More

  ಪರಿಹಾರ ಕೇಳಿದ್ದು ಜಾಸ್ತಿ, ಕೊಟ್ಟಿದ್ದು ಅತ್ಯಲ್ಪ

  ತೀರ್ಥಹಳ್ಳಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ದೇಶದ ಆರ್ಥಿಕ ಮತ್ತು ಮಾನವ ಸಂಪನ್ಮೂಲ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿದ್ದು ದೇಶದ ಯುವಕರ ಮತ್ತು ಶ್ರೀಸಾಮಾನ್ಯರ ಬದುಕು ಸಂಕಷ್ಟಕ್ಕೀಡಾಗಿದೆ. ಬಿಜೆಪಿಯ ಜನವಿರೋಧಿ ನೀತಿಗೆ ಶಾಶ್ವತವಾಗಿ ತಡೆಯೊಡ್ಡುವ ಅಗತ್ಯವಿದೆ ಎಂದು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

  ಬಿಜೆಪಿ ಶ್ರೀಮಂತರ ಕೈಗೊಂಬೆಯಂತೆ ಆಡಳಿತ ನಡೆಸುತ್ತಿದ್ದು, ಒಂದು ದೇಶ ಒಂದು ಚುನಾವಣೆಯ ಹಿಡನ್ ಅಜೆಂಡಾ ಹೊಂದಿದೆ. ಬಡವರ ವಿರೋಧಿಯಾಗಿರುವ, ಜಾತಿ, ಧರ್ಮದ ಹೆಸರಿನಲ್ಲಿ ದೇಶದ ಏಕತೆಗೆ ಸಂಕಷ್ಟ ತಂದೊಡ್ಡಿರುವ ಬಿಜೆಪಿಯನ್ನು ಕಿತ್ತೊಗೆಯಬೇಕಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  123 ವರ್ಷಗಳ ಹಿಂದೆ ಕಂಡಿದ್ದ ಭೀಕರ ಬರಗಾಲ ರಾಜ್ಯಕ್ಕೆ ಮತ್ತೆ ಎದುರಾಗಿದೆ. 223 ತಾಲೂಕುಗಳ ಜನತೆ ತೀವ್ರ ಸಂಕಷ್ಟದಲ್ಲಿದ್ದರೂ ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ತಾರತಮ್ಯ ಮಾಡುತ್ತಿದೆ. ಬರ ಪರಿಹಾರದ ಬಗ್ಗೆ ಸಮೀಕ್ಷೆ ನಡೆಸಿರುವ ಕೇಂದ್ರ ಪರಿಶೀಲನಾ ಸಮಿತಿ 39,740 ಕೋಟಿ ರೂ. ಹಾನಿಯ ವರದಿ ನೀಡಿದೆ. ರಾಜ್ಯ ಸರ್ಕಾರ ಕೇಳಿರುವ 18,300 ಕೋಟಿ ರೂ. ಬದಲಿಗೆ ಕೇಂದ್ರ ಸರ್ಕಾರ ಕೇವಲ 3,500 ಕೋಟಿ ರೂ. ಅನುದಾನ ನೀಡಿದೆ. ಮತದಾರರು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದರು.
  ಮಹಾರಾಷ್ಟ್ರದ ನಂತರ ಅತೀ ಹೆಚ್ಚು ತೆರಿಗೆ ನೀಡುವ ನಮಗೆ ಕೇವಲ ಶೇ. 12.90 ಅನುದಾನ ನೀಡಿ ಗುಜರಾತ್, ಉತ್ತರಪ್ರದೇಶ ಮುಂತಾದ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಸಂಗ್ರಹವಾಗುವ ತೆರಿಗೆಯಲ್ಲಿ ಶೇ.500ರಷ್ಟು ಅನುದಾನ ನೀಡಲಾಗಿದೆ. ತೆರಿಗೆ ಹಣ ವಾಪಸ್ ಪಡೆಯಲು ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯಾಯಾಲಯದ ಮೆಟ್ಟಿಲು ಏರಬೇಕಾದ ಸನ್ನಿವೇಶ ನಿರ್ಮಿಸಿತು. ಮೋದಿ ಅವರನ್ನು ಹಾಡಿಹೊಗಳುವ ರಾಜ್ಯದ ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
  ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಂತೆ ನಡೆದುಕೊಂಡಿದೆ. ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರ. ಅಕ್ರಮವಾಗಿ ಸಂಗ್ರಹಿಸಲಾದ ಪಿಎಂ ಕೇರ್ ಫಂಡ್‌ನ ಸಾವಿರಾರು ಕೋಟಿ ರೂ. ಹಣವನ್ನು ವೆಚ್ಚ ಮಾಡಿ ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲಲು ಹವಣಿಸುತ್ತಿದೆ. ಆದರೆ ಜನತೆ ಜಾಗೃತರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ 17ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
  ಮಾಜಿ ಸಚಿವ ಕಿಮ್ಮನೆ ರತ್ನಾಕರ್, ತಿಪಟೂರು ಶಾಸಕ ಷಡಾಕ್ಷರಿ, ಮಾಜಿ ಶಾಸಕ ಕಡಿದಾಳು ದಿವಾಕರ್, ಕೆಸ್ತೂರು ಮಂಜುನಾಥ್, ಅಮರನಾಥ ಶೆಟ್ಟಿ, ಗೀತಾ ರಮೇಶ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts