More

    ಖಾದಿ, ಹತ್ತಿ ಉತ್ಪನ್ನಗಳ ಕೈಗಾರಿಕೆ ಆರಂಭಿಸಿ

    ಗುಂಡ್ಲುಪೇಟೆ: ಜಿಲ್ಲೆಯಲ್ಲಿ ಖಾದಿ ಮತ್ತು ಹತ್ತಿ ಉತ್ಪನ್ನಗಳ ಕೈಗಾರಿಕೆ ಆರಂಭಿಸಿ ಬೆಳೆಗೆ ಉತ್ತಮ ಬೆಲೆ ಹಾಗೂ ಯುವಕರಿಗೆ ಉದ್ಯೋಗ ದೊರಕುವಂತೆ ಮಾಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದರು. ಬೇಗೂರಿನಲ್ಲಿ ಹತ್ತಿ ಮಾರುಕಟ್ಟೆ ಸ್ಥಾಪನೆಯಿಂದ ರೈತರಿಗೆ ಯಾವುದೇ ಉಪಯೋಗವಿಲ್ಲ. ಈಗಾಗಲೇ ಪಟ್ಟಣ ಹಾಗೂ ತೆರಕಣಾಂಬಿಯ ಮಾರುಕಟ್ಟೆಯಲ್ಲಿ ರೈತರಿಗೆ ಕನಿಷ್ಠ ಮೂಲಸೌಕರ್ಯವೂ ಇಲ್ಲ. ಬಿಳಿಚೀಟಿಯನ್ನು ಕೊಡುತ್ತಾ ರಾಜಾರೋಷವಾಗಿ ಶೇ.10 ಕಮಿಷನ್ ತೆಗೆದುಕೊಳ್ಳುವ ದಂಧೆ ನಿರಾತಂಕವಾಗಿ ನಡೆಯುತ್ತಿದೆ. ಈ ಬಗ್ಗೆ ಹಲವಾರು ಬಾರಿ ಶಾಸಕರ ಗಮನಕ್ಕೆ ತಂದಿದ್ದರೂ ಯಾವುದೇ ಉಪಯೋಗವಾಗಿಲ್ಲ. ಈಗ ಹತ್ತಿ ಮಾರುಕಟ್ಟೆ ಆರಂಭಿಸಿದರೂ ಇದೇ ಮುಂದುವರಿಯುತ್ತದೆ ಎಂದು ಅಳಲು ತೋಡಿಕೊಂಡರು.

    ಕಳೆದ ವರ್ಷ ಗಣಿ ದುರಂತ ಸಂಭವಿಸಿದ ಗುಮ್ಮಕಲ್ಲುಗುಡ್ಡದ ಪ್ರಕರಣ ಮುಚ್ಚಿ ಹಾಕಿ ಮತ್ತೆ ಗಣಿಗಾರಿಕೆ ಆರಂಭಿಸುವ ಯತ್ನ ನಡೆಸಲಾಗುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ತೆರಕಣಾಂಬಿ ಹಾಗೂ ಗುಂಡ್ಲುಪೇಟೆ ಮಾರುಕಟ್ಟೆಯಲ್ಲಿ ಬಿಳಿಚೀಟಿ ವ್ಯವಹಾರ ನಡೆಸುವವರ ಲೈಸೆನ್ಸ್ ರದ್ದುಗೊಳಿಸಲು ಸೂಚಿಸಲಾಗಿದೆ. ಗಣಿ ದುರಂತ ಬಗ್ಗೆ ನನಗೇನೂ ಹೆಚ್ಚಿನ ಮಾಹಿತಿಯಿಲ್ಲ. ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರಿಸಿದರು. ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಮಿತಿಯ ಡಾ.ಗುರುಪ್ರಸಾದ್, ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಕುಂದಕೆರೆ ಸಂಪತ್ತು, ತಾಲೂಕು ಅಧ್ಯಕ್ಷ ಹೊಸೂರು ಮಹೇಶ್ ಹಾಗೂ ಹಲವು ರೈತ ಮುಖಂಡರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts