More

    ಕುಡಿವ ನೀರಿನ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆ ಹಾಳು

    ಗುಂಡ್ಲುಪೇಟೆ: ಕಳೆದ ಎರಡು ತಿಂಗಳಿನಿಂದ ಪಟ್ಟಣದಲ್ಲಿ ಪೈಪ್‌ಲೈನ್ ಅಳವಡಿಕೆಗಾಗಿ ಎಲ್ಲ ರಸ್ತೆಗಳನ್ನು ಅಡ್ಡಾದಿಡ್ಡಿ ಅಗೆದು ಹಾಕಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದಶಕಗಳಿಂದ ಗುಂಡಿ ಬಿದ್ದಿದ್ದ ಪಟ್ಟಣದ ಎಲ್ಲ ರಸ್ತೆಗಳಿಗೂ ಕಳೆದ ವರ್ಷವಷ್ಟೇ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಡಾಂಬರು ಹಾಕಲಾಗಿತ್ತು. ಪ್ರಮುಖ ವಾಣಿಜ್ಯ ಮಾರ್ಗವಾದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಗೊಳಿಸಿ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗಿತ್ತು.

    ಆದರೀಗ ಪುರಸಭೆ ವತಿಯಿಂದ ಪಟ್ಟಣದ ಎಲ್ಲ ಮನೆಗಳಿಗೆ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ಅಳವಡಿಸಲು ರಸ್ತೆಗಳನ್ನು ಮನಬಂದಂತೆ ಅಗೆಯಲಾಗಿದೆ. ಕೆಲವು ಕಡೆಗಳಲ್ಲಿ ಪೈಪ್ ಅಳವಡಿಸಿದ ನಂತರ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಹಾಗೆಯೇ ಬಿಡಲಾಗಿದ್ದು, ನಾಗರಿಕರು ಕಿರಿಕಿರಿ ಅನುಭವಿಸುವಂತಾಗಿದೆ.

    ಎರಡು ತಿಂಗಳ ಹಿಂದೆಯೇ ಕಾಮಗಾರಿ ಆರಂಭಿಸಿದ್ದರೂ ಇನ್ನೂ ಪೂರ್ಣಗೊಳಿಸಿಲ್ಲ. ಎಲ್ಲ ಬಡಾವಣೆಗಳ ಕಿರಿದಾದ ರಸ್ತೆಗಳ ಮಧ್ಯೆ ಹಳ್ಳ ತೆಗೆದು ಸರಿಯಾಗಿ ಮುಚ್ಚದ ಪರಿಣಾಮ ರಸ್ತೆಗಳ ಉದ್ದಕ್ಕೂ ದಿಬ್ಬಗಳು ಹಾಗೂ ಗುಂಡಿಗಳಾಗಿವೆ. ರಸ್ತೆಗಳ ತಿರುವುಗಳಲ್ಲಿ ಇನ್ನೂ ಗುಂಡಿ ಮುಚ್ಚದೆ ಬಿಟ್ಟಿರುವುದರಿಂದ ವಾಹನ ಸವಾರರು ಆತಂಕದಿಂದಲೇ ಸಂಚರಿಸುವಂತಾಗಿದೆ. ಪಾದಚಾರಿಗಳೂ ನಡೆದು ಹೋಗಲು ಸಾಧ್ಯವಾಗದಂತಾಗಿದೆ. ವರ್ಷ ತುಂಬುವ ಮೊದಲೇ ಎಲ್ಲ ರಸ್ತೆಗಳನ್ನೂ ಅಗೆದು ಗುಂಡ್ಲುಪೇಟೆಯನ್ನು ಅಕ್ಷರ ಸಹ ‘ಗುಂಡಿಪೇಟೆ’ ಮಾಡಿದ್ದಾರೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

    ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 5 ಕೋಟಿ ರೂ. ಅನುದಾನದಲ್ಲಿ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಗೊಳಿಸಿ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗಿತ್ತು. ಸುಮಾರು 20-30 ವರ್ಷಗಳಿಂದ ಹದೆಗೆಟ್ಟಿದ್ದ ರಸ್ತೆಗಳಿಗೆ ಡಾಂಬರು ಹಾಕಲಾಗಿತ್ತು. ಆದರೀಗ ಪೈಪ್‌ಲೈನ್ ಅಳವಡಿಕೆಗಾಗಿ ತೆಗೆದ ಹಳ್ಳಗಳನ್ನು ಮುಚ್ಚದ ಪರಿಣಾಮ ಯಾವುದೇ ರಸ್ತೆಗಳಲ್ಲೂ ಕಾಲಿಡದಂತಾಗಿದೆ.
    ಪಿ.ಗಿರೀಶ್, ನಿಕಟಪೂರ್ವ ಅಧ್ಯಕ್ಷ, ಪುರಸಭೆ

    ಪಟ್ಟಣದಲ್ಲಿ ಮನೆ ಮನೆಗಳಿಗೆ ನಲ್ಲಿ ಸಂಪರ್ಕ ನೀಡುವ ಪೈಪ್‌ಲೈನ್ ಅಳವಡಿಸಲು 110 ಕಿಲೋಮೀಟರ್ ಉದ್ದಕ್ಕೆ ಗುಂಡಿ ತೆಗೆಯಲಾಗಿದೆ. ಸಂಪೂರ್ಣ ಕಾಮಗಾರಿ ಮುಗಿಯಲು ಇನ್ನೂ ನಾಲ್ಕು ತಿಂಗಳು ಕಾಲಾವಕಾಶ ಬೇಕಿದ್ದು, ನಂತರ ಪ್ರಾಯೋಗಿಕ ಪರೀಕ್ಷೆ ನಡೆಸಿ ನೀರಿನ ಹರಿವು ಪರಿಶೀಲಿದ ನಂತರ ಹಳ್ಳಗಳನ್ನು ಮುಚ್ಚಲಾಗುವುದು.
    ಚೈತ್ರಾ, ಜಲ ಮಂಡಳಿಯ ಸಹಾಯಕ ಇಂಜಿನಿಯರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts