More

    ರಾಜ್ಯ ಬಿಜೆಪಿ ಸರ್ಕಾರ ನಿಷ್ಕ್ರಿಯ

    ಬೆಳಗಾವಿ: ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ, ಬೆಳೆ ಹಾನಿ ಸಂಭವಿಸಿದ್ದರೂ ರಾಜ್ಯ ಸರ್ಕಾರ ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿಯ 26 ಸಂಸದರಿದ್ದರೂ ಕೇಂದ್ರ ಸರ್ಕಾರದಿಂದ ಕನಿಷ್ಠ 25 ಸಾವಿರ ಕೋಟಿ ರೂ. ಪರಿಹಾರ ತರಲೂ ಸಾಧ್ಯವಾಗಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣವೂ ಬಂದಿಲ್ಲ. ಬಿಜೆಪಿ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಆರೋಪಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬೆಳಗಾವಿ ಜಿಲ್ಲೆಯೊಂದರಲ್ಲೇ 4 ಲಕ್ಷ ಎಕರೆ ಭೂಮಿಯಲ್ಲಿನ ಬೆಳೆ ಹಾನಿಯಾಗಿದೆ. ಮನೆ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಲ್ಲ. ಶೇ. 20ರಷ್ಟು ರೈತರಿಗೆ ಮಾತ್ರ ಬೆಳೆ ಹಾನಿ ಪರಿಹಾರ ತಲುಪಿದೆ. ಕೂಡಲೇ ಉಳಿದವರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

    ಕಳೆದ ಬಾರಿ ಅತಿವೃಷ್ಟಿಯಿಂದ ಉಂಟಾದ ಹಾನಿಯ ಪರಿಹಾರ ಸಂತ್ರಸ್ತರಿಗೆ ಇನ್ನೂ ತಲುಪಿಲ್ಲ. ವಿಧಾನ ಪರಿಷತ್‌ನಲ್ಲಿ ಸರ್ಕಾರದ ವೈಫಲ್ಯ, ಸಂತ್ರಸ್ತರಿಗೆ ಪರಿಹಾರ ಸಿಗದಿರುವ ಬಗ್ಗೆ ಗಮನ ಸೆಳೆದಿದ್ದೇನೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿಯೂ ಆಸ್ತಿ-ಪಾಸ್ತಿ, ಬೆಳೆ ಹಾನಿ ಸಂಭವಿಸಿದೆ. ಈ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಸಭೆ ಮಾಡಲಾಗಿದೆ ಎಂದು ಎಸ್.ಆರ್. ಪಾಟೀಲ ತಿಳಿಸಿದರು. ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಬೆಳಗಾವಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜು ಶೇಠ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.

    ಡಿಸಿ ಜತೆ ಚರ್ಚೆ: ಅದಕ್ಕೂ ಪೂರ್ವದಲ್ಲಿ ಎಸ್.ಆರ್. ಪಾಟೀಲ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಮುಖ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಹಾನಿ, ಕೈಗೊಂಡ ಪರಿಹಾರ ಹಾಗೂ ಸಂತ್ರಸ್ತರ ಸಮಸ್ಯೆಗಳಿಗೆ ಜಿಲ್ಲಾಡಳಿತದ ಸ್ಪಂದನೆ ಮತ್ತಿತರ ವಿಷಯವಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೊಂದಿಗೆ ಚರ್ಚಿಸಿ, ಮಾಹಿತಿ ಪಡೆದರು.

    ಮಹಿಳೆಯೊಂದಿಗೆ ಅಸಭ್ಯ ವರ್ತನೆ ಖಂಡನೀಯ: ಮಹಾಲಿಂಗಪುರ ಪುರಸಭೆಯ ಚುನಾವಣೆ ಮತದಾನ ವೇಳೆ ಶಾಸಕ ಸಿದ್ದು ಸವದಿ ಸೇರಿ ಬಿಜೆಪಿ ಮುಖಂಡರು ಮತ್ತು ಬೆಂಬಲಿಗರು ಮಹಿಳೆಯೊಂದಿಗೆ ನಡೆದುಕೊಂಡ ಅಸಭ್ಯ ವರ್ತನೆ ಖಂಡನೀಯ. ಹಿರಿಯರೆಂದು ನಾನು ಗೌರವಿಸುವ ಶಾಸಕ ಸಿದ್ದು ಸವದಿ ಅವರಿಂದ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ ಎಂದು ಎಸ್.ಆರ್.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು. ಯಾವ ದೇಶದಲ್ಲಿ ಮಹಿಳೆಯನ್ನು ಗೌರವಿಸುತ್ತಾರೋ ಅಲ್ಲಿ ದೇವರಿರುತ್ತಾನೆ ಎನ್ನುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಬೇಟಿ ಬಚಾವೋ, ಬೇಟಿ ಪಡಾವೋ’ ಎನ್ನುತ್ತಾರೆ. ಆದರೆ, ಸಂಸ್ಕೃತಿಯ ಬಗ್ಗೆ ಮಾತನಾಡುವ ಬಿಜೆಪಿಯವರ ವರ್ತನೆ ಅಸಹ್ಯ ಎನ್ನುವಂತಾಗಿದೆ. ಓರ್ವ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ಬಿಜೆಪಿ ಶಾಸಕ ಸವದಿ ಮತ್ತು ಕಾರ್ಯಕರ್ತರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

    ಕೇಂದ್ರದಿಂದ ಅಧಿಕಾರ ದುರುಪಯೋಗ: ಸಿಬಿಐ, ಇಡಿ, ಐಟಿ ಚುನಾವಣಾ ಆಯೋಗ ಸೇರಿ ಸಾಂವಿಧಾನಿಕ ಸಂಸ್ಥೆಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡದೆ ಅತಿ ಹೆಚ್ಚು ದುರುಪಯೋಗ ಮಾಡಿಕೊಂಡಿದ್ದೇ ನರೇಂದ್ರ ಮೋದಿ ಸರ್ಕಾರ. ಸಂಸ್ಥೆ ದುರುಪಯೋಗ ಮಾಡಿಕೊಂಡು ನಮ್ಮನ್ನು ಹಣಿಯುವ ಕೆಲಸ ಮಾಡಲಾಗುತ್ತಿದೆ. ವಿನಯ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ ಎಂದು ಎಸ್.ಆರ್. ಪಾಟೀಲ ಆರೋಪಿಸಿದರು. ಬಿಜೆಪಿಯಲ್ಲಿ ಸಿಎಂ ವಿರುದ್ಧ ಅವರ ಪಕ್ಷದ ಶಾಸಕರೇ ಹೇಳಿಕೆ ಕೊಡುತ್ತಿದ್ದು, ಬಿಜೆಪಿ ಒಡೆದ ಮನೆಯಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲರೂ ಒಂದಾಗಿದ್ದೇವೆ. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts