More

    ಉಸಿರುಗಟ್ಟಿದ ಮೈತ್ರಿ ಯೋಜನೆಗಳು: ಶೇ.40 ಘೋಷಣೆಗಳೂ ಅನುಷ್ಠಾನಕ್ಕೆ ಬರಲಿಲ್ಲ, ಬಿಎಸ್​ವೈ ಸರ್ಕಾರಕ್ಕೆ ಆರ್ಥಿಕ ಸವಾಲು

    ಸಾಮಾನ್ಯವಾಗಿ ಸರ್ಕಾರ ಬದಲಾದ ಸಂದರ್ಭಗಳಲ್ಲಿ ಹೊಸ ಸರ್ಕಾರ ತನ್ನ ಛಾಪನ್ನು ಜನರಿಗೆ ತೋರ್ಪಡಿಸಲು ಉಸಿರುಗಟ್ಟಿದ ಮೈತ್ರಿ ಯೋಜನೆಗಳು: ಶೇ.40 ಘೋಷಣೆಗಳೂ ಅನುಷ್ಠಾನಕ್ಕೆ ಬರಲಿಲ್ಲ, ಬಿಎಸ್​ವೈ ಸರ್ಕಾರಕ್ಕೆ ಆರ್ಥಿಕ ಸವಾಲುಹೊಸ ಬಜೆಟ್ ಮಂಡಿಸುವುದು, ಹೊಸ ಯೋಜನೆಗಳನ್ನು ಪರಿಚಿಸುವುದು ಸಂಪ್ರದಾಯ. ಆದರೆ, ಯಡಿಯೂರಪ್ಪ ವಿವಿಧ ಕಾರಣಗಳಿಗೆ ಪೂರಕ ಅಂದಾಜು ಮಂಡಿಸಿ ಕೈತೊಳೆದುಕೊಂಡರು. ಈ ನಿರ್ಧಾರ ಮಾಡಿದ ಮೇಲೆ ಮೈತ್ರಿ ಸರ್ಕಾರದ ಯೋಜನೆಗಳಿಗೆ ಆದ್ಯತೆ ಸಿಗಬೇಕಿತ್ತು. ರಾಜಕೀಯ ಕಾರಣಗಳಿಗಾಗಿ ಅವು ನಿರೀಕ್ಷಿತ ಮಟ್ಟದಲ್ಲಿ ನೆಲಬಿಟ್ಟು ಮೇಲೇಳಲೇ ಇಲ್ಲ. ಮೈತ್ರಿ ಸರ್ಕಾರದ ಯೋಜನೆಗಳನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಪ್ರಮುಖ ಸಂಗತಿ ಎಂದರೆ ಹಣಕಾಸಿನ ಮುಗ್ಗಟ್ಟು ಸರ್ಕಾರದ ಕೈಕಟ್ಟಿ ಹಾಕಿತು. ಹೇಗಾದರೂ ಮಾಡಿ ಈ ಆರ್ಥಿಕ ವರ್ಷ ಮುಗಿಸಿದರೆ ಸಾಕು ಎಂಬಂತ ಸ್ಥಿತಿ ನಿರ್ವಣವಾಗಿಬಿಟ್ಟಿತು. ಇದೆಲ್ಲದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

    ಬೆಂಗಳೂರು: ಮತ್ತೊಂದು ರಾಜ್ಯ ಬಜೆಟ್ ಮಂಡನೆಗೆ ಬೆರಳೆಣಿಕೆ ದಿನಗಳು ಉಳಿದಿವೆ. ಹಿಂದಿನ ಬಜೆಟ್​ನಲ್ಲಿ ಸರ್ಕಾರ ಮಾಡಿದ ಪ್ರಸ್ತಾಪಗಳು ಈ ಹೊತ್ತಿನಲ್ಲಿ ಯಾವ ಸ್ಥಿತಿಯಲ್ಲಿವೆ? ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆಯೇ ಎಂದು ನೋಡುವ ಸಂದರ್ಭವಿದು.

    2019-20ನೇ ಸಾಲಿನ ಬಜೆಟನ್ನು 2019 ಫೆ.8ರಂದು ಆಗಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ್ದರು. ಅವರು ಕೊಟ್ಟ ಯೋಜನೆಗಳನ್ನು ಕಾರ್ಯಗತ ಗೊಳಿಸುವಷ್ಟು ಕಾಲ ಅಧಿಕಾರದಲ್ಲಿ ಉಳಿಯದಾದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿ.ಎಸ್. ಯಡಿಯೂರಪ್ಪ ಸಿಎಂ ಆದರು, ಎಚ್​ಡಿಕೆ ಮಂಡಿಸಿದ ಬಜೆಟ್ ಅನ್ನೇ ಮುಂದು ವರಿಸುವ ತೀರ್ವನವನ್ನೂ ಮಾಡಿದರು.

    ಎಚ್​ಡಿಕೆ ಮಂಡಿಸಿದ ಬಜೆಟ್​ಗೆ ಬಿಎಸ್​ವೈ ಸಾಕಷ್ಟು ಮಹತ್ವ ಕೊಟ್ಟಿದ್ದರು. ಏಕೆಂದರೆ ಅವರು ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಅವರ ಸರ್ಕಾರ ಬಂದು ಕೇವಲ 8 ತಿಂಗಳಾಗಿತ್ತು. 2018-19ನೇ ಸಾಲಿನ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿದ್ದರು. ಮೈತ್ರಿ ಸರ್ಕಾರ ಇದ್ದಿದ್ದರಿಂದ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಕ್ಕೆ ಚ್ಯುತಿ ಬಾರದಂತೆ ಕುಮಾರಸ್ವಾಮಿ ತಮ್ಮ ಛಾಪು ಮೂಡಿಸಬೇಕಿತ್ತು. ಸಹಜವಾಗಿ ಒಂದಷ್ಟು ಕಸರತ್ತು ಮಾಡಿ, ಫ್ಲಾಗ್​ಶಿಪ್ ಕಾರ್ಯಕ್ರಮ ಪರಿಚಯಿಸಿದ್ದರು.

    2018-19ರಲ್ಲಿ ಮಂಡಿಸಿದ ಬಜೆಟ್​ನ ಪ್ರಸ್ತಾಪವಾಗಿದ್ದ ಹೊಸ ಕಾರ್ಯಕ್ರಮಗಳಿಗೆ ಮೈತ್ರಿ ಸರ್ಕಾರದಲ್ಲಿ ಪೂರ್ಣ ಪ್ರಮಾಣದ ನ್ಯಾಯ ಸಿಕ್ಕಿರಲಿಲ್ಲ. ಜತೆಗೆ 2019-20ರ ಬಜೆಟ್​ಗೂ ಅದೇ ರೀತಿ ಆಯಿತು ಎಂಬುದು ಮುಚ್ಚಿಟ್ಟ ವಿಚಾರವೇನಲ್ಲ. ಕುಮಾರಸ್ವಾಮಿ ಮಂಡಿಸಿದ ಬಜೆಟ್ ಪುಸ್ತಕವನ್ನೊಮ್ಮೆ ತಿರುವಿ ಹಾಕಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಮಾತನಾಡಿಸಿದಾಗ ಗೊತ್ತಾಗಿದ್ದೇನೆಂದರೆ, ಶೇ. 40-45ಕ್ಕಿಂತ ಹೆಚ್ಚಿನ ತೀರ್ವನಗಳು ಅನುಷ್ಠಾನಕ್ಕೆ ಬಂದೆ ಇಲ್ಲ!

    ಸೂರು ಸಿಗಲಿಲ್ಲ

    ಸಿದ್ಧ ಉಡುಪು ಕಾರ್ವಿುಕರಿಗೆ, ಬೆಂಗಳೂರಿನ ಆಟೋಚಾಲಕರಿಗೆ, ಟ್ಯಾಕ್ಸಿ ಚಾಲಕರಿಗೆ ಸಾರಥಿಯ ಸೂರು ಎಂಬ ಬಾಡಿಗೆ ಆಧಾರದ ವಸತಿ ಕಾರ್ಯಕ್ರಮವನ್ನು 50 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗಿತ್ತಷ್ಟೇ. ಪ್ರಕ್ರಿಯೆ ಮುಂದುವರಿಯದೇ ಹೋಯಿತು.

    ಸಾಲಮನ್ನಾ ಎಲ್ಲರಿಗಿಲ್ಲ

    ಕುಮಾರಸ್ವಾಮಿ ಅವರು ಮಹತ್ವಾಕಾಂಕ್ಷಿ ತೀರ್ವನವಾಗಿ ಸಾಲಮನ್ನಾ ಯೋಜನೆ ಪ್ರಕಟಿಸಿದ್ದರು, ಅದರ ಕ್ರೆಡಿಟ್ ಪಡೆದುಕೊಳ್ಳಲು ಅಂದಿನ ಸರ್ಕಾರದ ಭಾಗವಾಗಿದ್ದ ಕಾಂಗ್ರೆಸ್ ಕೂಡ ಪೈಪೋಟಿ ನಡೆಸಿತ್ತು. ಅಂತಿಮವಾಗಿ ದಾಖಲೆ ಕೊರತೆ, ತಾಂತ್ರಿಕ ಕಾರಣ, ಬ್ಯಾಂಕ್​ಗಳ ಉದಾಸೀನ, ಷರತ್ತಿನ ನೆಪದಲ್ಲಿ 30 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ಅವಕಾಶ ದೊರೆಯದಾಯಿತು. ಸರ್ಕಾರ ಸಾಲಮನ್ನಾ ಘೋಷಣೆ ಮಾಡಿದ ಸಂದರ್ಭಕ್ಕಿಂತ ಮುಂಚಿತ ವಾಗಿ ಸಾಲ ಮರುಪಾವತಿ ಮಾಡಿದವರಿಗೆ ನೀಡಬೇಕಿದ್ದ ಪ್ರೋತ್ಸಾಹ ಧನದ ಬಗ್ಗೆ ಈವರೆಗೂ ಸರ್ಕಾರ ಚಕಾರ ಎತ್ತಿಲ್ಲ.

    ಇಸ್ರೇಲ್ ಮಾದರಿ ಎಲ್ಲಾಯ್ತು?

    ರಾಜ್ಯದ ರೈತರೂ ಕಡಿಮೆ ನೀರು ಉಪ ಯೋಗಿಸಿ, ಬೆಳೆಗಳನ್ನು ಲಾಭದಾಯಕ ವಾಗಿ ಬೆಳೆಯಬೇಕೆಂಬ ಉದ್ದೇಶದಿಂದ ಇಸ್ರೇಲ್ ಮಾದರಿ ಕೃಷಿಯನ್ನು ಇಲ್ಲಿಯೂ ಪರಿಚಯಿಸಬೇಕು, ಆ ಮೂಲಕ ಕೃಷಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಬೇಕು ಎಂಬುದು ಎಚ್.ಡಿ ಕುಮಾರಸ್ವಾಮಿ ಉದ್ದೇಶವಾಗಿತ್ತು, ಅವರು ಕುರ್ಚಿಯಿಂದ ಇಳಿಯುತ್ತಿದ್ದಂತೆ ಅವರ ಕಲ್ಪನೆ ಕೂಡ ಹಳ್ಳ ಹಿಡಿಯಿತು. ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದರೆ, ಪ್ರಾಯೋಗಿಕವಾಗಿ ಅನುಷ್ಠಾನ ಮಾಡುವ ಆಲೋಚನೆ ಇದೆ. ನಂತರ ವಿಸ್ತರಿಸುತ್ತೇವೆ ಎನ್ನುತ್ತಾರೆ. ಇದಕ್ಕಾಗಿ 145 ಕೋಟಿ ರೂ. ಮೀಸಲಾಗಿಡಲಾಗಿತ್ತು.

    ಕಣಜವೆಲ್ಲಿ?

    ರೈತರು ಅನಿರೀಕ್ಷಿತ ಬೆಲೆ ಕುಸಿಯುವಿಕೆ ಸವಾಲು ಎದುರಿಸಲು 12 ಅಧಿಸೂಚಿತ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಬೆಲೆಯ ಸಂರಕ್ಷಣಾ ವ್ಯವಸ್ಥೆಯನ್ನು ಆವರ್ತಕ ನಿಧಿ ಮೂಲಕ ಒದಗಿಸಲು ರೈತ ಕಣಜ ಯೋಜನೆ ಉದ್ದೇಶ ಹೊಂದಿ 510 ಕೋಟಿ ರೂ. ತೆಗೆದಿಡಲಾಗಿತ್ತು. ಇದು ನಿರೀಕ್ಷಿತ ಮಟ್ಟದಲ್ಲಿ ಟೇಕಾಫ್ ಆಗಲಿಲ್ಲ. 500 ಸಂಯುಕ್ತ ಬೇಸಾಯ ಸಹಕಾರ ಸಂಘ ಸ್ಥಾಪನೆಯೂ ನೆನೆಗುದಿಗೆ ಬಿತ್ತು.

    ಸರ್ಕಾರ ಬದಲಾದರೂ ಬಜೆಟ್​ನಲ್ಲಿ ಘೋಷಿತ ಕಾರ್ಯ ಕ್ರಮವನ್ನು ಅಧಿಕಾರಿಗಳು ಅನುಷ್ಠಾನ ಮಾಡಬೇಕಿತ್ತು. ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಇದಕ್ಕೆ ಯಾರು ಹೊಣೆ? ಹಿಂದಿನ ಸಿಎಂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಅನುಷ್ಠಾನ ಅವಕಾಶವೂ ಅವರಿಗಿರುತ್ತಿತ್ತು. ಸರ್ಕಾರ ಉಳಿಸಿಕೊಳ್ಳುವಲ್ಲಿಯೇ ಅವರು ವಿಫಲರಾದರು. ಬಜೆಟ್ ಅನುಷ್ಠಾನವಾಗದ್ದು ವ್ಯವಸ್ಥೆಯ ವೈಫಲ್ಯತೆ ಸಂಕೇತ. ರೈತರ ಅಭಿವೃದ್ಧಿ ಬಾಯಿ ಮಾತಲ್ಲೇ ಉಳಿದಿದೆ. ಮಾಜಿ ಸಿಎಂ ಪ್ರತಿಪಕ್ಷದಲ್ಲಿ ಇದ್ದರೂ ಸರ್ಕಾರದ ಮೇಲೆ ಒತ್ತಡ ತಂದು ತಮ್ಮ ಕಾರ್ಯಕ್ರಮ ಅನುಷ್ಠಾನ ಮಾಡಿಸದೇ ಹೋದರು.

    | ಪ್ರೊ.ಕೃಷ್ಣೇಗೌಡ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕರು

    ಕಲುಷಿತ ನದಿಗಳ ಸಂರಕ್ಷಣೆ ಇಲ್ಲ

    9 ಕೋಟಿ ರೂ. ವೆಚ್ಚದಲ್ಲಿ 17 ಕಲುಷಿತ ನದಿ ತೀರಗಳ ನೀರಿನ ಗುಣಮಟ್ಟ ಮಾಪನ ಮಾಡಲು ನಿರಂತರ ಪರಿವೇಷ್ಠಕ ಜಲ ಗುಣಮಟ್ಟ ಮಾಪನ ಕೇಂದ್ರ ಸ್ಥಾಪಿಸುವ ಕೆಲಸ ಆಗಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 21 ಜಿಲ್ಲಾ ಪ್ರಯೋಗಾಲಯ ಅಭಿವೃದ್ಧಿಪಡಿಸುವ ಕೆಲವೂ ನಿರೀಕ್ಷಿತ ಮಟ್ಟದಲ್ಲಿ ನಡೆಯದಾಯಿತು.

    ಸಂಯುಕ್ತ ವಿದ್ಯಾರ್ಥಿ ನಿಲಯವಿಲ್ಲ

    ಪರಿಶಿಷ್ಟ, ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಜಿಲ್ಲೆಗೆ ಒಂದರಂತೆ 30 ಸಂಯುಕ್ತ ವಿದ್ಯಾರ್ಥಿ ನಿಲಯ ಆರಂಭಿಸಬೇಕೆಂದು ಅಂದು ಡಿಸಿಎಂ ಆಗಿದ್ದ ಜಿ.ಪರಮೇಶ್ವರ್ ಬಯಸಿ ದ್ದರು, ಬಜೆಟ್​ನಲ್ಲಿ 100 ಕೋಟಿ ರೂ. ಸಹ ತೆಗೆದಿಡ ಲಾಗಿತ್ತು. ಅಷ್ಟೇ, ಮುಂದಿನ ಪ್ರಕ್ರಿಯೆ ನಡೆಯಲಿಲ್ಲ.

    ನೀರಾವರಿಗೆ ಹರಿಯಲಿಲ್ಲ ಹಣ

    12 ಪ್ರಮುಖ ಏತ ನೀರಾವರಿ ಯೋಜನೆಗಳಿಗೆ 1563 ಕೋಟಿ ರೂ. ವಿನಿಯೋಗಿಸಲು ಸರ್ಕಾರ ಬಯಸಿತ್ತು. ವಿವಿಧ ಕಾರಣಗಳಿಂದ ಅವು ನೆಲ ಬಿಟ್ಟೇಳಲಿಲ್ಲ. ಕೆರೆ ತುಂಬಿಸುವ ಯೋಜನೆ ಸಹ ಗುರಿ ಮುಟ್ಟಲಿಲ್ಲ, ಕಾಲುವೆ ಆಧುನೀಕರಣಕ್ಕೆ ಒತ್ತು ಸಿಗಲಿಲ್ಲ.

    ರೈತ ‘ಸಿರಿ’ ಕಾಣಲೇ ಇಲ್ಲ

    ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ನಿಯಮದಂತೆ ಕಾಂಗ್ರೆಸ್ ಕಡೆಯಿಂದ ‘ರೈತ ಸಿರಿ’ ಯೋಜನೆ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿತ್ತು. 10 ಸಾವಿರ ಹೆಕ್ಟೇರ್​ಗಳಲ್ಲಿ ಸಿರಿಧಾನ್ಯ ಬೆಳೆಯಬೇಕು, ಪ್ರತಿ ಹೆಕ್ಟೆರ್ ಸಿರಿಧಾನ್ಯ ಬೆಳೆದವರಿಗೆ ತಲಾ 10 ಸಾವಿರ ರೂ. ನೀಡುವುದಾಗಿ ಸರ್ಕಾರ ಹೇಳಿಕೊಂಡಿತ್ತಲ್ಲದೆ, 10 ಕೋಟಿ ರೂ. ತೆಗೆದಿಟ್ಟಿತ್ತು. ಕಾರ್ಯಕ್ರಮ ಅನುಷ್ಠಾನವಾಗಲೇ ಇಲ್ಲ.

    ಹಾಲಿಗೆ ಸಿಗಲಿಲ್ಲ ಪ್ರೋತ್ಸಾಹ

    ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈಗಾಗಲೇ ಪ್ರತಿ ಲೀಟರ್ ಹಾಲು ಉತ್ಪಾದನೆಗೆ 5 ರೂ.ನಂತೆ ನೀಡುತ್ತಿದ್ದು, 2019-20ನೇ ಸಾಲಿನಿಂದ 6 ರೂ.ಗೆ ಹೆಚ್ಚಿಸಲಾಗುವುದು ಎಂದು ಸರ್ಕಾರ ಹೇಳಿಕೊಂಡಿತ್ತು, ರೈತರು ಯಾವಾಗ ಬಂದೀತೆಂದು ಇನ್ನೂ ಕಾಯುತ್ತಲೇ ಇದ್ದಾರೆ.

    ಎಲಿವೇಟೆಡ್ ನನೆಗುದಿಗೆ

    ಬೆಂಗಳೂರಿನ ಸಂಚಾರಿ ವ್ಯವಸ್ಥೆ ಬಲಪಡಿಸುವ ಉದ್ದೇಶ ದಿಂದ ನಮ್ಮ ಸರ್ಕಾರ 6 ಎಲಿವೇಟೆಡ್ ಕಾರಿಡಾರ್ ನಿರ್ವಿುಸಲು 1000 ಕೋಟಿ ರೂ. ಒದಗಿಸಿದ್ದಾಗಿ ಕುಮಾರಸ್ವಾಮಿ ಹೇಳಿಕೊಂಡಿದ್ದರು. ಇದು ಇನ್ನೂ ಕಲ್ಪನೆಯ ಕೂಸಾಗಿಯೇ ಇದೆ. ಇನ್ನೂ ಚರ್ಚೆಯೇ ಮುಗಿದಿಲ್ಲ. ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಕೂಡ ಪ್ರಗತಿ ಕಂಡಿಲ್ಲ. ಸ್ಮಾರ್ಟ್ ರ್ಪಾಂಗ್ ಯೋಜನೆ ಸ್ಮಾರ್ಟ್ ಆಗಿ ಅನುಷ್ಠಾನವಾಗಲಿಲ್ಲ.

    | ಶ್ರೀಕಾಂತ್ ಶೇಷಾದ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts