ಬೆಂಗಳೂರು: ರೈತ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ (ಎಪಿಎಂಸಿ) ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಸಭೆ ಕೊನೆಗೂ ಒಪ್ಪಿಗೆ ನೀಡಿದೆ.
ಗುರುವಾರ ನಡೆದ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಇದು ನೇರವಾಗಿ ರಾಜ್ಯ ಸರ್ಕಾರವೇ ತೆಗೆದುಕೊಂಡ ನಿರ್ಧಾರ ಅಲ್ಲ. ಇಂಥದೊಂದು ತಿದ್ದುಪಡಿಗೆ ಕೇಂದ್ರ ಸರ್ಕಾರದ ಕೃಷಿ ಸಚಿವಾಲಯ ಮೇ 5ರಂದು ಸೂಚನೆ ನೀಡಿತ್ತು. ಅದರಂತೆ ಸುಗ್ರೀವಾಜ್ಞೆ ಮೂಲಕ ಇದನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ, ರಾಜ್ಯಪಾಲರು ಈ ತರಾತುರಿಯ ನಿರ್ಧಾರಕ್ಕೆ ಒಪ್ಪಿಗೆ ನೀಡಿರಲಿಲ್ಲ. ಸಂಪುಟದ ಅನುಮೋದನೆಯೊಂದಿಗೆ ಕಳಿಸುವಂತೆ ಸೂಚಿಸಿದ್ದರು.
ಇದನ್ನೂ ಓದಿರಿ ಈದ್ ಸಾಮೂಹಿಕ ಪ್ರಾರ್ಥನೆಗೆ ಅವಕಾಶ: ಇಬ್ರಾಹಿಂ V/s ಈಶ್ವರಪ್ಪ
ಈ ಕಾಯ್ದೆ ಮೊದಲು ಅಸ್ತಿತ್ವಕ್ಕೆ ಬಂದಿದ್ದು 1966ರಲ್ಲಿ. ನಂತರ 1986ರಲ್ಲಿ ರೈತರ ಹಿತ ಗಮನದಲ್ಲಿ ಇಟ್ಟುಕೊಂಡು ಇದನ್ನು ಒಮ್ಮೆ ತಿದ್ದುಪಡಿ ಮಾಡಲಾಗಿತ್ತು. ನಂತರ 2017ರಲ್ಲಿ ಮಾದರಿ ಕಾಯ್ದೆ ರೂಪಿಸಲಾಗಿತ್ತು. ಅದಕ್ಕೆ ಕೇಂದ್ರ ಸರ್ಕಾರ ಈಗ ತಿದ್ದುಪಡಿ ಸೂಚಿಸಿದೆ.
ಈವರೆಗೆ ರೈತರ ಬೆಳೆಯನ್ನು ಎಪಿಎಂಸಿಗಳಲ್ಲಿ ಹರಾಜಿನ ಮೂಲಕ ಖರೀದಿಸಲು ಅವಕಾಶವಿತ್ತು. ಬಹುರಾಷ್ಟ್ರೀಯ ಕಂಪನಿಗಳು ರೈತರಿಂದ ನೇರವಾಗಿ ಫಸಲು ಖರೀದಿಸುವುದಕ್ಕೂ ಅನುಮತಿ ಇರಲಿಲ್ಲ. ಕೃಷಿ ನಿರ್ದೇಶನಾಲಯದ ಒಪ್ಪಿಗೆ ಬೇಕಾಗುತ್ತಿತ್ತು.
ತಿದ್ದುಪಡಿ ನಂತರ ಬಹುರಾಷ್ಟ್ರೀಯ ಕಂಪನಿಗಳು ರೈತರಿಂದ ನೇರವಾಗಿ ಫಸಲು ಖರೀದಿಸಲು ಅವಕಾಶವಾಗುತ್ತದೆ. ಅವರು ಹೇಳಿದಷ್ಟು ಬೆಲೆಗೆ ರೈತರು ತಮ್ಮ ಫಸಲು ನೀಡಬೇಕಾಗುತ್ತದೆ. ಇದು ರೈತರ ಹಿತಕ್ಕೆ ಮಾರಕ. ಅದಲ್ಲದೆ ಸಣ್ಣಪುಟ್ಟ ವ್ಯಾಪಾರಿಗಳಿಗೂ ಇದರಿಂದ ಅನ್ಯಾಯವಾಗುತ್ತದೆ ಎಂಬುದು ರೈತ ಸಂಘಟನೆಗಳ ಮತ್ತು ವಿರೋಧ ಪಕ್ಷಗಳ ನಾಯಕರ ಅಭಿಮತ.
ಇದನ್ನೂ ಓದಿರಿ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ದೇವೇಗೌಡ ವಿರೋಧ