿಸಿದರೆ ಮೇಲಿನ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಾರೆ. ಮೇಲಿನವರನ್ನು ಪ್ರಶ್ನಿಸಿದರೆ ಸಚಿವರು, ಶಾಸಕರತ್ತ ಬೊಟ್ಟು ಮಾಡುತ್ತಾರೆ ಎಂದು ಕೆಂಪಣ್ಣ ವಿವರಿಸಿದರು. ಸಂಘದ ಪದಾಧಿಕಾರಿಗಳಾದ ಬಿ.ಸಿ.ದಿನೇಶ್, ಬಿ.ಎನ್.ಕೃಷ್ಣೇಗೌಡ, ಎಂ.ರಮೇಶ್, ಚಿಕ್ಕಹೊಂಬಯ್ಯ ಮತ್ತಿತರರಿದ್ದರು.

    ಭಾರತದ ಅತಿ ಕಿರಿಯ ಬಿಲಿಯನೇರ್ ಈತ​! 27ನೇ ವಯಸ್ಸಲ್ಲಿ ಒಟ್ಟು ಆಸ್ತಿಯ ಮೊತ್ತ ಕೇಳಿದ್ರೆ ದಂಗಾಗೋದು ಖಚಿತ

    ನೆರೆ ರಾಜ್ಯದವರಿಗೆ ಆದ್ಯತೆ
    ಸ್ಥಳೀಯ ಗುತ್ತಿಗೆದಾರರನ್ನು ದೂರ ಇಡುವ ನಿಟ್ಟಿನಲ್ಲಿ ನೆರೆರಾಜ್ಯಗಳ ಗುತ್ತಿಗೆದಾರರಿಗೆ ಆದ್ಯತೆ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಈ ವ್ಯವಸ್ಥೆ ಉರುಳಾಗಿ ಪರಿಣಮಿಸಿದೆ. ಟೆಂಡರ್‌ನಲ್ಲಿ ಅನಗತ್ಯ ನಿಯಮಗಳನ್ನು ವಿಧಿಸಿ ಸ್ಥಳೀಯರನ್ನು ದೂರವಿಡಲಾಗುತ್ತಿದೆ. ಪ್ಯಾಕೇಜ್ ಪದ್ಧತಿಯಿಂದ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿದಂತಾಗುತ್ತದೆ. ವಾಮಮಾರ್ಗ ಅನುಸರಿಸಿ ತಮಗೆ ಆಪ್ತರಾದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸುವುದು ಸರ್ವೇ ಸಾಮಾನ್ಯವಾಗಿದೆ. ಈ ಕ್ರಮದಿಂದ ಗುಣಮಟ್ಟ ಹಾಳಾಗುವ ಜತೆಗೆ ಅರ್ಹ ಗುತ್ತಿಗೆದಾರ ಅನ್ಯಾಯಕ್ಕೊಳಗಾಗುತ್ತಾನೆ. ಆದ್ದರಿಂದ, ಎಲ್ಲ ರೀತಿಯ ಕಾಮಗಾರಿಗಳನ್ನು ಟೆಂಡರ್ ಮೂಲಕವೇ ಹಂಚಿಕೆ ಮಾಡಿದರೆ ನ್ಯಾಯ ಸಿಗುವಂತಾಗಲಿದೆ ಎಂದು ಕೆಂಪಣ್ಣ ಹೇಳಿದರು. ವಾರದಿಂದ ಬಿಬಿಎಂಪಿಯಲ್ಲಿ ಅಂದಾಜು 300 ಕೋಟಿ ರೂ.ಮೌಲ್ಯದ ಪ್ಯಾಕೇಜ್ ಟೆಂಡರ್ ಕರೆಯಲಾಗಿದೆ. ಕ್ಷೇತ್ರ, ವಾರ್ಡ್ ಹಾಗೂ ಹಲವು ಕಾಮಗಾರಿಗಳನ್ನು ಒಗ್ಗೂಡಿಸಿ ಪ್ಯಾಕೇಜ್ ಟೆಂಡರ್ ಕರೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಒಂದೊಂದು ಕ್ಷೇತ್ರದಲ್ಲಿ 5-10 ಕಾಮಗಾರಿ ಸೇರಿಸಿ ಟೆಂಡರ್ ಆಹ್ವಾನಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಇಲಾಖೆವಾರು ಭ್ರಷ್ಟ ಅಧಿಕಾರಿಗಳ ಪಟ್ಟಿ ಸಲ್ಲಿಕೆ:
    ಹಣ ಬಿಡುಗಡೆಯಲ್ಲಿ ಜ್ಯೇಷ್ಠತೆ ಪಾಲನೆಯಾಗುತ್ತಿಲ್ಲ.ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಸೂಚಿಸುವರಿಗೆ ಮಾತ್ರ ಬಾಕಿ ಮೊತ್ತ ಬಿಡುಗಡೆ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಿ 2 ವರ್ಷ ಕಳೆದರೂ ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸಲಾಗುತ್ತಿದೆ. ಶೇ.80 ಮೊತ್ತವನ್ನು ಹಿರಿತನದ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಎಂದು ನಿಯಮಗಳು ಹೇಳುತ್ತವೆ. ಆದರೆ, ಇದು ಪಾಲನೆಯಾಗುತ್ತಿಲ್ಲ ಎಂದು ಸಂಘದ ಆರ್. ಮಂಜುನಾಥ್ ಹೇಳಿದರು. ಬಿಬಿಎಂಪಿಯಲ್ಲಿ 15 ಮುಖ್ಯ ಇಂಜಿನಿರ್‌ಗಳಿದ್ದಾರೆ. ಪ್ರತಿ ಟೆಂಡರ್‌ನಲ್ಲೂ ಕಮಿಷನ್ ಬೇಡಿಕೆ ಇಡುತ್ತಾರೆ. ವಿಶ್ರಾಂತ ನ್ಯಾಯಮೂರ್ತಿ ನ್ಯಾ. ನಾಗಮೋಹನ್ ದಾಸ್ ಸಮಿತಿಗೆ ಭ್ರಷ್ಟ ಅಧಿಕಾರಿಗಳು ಕುರಿತು ಮಾಹಿತಿ ನೀಡಲಾಗಿದೆ. 9 ಸಾವಿರ ಪುಟಗಳ ಮೂಲಕ ದೂರು ನೀಡಲಾಗಿದೆ.ಅದರಲ್ಲಿ ಪ್ರತಿ ಇಲಾಖೆಯ ಅಧಿಕಾರಿಗಳ ಹೆಸರು ನೀಡಲಾಗಿದೆ. ಭ್ರಷ್ಟಾಚಾರ, ಕಮಿಷನ್ ಸಂಬಂಧ ಸಿಎಂ, ಡಿಸಿಎಂ ಸೇರಿ ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಲಿದ್ದೇವೆ. ಒಂದು ವೇಳೆ ವ್ಯವಸ್ಥೆ ಹೀಗೆ ಮುಂದುವರಿದರೆ ಹೋರಾಟ ಅನಿವಾರ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts